

ಬೆಂಗಳೂರು: ತಂತ್ರಜ್ಞಾನ ಜಗತ್ತಿನಲ್ಲಿ ಯಾವೊಬ್ಬ ಅಪರಾಧಿಯೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂಬುವುದು ಮತ್ತೆ ಮತ್ತೆ ಪ್ರೂವ್ ಆಗುತ್ತಲೇ ಇದೆ. ಹೌದು, ಅಪರಾಧಿಗಳನ್ನು ಪತ್ತೆ ಹಚ್ಚಲು ಹೊಸ ಹೊಸ ತಂತ್ರಜ್ಞಾನ ಸೌಲಭ್ಯಗಳು ಇಂದು ಪೊಲೀಸರ ಬಳಿಯಿವೆ. ಹೀಗಾಗಿ ಯಾವುದೇ ಮೂಲೆಯಲ್ಲಿ ಅಪರಾಧ ಮಾಡಿದರೂ ಆರೋಪಿಯನ್ನು ಪತ್ತೆ ಹಚ್ಚಬಹುದು. ಇದೀಗ ಇಂತಹದೇ ಒಂದು ವಿಶೇಷ ತಂತ್ರಜ್ಞಾನ ಮಾದರಿ ಬಳಸಿಕೊಂಡು ಬೆಂಗಳೂರಿನ ಪೊಲೀಸರು ವಾಹನ ಕಳ್ಳನೊಬ್ಬನನ್ನು ಪತ್ತೆ ಹಚ್ಚಿದ್ದಾರೆ.
ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟಿ ಕಳ್ಳತನ ನಡೆಸಿದ್ದ. ಎಂದಿನಂತೆ ಉಪ್ಪಾರ ಪೇಟೆ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಧನ್ವಂತರಿ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿ ಇದೇ ಮಾರ್ಗವಾಗಿ ಬಂದಿದ್ದಾನೆ. ಪೊಲೀಸರು ತಪಾಸಣೆ ನಡೆಸಿದಾಗ ಈತನ ಮೇಲೆ 13/ 08/22 ರಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಾಗಿರುವುದು ಪತ್ತೆಯಾಗಿದೆ.
ತಪಾಸಣೆ ನಡೆಸಿದಾಗ ಈತನ ಮೇಲೆ ದೂರು ದಾಖಲಾಗಿರುವುದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸಂಚಾರ ಪೊಲೀಸರು ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಏನಿದು ANPR ಕ್ಯಾಮರಾ?
ಸಂಚಾರ ಪೊಲೀಸರಿಗೆ ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿರುವುದು ANPR (Automatic Number Plate Recognition) ಕ್ಯಾಮರಾ. ಈ ಕ್ಯಾಮರಾ ಪೊಲೀಸರಿಗೆ ಅಪರಾಧಿಗಳ ಚಲನವಲನದತ್ತ ಕಣ್ಣಿಡಲು ಸಹಾಯಕವಾಗಿದೆ. ಕ್ಯಾಮರಾವನ್ನು ವಾಹದ ನಂ. ಪ್ಲೇಟ್ಗೆ ಸ್ಕ್ಯಾನ್ ಮಾಡುತ್ತಿದ್ದಂತೆ ಸವಿವರವಾದ ಮಾಹಿತಿ ಲಭಿಸುತ್ತದೆ. ಇದು ಅಪರಾಧ ಚಟುವಟಿಕೆ ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸ್ಕ್ಯಾನರ್ನ ಸಹಾಯದಿಂದ ಅಪರಾಧಿಗಳನ್ನು ಸುಲಭವಾಗಿ ಪತ್ತೆ ಹಚ್ಚುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಸುಧಾರಿತ ಕ್ಯಾಮರಾವನ್ನು ಜನ ಸಂದಣಿ ಹೆಚ್ಚಿರುವ, ವಾಹನ ಟ್ರ್ಯಾಕಿಂಗ್ ಅಗತ್ಯವಿರುವ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ.