ಬೆಳ್ತಂಗಡಿ: ನಗರಗಳಲ್ಲಿ ಬಿ ಖಾತಾ ಆಂದೋಲನ ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ, ನಗರಗಳಲ್ಲಿ ಎಲ್ಲ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗೀಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿ ತರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನಕ್ಕೆ ಆದೇಶ ನೀಡಿರುವುದು ಜನರ ಕಣ್ಣೊರೆಸುವ ತಂತ್ರ ಆಗಿದೆ. ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಇನ್ನೊಂದು ಮಾರ್ಗವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಟೀಕಿಸಿದ್ದಾರೆ.
ಹಲವಾರು ವರ್ಷಗಳಿಂದ ಜನರಿಗೆ ಖಾತ ನೀಡುವ ಸಮಸ್ಯೆ ರಾಜ್ಯದಲ್ಲಿದ್ದು ಇದಕ್ಕೆ ಸೂಕ್ತ ನಿಯಮ ರೂಪಿಸದೆ, ಈ ಕುರಿತ ಅಕ್ರಮ-ಸಕ್ರಮ ಕಾನೂನಿನ ಕುರಿತ ವ್ಯಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ನ್ಯಾಯಾಲಯದಲ್ಲಿ ಸರಿಯಾದ ವಾದ ಮಂಡಿಸಿ ಪರಿಹಾರ ಒದಗಿಸುವ ಬದಲಾಗಿ ಬಿ ಖಾತಾ ನೀಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿ ಜನಸಾಮಾನ್ಯರನ್ನು ಮರಳುಗೊಳಿಸುವ ನೀತಿ ಸರಿಯಲ್ಲ.
ಬೆಳ್ತಂಗಡಿಯಂತಹ ಪಟ್ಟಣಗಳಲ್ಲಿ ಬಹುತೇಕ ನಿವೇಶನದಾರರು, ಅಕ್ರಮ ಕಟ್ಟಡ ನಿರ್ಮಿಸಿದವರು ಸರ್ಕಾರಕ್ಕೆ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಬರುತ್ತಿದ್ದಾರೆ. ಸರ್ಕಾರದ ಈ ಯೋಜನೆಯಿಂದ ಬಡ ಜನರಿಗೆ ಉಪಯೋಗವಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದರು. ಬೆಂಗಳೂರು, ಇತರ ಮಹಾ ನಗರಗಳ ಹೊರ ವ್ಯಾಪ್ತಿಯಲ್ಲಿ ರಾಜಕಾರಣಿ, ಭೂ ಮಾಲೀಕರು ಕಂದಾಯ ನಿವೇಶನ ರಚಿಸಿಕೊಂಡಿದ್ದು ಅವುಗಳ ಮಾರಾಟಕ್ಕೆ ಈ ಕಾನೂನಿನಿಂದ ಅನುಕೂಲವಾಗಲಿದೆ. ಕಾನೂನು ಅರ್ಥೈಸಿಕೊಳ್ಳದೆ ನಿವೇಶನ ಲಭ್ಯವಿದೆ ಎಂದು ಖರೀದಿದಾರರು ಪಡೆದುಕೊಂಡಲ್ಲಿ ಮುಂದಕ್ಕೆ ಕಟ್ಟಡ ಪುನರ್ ರಚನೆ ಮಾಡುವ ಸಂದರ್ಭದಲ್ಲಿ, ಬ್ಯಾಂಕ್ ಸಾಲ, ಕಟ್ಟಡ ವಿಸ್ತರಣೆ ಸಂದರ್ಭದಲ್ಲಿ ಎಲ್ಲ ರೀತಿಯ ತೊಂದರೆ ಅನುಭವಿಸಲಿದ್ದು, ಕೊಟ್ಟವ ವೀರಭದ್ರ ಇಸ್ಕೊಂಡವ ಕೋಡಂಗಿ ಎಂಬಂತಾಗಲಿದೆ ಎಂದು ಜಯಾನಂದ ಗೌಡ ಟೀಕಿಸಿದ್ದಾರೆ. ಸಕ್ಷಮ ಪ್ರಾಧಿಕಾರ ಮೂಡಕ್ಕೆ ಸಿಂಗಲ್ ಲೇಔಟ್ ವಿನ್ಯಾಸ ನಕ್ಷೆಗೆ ಅನುಮತಿ ಕೊಟ್ಟು ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವಂತೆ, ಬ್ಯಾಂಕ್‌ಗಳು ಸಾಲ ಕೊಡುವಂತೆ ಸರ್ಕಾರ ನಿರ್ದೇಶನ ಕೊಟ್ಟರೆ ಜನರಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ಬ್ಯಾಂಕ್ ಸಾಲ ಸಿಗುವುದಿಲ್ಲ
ಬಿ ಖಾತೆಯಿಂದ ಕಟ್ಟಡ ನಿರ್ಮಿಸಲು, ಬ್ಯಾಂಕ್ ಸಾಲ ಪಡೆಯಲು ಅವಕಾಶವಿಲ್ಲ. ಇದು ಕೇವಲ ಆಸ್ತಿ ಮಾರಾಟಕ್ಕೆ ಅನುಕೂಲವೇ ಹೊರತು ಶಾಶ್ವತ ಪರಿಹಾರವಲ್ಲ. ಇಂಥ ನಿವೇಶನಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅನುಮತಿ ಇರುವುದಿಲ್ಲ. ವಿನ್ಯಾಸ ಅನುಮೋದನೆ ಗೊಳ್ಳದ ನಿವೇಶನಗಳಿಗೆ ಬ್ಯಾಂಕ್ ಸಾಲ ಲಭ್ಯವಾಗುವುದಿಲ್ಲ. ಸರ್ಕಾರ ಈ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಿದಂತೆ ಸದ್ರಿ ಬಿ ಖಾತಾ ನಿವೇಶನಗಳು ಯಾವುದೇ ಕಾರಣಕ್ಕೂ ಸಕ್ರಮ ಎನಿಸಿಕೊಳ್ಳುವುದಿಲ್ಲ.