ಪ್ರತ್ಯೇಕ ಬಸ್ ಪಥಕ್ಕೆ ಆಗ್ರಹ; ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆ ಅಹವಾಲು

bus
Published on

ಬೆಂಗಳೂರು: ಪ್ರತ್ಯೇಕ ಬಸ್ಸು ಪಥ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ, ನಗರದ ಮಹಿಳಾ ಗಾರ್ಮೆಂಟ್ ನೌಕರರ ಸಮುದಾಯ ಮತ್ತು ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ಅಹವಾಲು ಸಲ್ಲಿಸಿದೆ.

ನಗರದ ಸಮಗ್ರ ಸಂಚಾರ ಯೋಜನೆ (ಸಿಎಂಪಿ)ಯಂತೆ 11 ಬಸ್ ಆದ್ಯತಾ ಪಥಗಳನ್ನು ಕಾರ್ಯಗತಗೊಳಿಸಬೇಕು ಮತ್ತು ರಿಂಗ್ ರಸ್ತೆಯಲ್ಲಿದ್ದ ಆದ್ಯತಾ ಪಥವನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಲಾಗಿದ್ದು, ಅಹವಾಲು ಪತ್ರದಲ್ಲಿ ಸುಮಾರು 29 ಸಾವಿರ ಸಾರ್ವಜನಿಕರ ಸಹಿ ಸಂಗ್ರಹಿಸಲಾಗಿದೆ.

ಸದಾ ಸಂಚಾರ ದಟ್ಟಣೆಯಿಂದ ಕೂಡಿದ ತುಮಕೂರು ರಸ್ತೆಯ ನಾಗಸಂದ್ರದಿಂದ ಕೆ.ಆರ್.ಮಾರುಕಟ್ಟೆಗೆ ಬಸ್ಸಿನಲ್ಲಿ ಸುಮಾರು ಎರಡು ಗಂಟೆ ಅವಧಿ ತಗಲುತ್ತಿದೆ. ಅದೇ ಪ್ರತ್ಯೇಕ ಬಸ್ ಮಾರ್ಗ ಮೀಸಲಿಟ್ಟರೆ ಕಡಿಮೆ ಸಮಯದಲ್ಲಿ ತಲುಪಬಹುದು ಎಂದು ಗಾರ್ಮೆಂಟ್ಸ್ ಕಾರ್ಖಾನೆ ಸಿಬ್ಬಂದಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿಯೋಜನೆಯಿಂದ ಮಹಿಳೆಯರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಪ್ರಮಾಣ ಹೆಚ್ಚಾಗಿದೆ. ಆದರೆ ಪ್ರಸ್ತಾಪಿತ ಪ್ರತ್ಯೇಕ ಬಸ್ ಲೇನ್ ಇಲ್ಲದಿರುವುದರಿಂದ ಮಹಿಳೆಯರು ಉದ್ಯೋಗಕ್ಕೆ ಹೋಗುವುದು ಬಹಳ ದುಸ್ತರವಾಗಿದೆ ಎಂದು ಸಂಘಟನೆಯ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಗರದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಬಸ್ಸುಗಳೊಂದಿಗೆ 15 ಸಾವಿರ ಹೆಚ್ಚುವರಿ ಬಸ್ಸುಗಳ ಬೇಡಿಕೆಯೊಂದಿಗೆ, ಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಬೇಕೆಂದು ಗ್ರೀನ್‌ಪೀಸ್ ಇಂಡಿಯಾ ಸಂಘಟನೆಯ ಎಂ.ಎಸ್.ಶರತ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net