

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿವಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿವಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ತಂಡದಲ್ಲಿ 10 ಮಂದಿ ಆಟಗಾರ್ತಿಯರ ಪೈಕಿ ನಾಯಕಿ ಸಹನಾ ಎಚ್.ಎ.ಂ ಸೇರಿದಂತೆ 9 ಕ್ರೀಡಾಪಟುಗಳು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿದ್ದರು.
ಲೀಗ್ ಹಂತದಲ್ಲಿ ತಮಿಳುನಾಡಿನ ಮಧುರೈ ಕಾಮರಾಜ್ ವಿವಿ ತಂಡವನ್ನು 35-15, 35-26 ಅಂತರಗಳಿಂದ, ಮಹಾತ್ಮ ಗಾಂಧಿ ವಿವಿಯನ್ನು 35-18, 35-14 ನೇರ ಅಂತರಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಸುತ್ತಿನಲ್ಲಿ ತಮಿಳುನಾಡಿನ ಅಣ್ಣಾ ವಿವಿಯೊಂದಿಗೆ ನಡೆದ ರೋಚಕ ಪಂದ್ಯದಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು.
ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.