ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಮತಾಂಧ ರಾಕ್ಷಸರಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ: ಆರ್‌.ಅಶೋಕ್‌

ಆರ್ ಅಶೋಕ್​
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸಮಾಜ ಘಾತುಕ ಶಕ್ತಿಗಳಿಗೆ, ಮತಾಂಧ ರಾಕ್ಷಸರಿಗೆ ರೆಕ್ಕೆ ಪುಕ್ಕ ಬಂದಂತಾಗಿದ್ದು, ಸಮಾಜದಲ್ಲಿ ಶಾಂತಿ, ಸುರಕ್ಷತೆ, ಕಾನೂನಿನ ಭಯ ಇಲ್ಲದ ಪರಿಸ್ಥಿತಿ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ತಮ್ಮ ಎಕ್ಸ್​ ಖಾತೆ ಮೂಲಕ ಟ್ಟೀಟ್​ ಮಾಡಿರುವ ಆರ್. ಅಶೋಕ್​ ಅವರು, NCRB ವರದಿಯ ಪ್ರಕಾರ, ಕಳೆದ ವರ್ಷ ರಾಜ್ಯದಲ್ಲಿ 1,80,742 ಅಪರಾಧ ಪ್ರಕರಣಗಳು ದಾಖಲಾಗಿದೆ. ಹಿರಿಯ ನಾಗರಿಕರ ವಿರುದ್ಧ ನಡೆದ ಅಪರಾಧಿ ಚಟುವಟಿಕೆ 50 ಸಾವಿರದಷ್ಟು ಹೆಚ್ಚಾಗಿದೆ. ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗೆ ಹೆಸರುವಾಸಿಯಾಗಿರುವ ಕರ್ನಾಟಕ ಈಗ ಅಪರಾಧದ ನಾಡಾಗಿ ಕುಖ್ಯಾತಿ ಪಡೆಯುತ್ತಿದೆ ಎಂದು ಟೀಕಿಸಿದರು.

ಬೆಂಗಳೂರು ಕ್ರೈಂ ಸಿಟಿ ಆಗುತ್ತಿದೆ: ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಬೆಂಗಳೂರು ಈಗ ಅಪರಾಧಗಳ ರಾಜಧಾನಿ, ಸೈಬರ್ ಅಪಾರಾಧಗಳ ಕೇಂದ್ರ ಎಂಬ ಕುಖ್ಯಾತಿಗೆ ಒಳಗಾಗಿದೆ. ಒಂದೇ ವರ್ಷದಲ್ಲಿ 432 ಕೋಟಿ ರೂ.ನಷ್ಟು ಸೈಬರ್ ವಂಚನೆ ನಡೆದಿದೆ. ಕೆಎಫ್ ಡಿ ಮೊದಲಾದ ಸಂಘಟನೆಗಳ ಮೇಲಿದ್ದ ಪ್ರಕರಣ ಹಿಂಪಡೆದಿರುವುದರಿಂದ ದುಷ್ಕರ್ಮಿಗಳು ರಾಜಾರೋಷವಾಗಿ ಓಡಾಡುತ್ತಿದ್ದು, ಬೆಂಗಳೂರು ಈಗ ಸೇಫ್ ಸಿಟಿ ಬದಲು ಕ್ರೈಂ ಸಿಟಿ ಆಗುತ್ತಿದೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾಪುರುಷರ ಜಯಂತಿ, ದೊಡ್ಡ ಸಭೆ ಸಮಾರಂಭಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಕಟೌಟ್ ಹಾಕುತ್ತಾರೆ. ಆದರೆ ಮೊದಲ ಬಾರಿಗೆ ಕೋಲಾರದಲ್ಲಿ ಸ್ಟೀಲ್ ನಲ್ಲಿ ತಯಾರಿಸಿದ 40 ಅಡಿ ಉದ್ದದ ಲಾಂಗು, ಮಚ್ಚು ಹಾಕಲಾಗಿತ್ತು. ರಾಜ್ಯದಲ್ಲಿ ಸ್ಥಾಪನೆಯಾಗುವ ಗೂಂಡಾ ರಾಜ್ಯಕ್ಕೆ ಇದಕ್ಕಿಂತ ಇನ್ನೇನಾದರೂ ಸಾಕ್ಷಿ ಬೇಕಾ? ಎಂದು ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದರು.

ರಾಜ್ಯ ಸ್ಲೀಪರ್ ಸೆಲ್ ಗಳ ಕೇಂದ್ರವಾಗಿರುವುದರ ಲಕ್ಷಣ: ಎನ್ಐಎ ತಂಡ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎಂಟು ಶಂಕಿತ ಉಗ್ರರನ್ನು ಪತ್ತೆ ಮಾಡಿದ್ದು, ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ಪತ್ತೆಯಾಗಿದೆ. ಬಳ್ಳಾರಿಯಲ್ಲಿ ಬಂಧನಕ್ಕೊಳಗಾದ ಮಹಮ್ಮದ್ ಸುಲೇಮಾನ್ ಕಿಂಗ್ ಪಿನ್ ಆಗಿದ್ದ. ಈತ ಅಮಾಯಕರನ್ನು ಧರ್ಮ ಹಾಗೂ ಹಣದ ಆಮಿಷಕ್ಕೊಳಪಡಿಸುವ ತಜ್ಞನಾಗಿದ್ದ. ಬೆಂಗಳೂರಿನ ಪುಲಕೇಶಿನಗರದಲ್ಲೂ ಶಂಕಿತರನ್ನು ಬಂಧಿಸಲಾಗಿದೆ. ಇವರೆಲ್ಲರೂ ಐಸಿಸ್ ಚಿಂತನೆಗಳನ್ನು ಹೊಂದಿರುವವರು. ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿರುವ ಅನುಭವ ಇದ್ದು, ಇವೆಲ್ಲಾ ರಾಜ್ಯ ಸ್ಲೀಪರ್ ಸೆಲ್ ಗಳ ಕೇಂದ್ರವಾಗಿರುವುದರ ಲಕ್ಷಣಗಳು ಎಂದು ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ನಡೆಸಿದಾಗ ಅವರ ಮೇಲೆ ಹಲ್ಲೆಯಾಗಿರುವುದು, ಮಾಜಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಬೆದರಿಕೆ ಬಂದಿರುವುದು ಪುಂಡರಿಗೆ, ರೌಡಿಗಳಿಗೆ ಕಾನೂನಿನ ಭಯ ಇಲ್ಲದಿರುವುದಕ್ಕೆ ಉದಾಹರಣೆ. ರಾಜ್ಯದಲ್ಲಿ ಶಾಸಕರು, ಮಾಜಿ ಸಚಿವರಿಗೆ ಸುರಕ್ಷತೆ ಇಲ್ಲದಿದ್ದರೆ ಇನ್ನೂ ಸಾಮಾನ್ಯ ಜನರ ಗತಿ ಏನು? ಎಂದು ಹೇಳಿದ್ದಾರೆ.

ವರ್ಗಾವಣೆ ದಂಧೆಯಿಂದಾಗಿ ಪೊಲೀಸರು ನೈತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಗುಪ್ತಚರ ದಳ ಕೆಲಸ ಮಾಡುತ್ತಿದೆಯೋ, ಸತ್ತಿದೆಯೋ ಅಥವಾ ಐಸಿಯುನಲ್ಲಿದೆಯೋ ಎಂದು ಗೊತ್ತಾಗುತ್ತಿಲ್ಲ. ಚಿಕ್ಕಮಗಳೂರಿನಲ್ಲಿ ಗಲಾಟೆಯಾದಾಗ ಪೊಲೀಸರೇ ಪ್ರತಿಭಟನೆಗೆ ಕುಳಿತಿದ್ದರು. ಪೊಲೀಸ್ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ಗುಪ್ತಚರ ದಳಕ್ಕೆ ತಿಳಿಯುತ್ತಿಲ್ಲ. ಪ್ರತಿಭಟನೆ ಮಾಡಿದವರ ವಿರುದ್ಧವೂ ಕ್ರಮ ವಹಿಸಿಲ್ಲ ಎಂದಿದ್ದಾರೆ.

ಉಸ್ತುವಾರಿ ಸಚಿವರು ಭೇಟಿ ನೀಡಿರಲಿಲ್ಲ: ಬೆಳಗಾವಿಯ ಅಧಿವೇಶನ ನಡೆಯುತ್ತಿರುವಾಗಲೇ, ಮುಖ್ಯಮಂತ್ರಿ ಸಹಿತ ಇಡೀ ಮಂತ್ರಿ ಮಂಡಲ ಬೆಳಗಾವಿಯಲ್ಲಿ ಇದ್ದಾಗಲೇ, ವಂಟಮುರಿಯಲ್ಲಿ ನಡೆದ ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಇದಕ್ಕೆ ನ್ಯಾಯಾಲಯ ಕೂಡ ಖೇದ ವ್ಯಕ್ತಪಡಿಸಿದೆ. ಮನೆಗೆ ನುಗ್ಗಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಹೊಡೆದರೂ ಅದು ಪೊಲೀಸರಿಗೆ ತಿಳಿಯಲಿಲ್ಲ. ಸಿನಿಮಾದಂತೆಯೇ ಎಲ್ಲ ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ 13 ಜನರನ್ನು ಬಂಧಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿರಲಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಬದ್ರರ್ಸ್ ಎಂದಿದ್ದರು: ಹಾವೇರಿಯಲ್ಲಿ ಮುಸ್ಲಿಂ ಮಹಿಳೆ ಹಾಗೂ ಪುರುಷನನ್ನು ಹಿಂಬಾಲಿಸಿದ ಗ್ಯಾಂಗ್ ಅಲ್ಲಿಗೆ ದಾಳಿ ಮಾಡಿ, ಮಹಿಳೆಯನ್ನು ಅಪಹರಿಸಿ ಏಳು ಮಂದಿ ಅತ್ಯಾಚಾರ ಎಸಗಿದ್ದಾರೆ. ನಂತರ ಅವರನ್ನು ಬಸ್ಸು ಹತ್ತಿಸಿ ಕಳುಹಿಸಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಏನೂ ಗೊತ್ತಾಗಲಿಲ್ಲ. ನಂತರ ಪೊಲೀಸರು ತನಿಖೆ ನಡೆಸದೆ 500 ರೂಪಾಯಿಗೆ ಕಾಂಪ್ರಮೈಸ್ ಮಾಡಿದ್ದಾರೆ. ಮಾಧ್ಯಮದಲ್ಲಿ ವಿವಾದವಾದಾಗ ಪೊಲೀಸರು ಸಾಮೂಹಿಕ ಅತ್ಯಾಚಾರ ಎಂದು ಪ್ರಕರಣ ದಾಖಲಿಸಿದ್ದಾರೆ. ದೂರು ಹಿಂಪಡೆಯಲು ಹಣದ ಆಮಿಷ ಒಡ್ಡಲಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ನಡೆದಾಗ ಅವರು ನಮ್ಮ ಬದ್ರರ್ಸ್ ಎಂದರು. ಹಾಗಾದರೆ ಅತ್ಯಾಚಾರಕ್ಕೊಳಗಾದ ಈ ಸಿಸ್ಟರ್ ಕಥೆ ಏನು?

ಅಯೋಧ್ಯೆಯಲ್ಲಿ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಮಯ ನೋಡಿ ಕರಸೇವಕರಿಗೆ ಆರೋಗ್ಯ ಸರಿ ಇಲ್ಲದಿದ್ದರೂ ಜಾಮೀನು ಸಿಗದಂತೆ ಬಂಧಿಸಲಾಗಿದೆ. 31 ವರ್ಷ ಬಿಟ್ಟ ಪೊಲೀಸರು ಇನ್ನೂ ಒಂದು ವಾರ ಸುಮ್ಮನಿದ್ದರೆ ಏನಾಗುತ್ತಿತ್ತು? ರಾಮ ಮಂದಿರದ ಉದ್ಘಾಟನೆ ವೇಳೆ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡಲೆಂದೇ ಉದ್ದೇಶಪೂರ್ವಕವಾಗಿ ಇದನ್ನು ಮಾಡಿಸಿದ್ದು ಅಲ್ಲವೇ? ಆರ್. ಅಶೋಕ್​ ಎಂದು ಪ್ರಶ್ನೆ ಮಾಡಿದ್ದಾರೆ.

ಸೌಹಾರ್ದತೆ ಭಂಗ ಮಾಡುತ್ತಿರುವುದಕ್ಕೆ ಜೀವಂತ ಸಾಕ್ಷಿಗಳು: ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ಇಳಿಸಿದ ಪ್ರಕರಣ ಮತ್ತು ಅದರ ನಂತರ ನಡೆದ ಘಟನೆಗಳು, ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾನನ್ನು ಪೊಲೀಸರು ಬಂಧಿಸಿದ್ದ ಪ್ರಕರಣದ ವಿರುದ್ಧ ಸೇಡು ತೀರಿಸಿಕೊಳ್ಳಲು ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾ ಕಡೆಯೊಬ್ಬರು ನೀಡಿದ್ದ ಸುಳ್ಳು ದೂರಿನ ಆಧಾರದ ಮೇಲೆ ರಾಮನಗರದ ಐಜೂರು ಪೊಲೀಸ್ ಠಾಣೆ ಪಿಎಸ್ ಐ ತನ್ವೀರ್ ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಇವೆಲ್ಲಾ ಸರ್ಕಾರವೇ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಭಂಗ ಮಾಡುತ್ತಿರುವುದಕ್ಕೆ ಜೀವಂತ ಸಾಕ್ಷಿಗಳು ಸರ್ಕಾರ ವಿರುದ್ಧ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net