ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರನ್ನು ಶಿಫಾರಸು ಮಾಡಿದ ಬಿ.ಆರ್.ಗವಾಯಿ| Chief Justice of India

ವಿಜಯವಾಣಿ - 2025-10-27T121249.626
Published on

ನವದೆಹಲಿ: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ(Chief Justice of India) ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾ. ಸೂರ್ಯಕಾಂತ್ ಅವರನ್ನು ಸಿಜೆಐ ಬಿ.ಆರ್.ಗವಾಯಿ ಸೋಮವಾರ(ಅ. 27) ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ ಎಂದು ವರದಿಯಾಗಿದೆ.

ಸಿಜೆಐ ಗವಾಯಿ ಅವರು ತಮ್ಮ ಶಿಫಾರಸಿನಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಚುಕ್ಕಾಣಿ ಹಿಡಿಯಲು ಎಲ್ಲಾ ಅಂಶಗಳಲ್ಲಿಯೂ ಸೂಕ್ತ ಮತ್ತು ಸಮರ್ಥ ಎಂದು ಬಣ್ಣಿಸಿದ್ದು, ಇಬ್ಬರೂ ಪರಿಶ್ರಮ ಮತ್ತು ಹೋರಾಟ ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯವರು ಎಂಬುದನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ 2019 ಮೇ 24ರಿಂದ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸೂರ್ಯಕಾಂತ್ ಅವರು  ನವೆಂಬರ್ 23 ರಂದು ಸಿಜೆಐ ಗವಾಯಿ ಅವರ ನಿವೃತ್ತಿಯ ನಂತರ ನವೆಂಬರ್ 24ರಂದು 53ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2027 ಫೆಬ್ರವರಿ 9ಕ್ಕೆ ಅವರು ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ.

ನ್ಯಾ. ಸೂರ್ಯಕಾಂತ್ ಅವರ ಹಿನ್ನೆಲೆ

ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾ. ಸೂರ್ಯಕಾಂತ್ ಅವರು 1962 ಫೆ. 10ರಂದು ಹರಿಯಾಣದ ಹಿಸಾರ್​ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆ. 1981ರಲ್ಲಿ ಹಿಸಾರ್‌ನ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಮುಗಿಸಿದ್ದು, 1984ರಲ್ಲಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ.

1984ರಲ್ಲಿ ಹಿಸಾರ್‌ನ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಮೊದಲ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಬಳಿಕ 1985ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಚಂಡೀಗಢಕ್ಕೆ ಸ್ಥಳಾಂತರಗೊಂಡರು. ಸೂರ್ಯಕಾಂತ್ ಅವರು ಸಾಂವಿಧಾನಿಕ, ಸೇವಾ ಮತ್ತು ನಾಗರಿಕ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಹಲವಾರು ವಿಶ್ವವಿದ್ಯಾಲಯಗಳು, ಮಂಡಳಿಗಳು, ನಿಗಮಗಳು, ಬ್ಯಾಂಕುಗಳು ಮತ್ತು ಹೈಕೋರ್ಟ್ ಅನ್ನು ಸಹ ಪ್ರತಿನಿಧಿಸಿದ್ದಾರೆ.

2000 ಜುಲೈ 7ರಂದು ಹರಿಯಾಣದ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಯಿತು. ಮತ್ತು ಮಾರ್ಚ್ 2001ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. 2004 ಜನವರಿ 09ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಶಾಶ್ವತ ನ್ಯಾಯಾಧೀಶರಾಗಿ ಬಡ್ತಿ ಪಡೆಯುವವರೆಗೂ ಅವರು ಹರಿಯಾಣದ ಅಡ್ವೊಕೇಟ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದರು.

2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಬಳಿಕ 2019 ಮೇ 24ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದುಪಡಿಸಿದ್ದನ್ನು ಎತ್ತಿಹಿಡಿದ ಪೀಠ, ನಾಗರಿಕರ ಮಾಹಿತಿ ಹಕ್ಕಿನ ಉಲ್ಲಂಘನೆಯನ್ನು ಉಲ್ಲೇಖಿಸಿ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ಪೀಠದ ಭಾಗವಾಗಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net