ಪಾಕಿಸ್ತಾನ ಸಂಸತ್ತಿನಲ್ಲಿ 'ಮೋದಿ'; ಭಾಷಣ ಅರ್ಧಕ್ಕೇ ಬಿಟ್ಟ ಸಚಿವ, ಮುಜಗರಕ್ಕೀಡಾದ ಇಮ್ರಾನ್​ ಸರ್ಕಾರ

Pak Parliment
Published on

ಇಸ್ಲಮಾಬಾದ್​: ಪಾಕಿಸ್ತಾನದ ಸಂಸತ್ತಿನಲ್ಲಿ ಇಂದು ಮೋದಿಯವರ ಹೆಸರು ಉಲ್ಲೇಖವಾಗಿ, ಇಮ್ರಾನ್​ ಖಾನ್ ಸರ್ಕಾರ ತೀವ್ರವಾಗಿ ಮುಜುಗರಕ್ಕೀಡಾದ ಘಟನೆ ನಡೆದಿದೆ.

ಪಾಕಿಸ್ತಾನದಲ್ಲಿ ಫ್ರೆಂಚ್​ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ವಿಚಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್​ ಖುರೇಶಿ ಮಾತು ಶುರು ಮಾಡುತ್ತಿದ್ದಂತೆಯೇ ಬಲೂಚಿಸ್ತಾನ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ, ಸ್ಲೋಗನ್​ಗಳನ್ನು ಪ್ರದರ್ಶಿಸಿದ್ದಾರೆ. ಎಂಪಿಗಳು ನರೇಂದ್ರ ಮೋದಿಯರನ್ನು ಹೊಗಳಿದ್ದಕ್ಕೆ ಖುರೇಶಿ ತೀವ್ರವಾಗಿ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೊವಿಡ್​-19 ನಿರ್ವಹಣೆ ವಿಚಾರದಲ್ಲಿ ಪ್ರತಿಪಕ್ಷ ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಸಿಟ್ಟಿಗೆ ಕಾರಣರಾಗಿರುವ ಪ್ರಧಾನಿ ಇಮ್ರಾನ್ ಖಾನ್​ ವಿರುದ್ಧ ಬಲೂಚಿಸ್ತಾನ ಸಂಸದರು ಪ್ರತೀಕಾರಕ್ಕೆ ತೊಡಗಿದವಂತೆ ಸಂಸತ್ತಿನಲ್ಲಿ ವರ್ತಿಸಿದ್ದಾರೆ. ಬಲೂಚಿಸ್ತಾನ ಸ್ವಾತಂತ್ರ್ಯ ಚಳವಳಿ ಘೋಷಣೆಗಳನ್ನೂ ಇಂದು ಕೂಗಿದ್ದಾರೆ.

ಪ್ರತಿಪಕ್ಷಗಳ ನಾಯಕರಿಗೆ ಭಾರತದ ಪ್ರಧಾನಿ ಮೋದಿಯವರು ಸ್ಫೂರ್ತಿಯಾಗುತ್ತಿದ್ದಾರೆ. ಅವರ ಅಂಶಗಳೇ ಈ ನಾಯಕರಿಗೆ ವರ್ಗಾವಣೆಯಾಗಿದೆ ಎಂದು ಖುರೇಶಿ ವ್ಯಂಗ್ಯವಾಡಿ, ತಮ್ಮ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದಾರೆ.

ಹಾಗೇ, ಇಂದು ಸಂಸತ್ತಿನಲ್ಲಿ ಬಲೂಚಿಸ್ತಾನ ಸಂಸದರು ಮೋದಿ ಮೋದಿ ಎಂದು ಕೂಗಿದ್ದಾರೆ ಎಂಬ ವರದಿಯೂ ಹರಿದಾಡುತ್ತಿದ್ದು, ಅದು ಸುಳ್ಳು ಎನ್ನಲಾಗಿದೆ. ಅವರು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ ಬಿಟ್ಟರೆ ಹೆಸರನ್ನು ಕೂಗಿಲ್ಲ ಎಂಬುದು ಗೊತ್ತಾಗಿದೆ. ಬಲೂಚಿಸ್ತಾನ ಸಂಸದರು ಖುರೇಶಿ ಮಾತನಾಡುವಾಗ ನಿರಂತರವಾಗಿ ವೋಟಿಂಗ್​, ವೋಟಿಂಗ್ ಎಂದು ಕೂಗುತ್ತಿರುವುದನ್ನು ಕೆಲವು ಸೋಷಿಯಲ್​ ಮೀಡಿಯಾ ಬಳಕೆದಾರರು ಮೋದಿ..ಮೋದಿ ಎಂದು ಕೂಗುತ್ತಿರುವುದಾಗಿ ತಪ್ಪಾಗಿ ಅರ್ಥೈಸಿಕೊಂಡು, ಅದನ್ನೇ ವೈರಲ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net