

Pakistan : ಶಾಲಾ ಬಸ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ನಾಲ್ವರು ಮಕ್ಕಳು ಸಾವನ್ನಪ್ಪಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಖುಜ್ಜಾರ್ ಜಿಲ್ಲೆಯಲ್ಲಿ ನಡೆದಿದೆ.
ಇನ್ನೂ ಈ ಸ್ಪೋಟದ ಘಟನೆಯ ಬಗ್ಗೆ ಪಾಕಿಸ್ತಾನ ಭಾರತದ ಮೇಲೆ ಆರೋಪಿಸಿದ್ದು, ಪಾಕ್ ಮಾಡಿರುವ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸಿದೆ. ಅಂತಹ ದುರಂತ ಘಟನೆಯಲ್ಲಿ ಆದ ಜೀವಹಾನಿಗೆ ಭಾರತ ಸಂತಾಪ ವ್ಯಕ್ತಪಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖುಜ್ದಾರ್ ಘಟನೆಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆಧಾರರಹಿತ ಆರೋಪಗಳನ್ನು ಭಾರತ ತಿರಸ್ಕರಿಸುತ್ತದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಾಂಬ್ ದಾಳಿಯನ್ನು ಖಂಡಿಸಿದರು. ಇದನ್ನು ಭಾರತದ ಬೆಂಬಲಿತ ಭಯೋತ್ಪಾದಕರು ಮಾಡಿರಬಹುದು ಎಂದು ಆರೋಪಿಸಿದರು. ಭಾರತೀಯ ಗುಪ್ತಚರ ಸಂಸ್ಥೆಗಳು ಬಲೂಚಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಕ್ಸಿ ಉಗ್ರಗಾಮಿ ಗುಂಪುಗಳ ಮೂಲಕ ದಾಳಿಯನ್ನು ಆಯೋಜಿಸಿವೆ ಎಂದು ಆರೋಪಿಸಿತು. ಆದರೆ ಈ ದಾಳಿಗೆ ಬೆಂಬಲಿಸಲು ಯಾವುದೇ ನಿರ್ದಿಷ್ಟ ಪುರಾವೆಗಳು ಇರುವರೆಗೂ ಲಭ್ಯವಾಗಿಲ್ಲ.
ಅಂದಹಾಗೆ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂಬ ತನ್ನ ಖ್ಯಾತಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಮತ್ತು ತನ್ನದೇ ಆದ ಘೋರ ವೈಫಲ್ಯಗಳನ್ನು ಮರೆಮಾಡಲು, ಪಾಕಿಸ್ತಾನವು ತನ್ನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಭಾರತವನ್ನು ದೂಷಿಸುವುದು ಎರಡನೇ ಸ್ವಭಾವವಾಗಿದೆ. ಜಗತ್ತನ್ನು ಮೋಸಗೊಳಿಸುವ ಈ ಪ್ರಯತ್ನ ವಿಫಲವಾಗುವುದು ಖಚಿತ ಎಂದು ಹೇಳಿದೆ.
ಇನ್ನೂ ಈ ಘಟನೆಗೆ ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಲೇ ಇರುತ್ತದೆ ಹೀಗಾಗಿ ಅನುಮಾನವು ಬಲೂಚ್ ಪ್ರತ್ಯೇಕವಾದಿಗಳ ಕಡೆಗೆ ಮೂಡುವುದು ಸಹಜವಾಗಿದೆ. ಶತ್ರುಗಳು ಮುಗ್ಧ ಮಕ್ಕಳನ್ನು ಗುರಿಯಾಗಿಸಿಕೊಂಡು ಸಂಪೂರ್ಣ ಅನಾಗರಿಕತೆಯನ್ನು ಎಸಗಿದ್ದಾರೆ. ಅಂತಹ ಮೃಗಗಳು ಯಾವುದೇ ದಯೆಗೆ ಅರ್ಹರಲ್ಲ ಎಂದು ಆಂತರಿಕ ಸಚಿವ ಮೊಕ್ಸಿನ್ ನಖಿ ದಾಳಿಯನ್ನು ತೀವ್ರವಾಗಿ ಖಂಡಿಸಿದರು.
(ಏಜೆನ್ಸೀಸ್)