

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ಗೊಂದಲು ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ. ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಧ್ಯಾನ ಮಾಡುವುದು ಗಿಮಿಕ್ ಹೇಗಾಗುತ್ತದೆ ಎಂಬುದನ್ನು ಜನತೆಗೆ ವಿವರಿಸಿ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇನ್ನು ಮುಂದೆ ಶಾಲೆಗಳಲ್ಲಿ 10 ನಿಮಿಷ ಧ್ಯಾನ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸರಣಿ ಟ್ವೀಟ್ ಮಾಡಿ, ಮಕ್ಕಳು ಆಟ ಆಡುತ್ತಾ, ಕುಣಿಯುತ್ತಾ ಪಾಠ ಕೇಳಿ ಬೇಳೆಯಬೇಕು. ಆದರೆ ಸರ್ಕಾರದ ನಿರ್ಧಾರದಿಂದ ಬಲವಂತವಾಗಿ ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿ ಧ್ಯಾನ ಯೋಗ ಮಾಡಿಸುವಂತಾಗಿದೆ ಎಂದು ಟೀಕಿಸಿದ್ದಾರೆ.
ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ ಸಿದ್ದರಾಮಯ್ಯ ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಇದೀಗ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಸಿದ್ದಾರೆ.
ಅರ್ಜಿ ಹಾಕದವರು, ಪರೀಕ್ಷೆ ಬರೆಯದವರನ್ನು ಶಿಕ್ಷಕರಾಗಿ ನೇಮಿಸಿ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೇ ಶಿಕ್ಷಕರು ಮತ್ತು ಮೂಲಸೌಕರ್ಯಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತಿರಲಿಲ್ಲ.
ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆ, ಏಳಿಗೆ ಮತ್ತು ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೋವಿಡ್-19 ಸಂದರ್ಭದಲ್ಲಿ ಇಡೀ ದೇಶದಲ್ಲೇ ಮೊದಲು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಭೌತಿಕ ತರಗತಿಗಳನ್ನು ಆರಂಭಿಸಿತು. ಭೌತಿಕ ತರಗತಿಗಳಿಲ್ಲದೆ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ.
21ನೇ ಶತಮಾನದ ಅಗತ್ಯಗಳಿಗೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ನೀಗಿಸಲು 8,100 ಕೊಠಡಿ ನಿರ್ಮಾಣವಾಗುತ್ತಿದೆ. ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲೇ 30 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಸೇವೆ ಪಡೆಯಲಾಗಿದೆ. ದೈಹಿಕ ಶಿಕ್ಷಕರು ಸೇರಿದಂತೆ 2,500 ಪ್ರೌಢಶಾಲಾ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.