

ಮಧೂರು: ವೈವಿಧ್ಯಮಯ ಭಾಷೆಗಳಿದ್ದರೂ ಐಕ್ಯ ಸಾರುವ ರಾಷ್ಟ್ರ ಭಾರತ. ಶ್ರೀರಾಮ, ಶ್ರೀಕೃಷ್ಣರು ಭಾರತವನ್ನು ಉದ್ದಗಲ ಜೋಡಿಸಿದ ಮಹಾತ್ಮರು. ಅಂತಹ ದೈವಿ ಪುರುಷರ ನಾಡು ಸಂಕಟಕ್ಕೊಳಗಾಗದು. ಆಗ್ಗಿದ್ದಾಗೆ ಬಂದೊದಗುವ ಸವಾಲುಗಳನ್ನು ನಿವಾರಿಸಲು ಶಕಪುರುಷರಾದಿ ಋಷಿ ಪರಂಪರೆಯ ಬೆಳಕು ನಮ್ಮ ಮೇಲಿದೆ ಎಂದು ಪ್ರಜ್ಞಾಪ್ರವಾಹ ಅಖಿಲ ಭಾರತ ಸಂಯೋಜಕ ಜೆ.ನಂದಕುಮಾರ್ ಹೇಳಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ಸಂಜೆ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಶ್ರೀಕ್ಷೇತ್ರ ಕೇಮಾರಿನ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲ ಸ್ವಾಮೀಜಿ ಆಶೀರ್ವಚನ ನೀಡಿ, ದೇವಾಲಯಗಳು ಸಂಸ್ಕಾರ ನೀಡುವ ತಾಣಗಳಾಗಬೇಕು. ಅಪಾಯ ಕೋಟಿಗಳಿಗೆ ಉಪಾಯ ಒಂದೇ, ಅದು ಶಿವ ನಾಮ ಸ್ಮರಣೆ. ಈ ಹಿನ್ನೆಲೆಯಲ್ಲಿ ಭಗವದನುಗ್ರಹಕ್ಕೆ ದ್ವೇಷರಹಿತ, ಪ್ರೀತಿ-ಪ್ರೇಮಸಹಿತ ಆಂತರ್ಯ ದೃಷ್ಟಿ ನಮ್ಮಲ್ಲಿರಲಿ. ಯಾವ ವೈಭವ ಸಂಪತ್ತುಗಳಿದ್ದರೂ ಭಗವಂತನ ಸಾಯುಜ್ಯವೊಂದೇ ಅಂತಿಮ ಲಕ್ಷೃ ಎಂದವರು ತಿಳಿಸಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಬಿ.ಕೆ.ಮಧೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿ, ಡಾ.ಮಂಜುನಾಥ ಶೆಟ್ಟಿ, ಸಂಜೀವ ಶೆಟ್ಟಿ ಮೊಟ್ಟಕುಂಜ, ಡಾ.ರವೀಶ ಪರವ ಪಡುಮಲೆ, ವಸಂತ ಅಜಕ್ಕೋಡು, ನಿವೃತ್ತ ಡಿವೈಎಸ್‌ಪಿ ಹರಿಶ್ಚಂದ್ರ ನಾಯ್ಕ, ಕಾಸರಗೋಡು ಕೂರುಂಭಾ ಭಗವತಿ ಕ್ಷೇತ್ರದ ಐವರು ಅಚ್ಚಮ್ಮಾರರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಎನ್.ಚಂದ್ರಗೋಪಾಲ ಮಧೂರು ವಂದಿಸಿದರು. ಪತ್ರಕರ್ತ ವೇಣುಗೋಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು.