

ಮುಂಬೈ: ಮಳೆಯ ನಡುವೆಯೂ ಹಣೆ ಮತ್ತು ತೋಳುಗಳಲ್ಲಿ ಕಪ್ಪು ಪಟ್ಟಿ ಧರಿಸಿ ಶರದ್ ಪವಾರ್ ಅವರ ಎನ್ಸಿಪಿ-ಎಸ್ಪಿ, ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಮೂರು ಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ್ ಅಘಾಡಿಯ ನಾಯಕರು ಮತ್ತು ಕಾರ್ಯಕರ್ತರು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಶನಿವಾರ(ಆಗಸ್ಟ್ 24) ಪ್ರತಿಭಟನೆ ನಡೆಸಿದರು.
ದಾದರ್ನಲ್ಲಿರುವ ಶಿವಸೇನಾ ಭವನದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಏಕನಾಥ ಶಿಂಧೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಕರಣದ ಆರೋಪಿಗಳಿಗೆ ಆಡಳಿತ ನಡೆಸುತ್ತಿರುವವರು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಹೆಣ್ಣುಮಕ್ಕಳ ಭದ್ರತೆಗಾಗಿ ಬಂದ್ಗೆ ಕರೆ ನೀಡಿದ್ದೇವು ಅದನ್ನು ಯಶಸ್ಚಿಯಾಗಿ ಜಾರಿಗೆ ತರುತ್ತಿದ್ದೇವು. ಆದರೆ ಅದಕ್ಕೆ ಹೆದರಿ ಜನರನ್ನು ನ್ಯಾಯಾಲಯಕ್ಕೆ ಕಳುಹಿಸಿದರು. ಮಹಾರಾಷ್ಟ್ರದಲ್ಲಿ ಬಂದ್ಗೆ ಏಕೆ ವಿರೋಧ ವ್ಯಕ್ತವಾಗಿದೆ? ಎಂದು ಪ್ರಶ್ನಿಸಿದ ಠಾಕ್ರೆ ಇಂತಹ ನಾಚಿಕೆಯಿಲ್ಲದ ಸರ್ಕಾರವನ್ನು ಮಹಾರಾಷ್ಟ್ರ ಯಾವತ್ತೂ ನೋಡಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು ಕೇವಲ 10 ದಿನಗಳಲ್ಲಿ ಇಂತಹ 12 ಘಟನೆಗಳು ನಡೆದಿವೆ ಎಂದು ಶಿವಸೇನೆ(ಯುಬಿಟಿ) ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. ಕಾಂಗ್ರೆಸ್, ಶಿವಸೇನೆ (UBT) ಮತ್ತು NCP ಮೂರು ಪಕ್ಷಗಳ ನಾಯಕರು ಸಭೆ ಸೇರಿ ಬದ್ಲಾಪುರ ಶಾಲೆಯಲ್ಲಿನ ಅಪಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದ್ದರು.ಹೈಕೋರ್ಟ್ ಮಧ್ಯಪ್ರವೇಶಿಸಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು ಬಂದ್ಗೆ ಕರೆ ನೀಡದಂತೆ ಶುಕ್ರವಾರ ಆದೇಶ ಹೊರಡಿಸಿತು.(ಏಜೆನ್ಸೀಸ್)