ವಿಶ್ವದಲ್ಲಿ ಗುರುತಿಸಿಕೊಂಡ ಬೆಂಗಳೂರು ನಗರ

byn_june 29 byndoor college
Published on

ಬೈಂದೂರು: ಕೆಂಪೇಗೌಡರ ದೂರದೃಷ್ಟಿಯಿಂದಾಗಿ 1537ರಲ್ಲಿ ನಿರ್ಮಾಣಗೊಂಡ ಬೆಂಗಳೂರು ಈಗ ಇಡಿ ಜಗತ್ತಿನಲ್ಲಿಯೇ ಗುರುತಿಸಿಕೊಂಡಿರುವ ನಗರವಾಗಿದೆ. ಆಗಿನ ಕಾಲದಲ್ಲೇ ನಾಲ್ಕು ಜತೆ ಎತ್ತುಗಳಿಗೆ ನೇಗಿಲನ್ನು ಕಟ್ಟಿ ನಾಲ್ಕು ದಿಕ್ಕಿಗೆ ಕಳುಹಿಸುವುದರ ಮೂಲಕ ಹಲಸೂರು, ಯಲಹಂಕ, ಯಶವಂತಪುರ, ಕೆಂಗೇರಿಯನ್ನು ಬೆಂಗಳೂರಿನ ಗಡಿಯಾಗಿಸಿದರು ಎಂದು ಉಪನ್ಯಾಸಕ ಸತೀಶ್ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗರ ವೇದಿಕೆಯಲ್ಲಿ ಶುಕ್ರವಾರ ತಾಲೂಕು ಆಡಳಿತ ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ನದಿಯ ಮೂಲವಿಲ್ಲದ ಬೆಂಗಳೂರಿಗೆ ಧರ್ಮಾಂಬುದಿ, ಸಂಪಗಿ, ಕೆಂಪಾಂಬುದಿ, ಹಲಸೂರು, ಯಡಿಯೂರು, ಸಿದ್ದನಕಟ್ಟೆ, ಬೆಳ್ಳಂದೂರು ಮುಂತಾದೆಡೆ ಬೃಹತ್ ಕೆರೆಗಳನ್ನು ನಿರ್ಮಿಸಿ ಕೃಷಿಗೆ ಉತ್ತೇಜನ ನೀಡಿದ ಒಬ್ಬ ಧೀಮಂತ ನಾಯಕ ಕೆಂಪೇಗೌಡರು ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ರಾಮಚಂದ್ರಪ್ಪ ಉದ್ಘಾಟಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಾಗರಾಜ ಶೆಟ್ಟಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಂಜುನಾಥ ಪಿ.ನಾಯಕ್, ಉಪಪ್ರಾಂಶುಪಾಲೆ ಸಂಧ್ಯಾ ಭಟ್ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಸ್ವಾಗತಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ ನಿರೂಪಿಸಿದರು. ಚಂದ್ರ ಬಂಕೇಶ್ವರ, ಸತೀಶ ಆಚಾರ್ಯ, ಗೀತಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net