ಆತ್ಮಹತ್ಯೆವೀಡೀಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಬೇಕು

sucide
Published on

ಬೆಂಗಳೂರು: ಮನುಷ್ಯನ ಮನಸ್ಸು ಬಹಳ ಸೂಕ್ಷ್ಮ. ಅಪಮಾನ, ಕಿರಿಕಿರಿ, ಒತ್ತಡ, ತಾತ್ಸಾರ ಇತ್ಯಾದಿ ಕಾರಣಕ್ಕೆ ಖಿನ್ನತೆ ಅಥವಾ ಸಂಕುಚಿತಗೊಳ್ಳುವ ಮನಸ್ಸು ಆತ್ಮಹತ್ಯೆಯಂತಹ ಗಂಭೀರ ನಿರ್ಧಾರಕ್ಕೆ ಮುಂದಾಗುತ್ತದೆ. ಅದಕ್ಕೆ ಪ್ರೇರಣೆ ನೀಡುವಂತಹ ಸಾಮಾಜಿಕ ಜಾಲತಾಣಗಳಿಂದ ಕಾಪಿ ಕ್ಯಾಟ್ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತಹ ಸಂದರ್ಭದಲ್ಲಿ ಆಪ್ತ ಸಲಹೆ, ಸೂಕ್ತ ಮಾಹಿತಿ ದೊರೆತರೆ ಆತ್ಮಹತ್ಯೆಯನ್ನು ತಪ್ಪಿಸಲು ಸಾಧ್ಯ ಎನ್ನುತ್ತಾರೆ ಅಭಯ ಆಸ್ಪತ್ರೆಯ ಮಾನಸಿಕ ತಜ್ಞ ಡಾ.ಎ.ಜಗದೀಶ್. ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನ(ಸೆ.10)ದ ಹಿನ್ನೆಲೆಯಲ್ಲಿ ಡಾ.ಜಗದೀಶ್ ಅವರೊಂದಿಗೆ ನಡೆಸಿದ ಸಂವಾದದ ಮಾಹಿತಿ ಇಲ್ಲಿದೆ.

ಕಾಪಿ ಕ್ಯಾಟ್ ಪರಿಕಲ್ಪನೆ ಸಾಮಾಜಿಕ ಜಾಲತಾಣದಿಂದ ಎಲ್ಲ ಕ್ಷೇತ್ರದಲ್ಲೂ ಹೆಚ್ಚಾಗುತ್ತಿದೆ. ಜೀವಕ್ಕೆ ಕುತ್ತು ತರುವ ಆತ್ಮಹತ್ಯೆಯಂತಹ ನಿರ್ಧಾರದಲ್ಲೂ ಕಾಪಿ ಕ್ಯಾಟ್ ಪರಿಕಲ್ಪನೆ ಅನುಸರಣೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಯುವ ಸಮುದಾಯ ಪ್ರತಿಯೊಂದು ವಿಷಯದಲ್ಲೂ ಸ್ವಂತಿಕೆಯನ್ನು ಕಳೆದುಕೊಂಡಿದ್ದು, ಎಲ್ಲವನ್ನು ಸಾಮಾಜಿಕ ಜಾಲತಾಣವನ್ನು ನೋಡಿ ಕಲಿಯುವ ರೂಢಿ ಮಾಡಿಕೊಂಡಿದೆ. ಆತ್ಮಹತ್ಯೆಯಂತಹ ದುರ್ಘಟನೆಯ ಹಿಂದೆಯೂ ಕೂಡಾ ಕಾಪಿ ಕ್ಯಾಟ್ ಸಂಸ್ಕೃತಿ ಪ್ರಭಾವ ಬೀರುತ್ತಿರುವುದು ವಿಷಾದಕರ ಸಂಗತಿ.

ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರದಲ್ಲಿ ವಿದ್ಯೆಯೇ ಎಲ್ಲಕ್ಕಿಂತ ದೊಡ್ಡ ಆಸ್ತಿ ಎಂದು ನಂಬುತ್ತಾರೆ. ಈ ಕಾರಣಕ್ಕಾಗಿಯೇ ವಿದ್ಯಾರ್ಥಿಗಳ ಬೌದ್ಧಿಕ ಸಾವರ್ಥ್ಯಕ್ಕಿಂತ ಪೋಷಕರ ಪ್ರಭಾವ ಬಳಸಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸೇರಿಸುತ್ತಾರೆ. ವಿದ್ಯಾರ್ಥಿಯು ಅಲ್ಲಿನ ನಿರೀಕ್ಷೆಗೆ ತಕ್ಕಷ್ಟು ಸಾಧನೆ ಮಾಡಲು ಸಾಧ್ಯವಾಗದೆ, ಪೋಷಕರು ಮುಂದೆ ಹೇಳಿಕೊಳ್ಳುವುದಕ್ಕೂ ಆಗದೆ ಕೀಳರಿಮೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಇದಕ್ಕೆ ವೈದ್ಯಕೀಯ, ಇಂಜಿನಿಯರಿಂಗ್ ನಂತರ ವೃತ್ತಿಪರ ವಿದ್ಯಾರ್ಥಿಗಳು ಕೂಡಾ ಹೊರತಲ್ಲ. ಅಂತಹ ಯುವ ಸಮುದಾಯಕ್ಕೆ ಸಾಮಾಜಿಕ ಜಾಲತಾಣ ಉತ್ತಮ ಮಾಹಿತಿ ನೀಡುವ ಹೆಬ್ಬಾಗಿಲಾಗಿದ್ದು, ಅದನ್ನು ನೋಡಿ ಕಾಪಿ ಕ್ಯಾಟ್ ಮಾದರಿಯನ್ನನುಸರಿಸಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಆಸ್ಟ್ರೇಲಿಯಾ ದೇಶದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ, ಕಾಪಿ ಕ್ಯಾಟ್ ಮಾದರಿಗೆ ಪೂರಕವಾಗುವ ವೀಡಿಯೋಗಳಿರುವ ವೆಬ್‌ಸೈಟ್, ಮತ್ತಿತರ ಪೋರ್ಟಲ್‌ಗಳನ್ನು ನಿಷೇಧಿಸುವ ಮೂಲಕ ಅಲ್ಲಿನ ಆತ್ಮಹತ್ಯೆ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡಿದೆ. ಭಾರತದಲ್ಲೂ ಕೂಡಾ ಈ ನಿಟ್ಟಿನಲ್ಲಿ ಚಿಂತನೆ ಮತ್ತು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ಜೊತೆಗೆ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಮಾಧ್ಯಮಗಳ ಪಾತ್ರ ಕೂಡಾ ಪ್ರಮುಖವಾಗಿದ್ದು, ಆತ್ಮಹತ್ಯೆ ಪ್ರಕರಣಗಳ ವರದಿ ಮಾಡುವಾಗ ಆತ್ಮಹತ್ಯೆಗೆ ಕಾರಣವನ್ನು ತಿಳಿಸಬಹುದೇ ವಿನಃ ಆತ್ಮಹತ್ಯೆಯ ವಿಧಾನವನ್ನು ವಿವರಿಸಬಾರದು. ಈ ಬಗ್ಗೆ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಹಾಕಿಕೊಳ್ಳುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net