

ರೋಗನಿರೋಧಕಶಕ್ತಿಯಲ್ಲಿನ ವ್ಯತಿರಿಕ್ತತೆಯಿಂದಾಗಿ ಸೋರಿಯಾಸಿಸ್ ಬರುತ್ತದೆ ಎಂಬುದು ಗೊತ್ತಿದ್ದರೂ ಹಾಗಾಗಲು ಕಾರಣವೇನು ಎಂಬುದರ ಸ್ಪಷ್ಟ ಚಿತ್ರಣ ಇಲ್ಲ. ಆನುವಂಶೀಯವಾಗಿ ಅಥವಾ ಒತ್ತಡದ ಕಾರಣದಿಂದಾಗಿ ಈ ಕಾಯಿಲೆ ಬರುತ್ತದೆ ಎಂದು ಅಭಿಪ್ರಾಯಪಡಲಾಗುತ್ತಿದೆ. ವಿರುದ್ಧ ಆಹಾರಗಳ ಸೇವನೆ, ತಪ್ಪಾದ ಜೀವನಶೈಲಿ, ಸರಿಯಾದ ರೀತಿಯಲ್ಲಿ ದಿನಚರ್ಯೆಯನ್ನು ಪಾಲಿಸದಿರುವುದು, ಅತಿ ಉಪ್ಪು, ಹುಳಿ, ಖಾರಗಳ ಸೇವನೆ, ವಿಷಯುಕ್ತ ಆಹಾರಗಳ ಸೇವನೆ, ನೈಸರ್ಗಿಕ ಕರೆಗಳನ್ನು ತಡೆಯುವುದು ಇಂತಹ ಕಾರಣಗಳಿಂದ ಈ ಕಾಯಿಲೆ ಬರುತ್ತದೆ ಎಂದು ಆಯುರ್ವೇದ ಹೇಳುತ್ತದೆ.
ಸೋರಿಯಾಸಿಸ್ನಲ್ಲಿ ಹಲವಾರು ವಿಧಗಳಿವೆ. ಇಡೀ ಮೈಗೆ ಹರಡಿಕೊಳ್ಳುವುದು, ಪಾದ-ಹಸ್ತಗಳಿಗೆ ಮಾತ್ರ ಆಗುವುದು, ತಲೆಯ ಮೇಲೆ ಮಾತ್ರ ಆಗುವುದು, ತುರಿಕೆ ಇರುವುದು, ತುರಿಕೆರಹಿತವಾಗಿರುವುದು - ಹೀಗೆ ಹಲವು ರೀತಿಗಳಲ್ಲಿ ಈ ಕಾಯಿಲೆ ತನ್ನ ಲಕ್ಷಣಗಳನ್ನು ತೋರಿಸುತ್ತದೆ. ಕೆಲವೊಮ್ಮೆ ಅದು ಸಂಧಿಗಳನ್ನು ವಿಕೃತಗೊಳಿಸಿ, ವಿಶೇಷವಾಗಿ ಕೈ ಮತ್ತು ಕಾಲಿನ ಸಂಧಿಗಳಲ್ಲಿ ಬಾವು, ನೋವು, ಬಿಗಿತ ಮತ್ತು ನಿಧಾನವಾಗಿ ಅವು ವಕ್ರವಾಗಲು ಕಾರಣವಾಗಬಹುದು. ಇದಕ್ಕೆ ಸೋರಿಯಾಟಿಕ್ ಆರ್ಥರೈಟಿಸ್ ಎನ್ನುತ್ತಾರೆ. ಆದರೂ ಬೇರೆ ಕಾಯಿಲೆಗಳಿಗೆ ಹೋಲಿಸಿದರೆ ಇದು ನಿರುಪದ್ರವಿಯೇ. ಇದು ಹೊರಗೆ ಎದ್ದು ಕಾಣುವುದರಿಂದ ನಮಗೆ ದೊಡ್ಡ ಸಮಸ್ಯೆಯಾಗಿ ತೋರುತ್ತದೆ. ಸಾಮಾಜಿಕ ಮುಜುಗರಗಳಿಗೆ ಕಾರಣವಾಗುತ್ತದೆ. ಸಹಜವಾಗಿ ಖಿನ್ನತೆಯನ್ನು ತರುತ್ತದೆ. ಆ ಒತ್ತಡ ಮತ್ತು ಮಾನಸಿಕ ಹಿಂಸೆಗಳು ಕಾಯಿಲೆಯನ್ನು ಇನ್ನೂ ಉಲ್ಬಣಗೊಳ್ಳುವಂತೆ ಮಾಡುತ್ತವೆ. ಹೀಗೆ ಇದೊಂದು ವಿಷಚಕ್ರವಾಗಿಬಿಡುತ್ತದೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಿಕೊಂಡು ಗುಣಪಡಿಸಿಕೊಳ್ಳಬೇಕೇ ಹೊರತು ತಾತ್ಕಾಲಿಕವಾಗಿ ಚರ್ಮ ಸರಿಯಾಗಿ ಕಾಣುವಂತೆ ಮಾಡಿಕೊಳ್ಳುವುದಲ್ಲ. ಇದನ್ನೂ ಓದಿ: ದುರ್ಬಲ ಸ್ನಾಯುಗಳನ್ನು ಬಲಿಷ್ಠ ಪಡಿಸುವ ಯೋಗ
ಎರಡೆರಡು ಗ್ರಾಂ.ಗಳಷ್ಟು ಬೇವು, ಅಮೃತಬಳ್ಳಿ, ಮಂಜಿಷ್ಟ, ಸೊಗದೆಬೇರು, ಅರಿಶಿಣಗಳನ್ನು (ಎಲ್ಲವೂ ಗ್ರಂಥಿಗೆ ಅಂಗಡಿಗಳಲ್ಲಿ ಲಭ್ಯ) ತೆಗೆದುಕೊಂಡು ಎರಡು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟ ನೀರಿಗೆ ಬತ್ತಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಹಾಯವಾಗುತ್ತದೆ. ಈ ರೀತಿ ಕಹಿ ದ್ರವ್ಯಗಳ ಸೇವನೆ ಸೋರಿಯಾಸಿಸ್ಗೆ ಹಿತಕಾರಿ. ಆದರೆ ಇದರಿಂದ ದೇಹ ಒಣಗುವುದು ಮತ್ತು ವಾತ ಹೆಚ್ಚಾಗುವ ಭಯವಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬನ್ನು (ಶುದ್ಧ ತುಪ್ಪ, ಕೊಬ್ಬರಿ ಎಣ್ಣೆ, ಶುದ್ಧ ಎಳ್ಳೆಣ್ಣೆ ಇತ್ಯಾದಿ) ಸೇವಿಸಬೇಕು. ಒಮೆಗಾ 3 ಫ್ಯಾಟಿ ಅಸಿಡ್ಗಳನ್ನು ಸೇವಿಸುವುದೂ ಅನುಕೂಲಕರ.
ಉರಿ ಮತ್ತು ತುರಿಕೆ ಇದ್ದರೆ ಶುದ್ಧ ಚಂದನದ ಕೊರಡನ್ನು ತೇಯ್ದು ಅರ್ಧ ಚಮಚದಷ್ಟು ಹೊಟ್ಟೆಗೆ ಸೇವಿಸಬೇಕು ಮತ್ತು ಉರಿಯಿರುವ ಕಡೆ ಇದನ್ನು ಹಚ್ಚಿಕೊಳ್ಳಬಹುದು. ಹಸ್ತ-ಪಾದಗಳಲ್ಲಿ ಸೋರಿಯಾಸಿಸ್ (ಪಾಮೋ ಪ್ಲಾಂಟಾರ್ ಸೋರಿಯಾಸಿಸ್) ಆದಾಗ ಅತಿಯಾಗಿ ಒಣಗುವುದು ಮತ್ತು ಬಿರುಕು ಬಿಟ್ಟು ರಕ್ತ ಸೋರುವುದನ್ನು ತಡೆಯಲು ಹಾಗೂ ಚರ್ಮದ ಮೃದುತ್ವವನ್ನು ಕಾಪಾಡಲು ರಾತ್ರಿ ಹಸ್ತ ಮತ್ತು ಪಾದಗಳನ್ನು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗಳ ಮಿಶ್ರಣದಲ್ಲಿ ಅರ್ಧ ಗಂಟೆಯಷ್ಟು ಹೊತ್ತು ಅದ್ದಿಟ್ಟುಕೊಂಡು ನಂತರ ಅದನ್ನು ತೊಳೆಯದೆ ಕೇವಲ ಒರೆಸಿಕೊಂಡು ಒಂದು ಹತ್ತಿ ಬಟ್ಟೆ ಸುತ್ತಿಕೊಂಡು ಮಲಗಿದರೆ ತುಂಬ ಅನುಕೂಲವಾಗುತ್ತದೆ. ಇದನ್ನೂ ಓದಿ: ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೊನಾ
ಕೇವಲ ಮನೆಮದ್ದುಗಳ ಮೂಲಕ ಈ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಸಾಧ್ಯವಿಲ್ಲ. ಸರಿಯಾದ ರೀತಿಯಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ಪಂಚಕರ್ಮ ಚಿಕಿತ್ಸೆಗಳನ್ನು ಮಾಡಿಕೊಂಡರೆ ಮಾತ್ರ ಅದನ್ನು ಗುಣಪಡಿಸಬಹುದು. ಜತೆಗೆ ಆಳ ವಿಶ್ರಾಂತಿ ಕ್ರಿಯೆ, ಪ್ರಾಣಾಯಾಮ, ಯೋಗಾಸನಗಳ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ತುಂಬ ಸಹಾಯವಾಗುತ್ತದೆ. ದಿನಕ್ಕೆ ಇಪ್ಪತ್ತು ನಿಮಿಷಗಳಷ್ಟು ಕಾಲ ಹೆಬ್ಬೆರಳು ಮತ್ತು ಕಿರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ ‘ವರುಣಮುದ್ರೆ’ಯನ್ನು ಅಭ್ಯಾಸ ಮಾಡಿದರೆ ಸೋರಿಯಾಸಸ್ನಲ್ಲಿ ಅತ್ಯಂತ ಅನುಕೂಲವಾಗುತ್ತದೆ. ಮನಸ್ಸನ್ನು ಆನಂದದಿಂದಿಡುವ ಚಿನ್ಮುದ್ರೆಯನ್ನು ಅಭ್ಯಸಿಸುವುದೂ ತುಂಬ ಒಳ್ಳೆಯದು. ಒಟ್ಟಿನಲ್ಲಿ ಸೋರಿಯಾಸಿಸ್ ಬಗ್ಗೆ ಹೆದರದೆ, ಖಿನ್ನತೆಗೊಳಗಾಗದೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ, ಜೀವನಶೈಲಿಯನ್ನು ಸುಧಾರಿಸಿಕೊಂಡರೆ ಎಷ್ಟೇ ವಿಕಾರವಾಗಿ ಕಂಡರೂ ಅದೊಂದು ದೊಡ್ಡ ಸಮಸ್ಯೆಯಲ್ಲ.