More

    ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೊನಾ

    ಶ್ವಾಸಕೋಶದ ಮಹತ್ವ ತಿಳಿಸಿಕೊಟ್ಟ ಕರೊನಾ

    ಇಂದು ವಿಶ್ವ ಶ್ವಾಸಕೋಶ ದಿನ

    | ಡಾ.ಅಜಿತ್ ಈಟಿ

    ಮಾನವ ದೇಹದ 5 ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಶ್ವಾಸಕೋಶ, ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಎದೆಯ ಭಾಗದಲ್ಲಿ ಹೃದಯದ ಅಕ್ಕ-ಪಕ್ಕ 2 ಶ್ವಾಸಕೋಶಗಳು ಕುಳಿತಿವೆ. ಇವುಗಳ ಪ್ರಮುಖ ಕೆಲಸ- ನಾವು ಸೇವಿಸುವ ಗಾಳಿಯಲ್ಲಿ ಇರುವ ಆಮ್ಲಜನಕವನ್ನು ರಕ್ತದ ಮೂಲಕ ದೇಹದ ಪ್ರತಿ ಜೀವಕೋಶಗಳಿಗೂ ಸರಬರಾಜು ಮಾಡುವುದು ಹಾಗೂ ಕೋಶಗಳಿಂದ ಬಿಡಲಾದ ಇಂಗಾಲದ ಡೈಆಕ್ಸೈಡ್ ಹೊರಹಾಕುವುದಾಗಿದೆ. ದೇಹದ ನೀರಿನ ಹಾಗೂ ಉಷ್ಣಾಂಶ ಸಮತೋಲನ, ಸೂಕ್ಷ್ಮ ಕ್ರಿಮಿಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಕಾಪಾಡುವಲ್ಲಿಯೂ ಶ್ವಾಸಕೋಶಗಳು ಮುಖ್ಯಪಾತ್ರ ವಹಿಸುತ್ತವೆ.

    ಉಲ್ಬಣಗೊಳ್ಳುತ್ತಿರುವ ವಾಯುಮಾಲಿನ್ಯ, ಹೆಚ್ಚುತ್ತಿರುವ ಧೂಮಪಾನ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದಾಗಿ ಕಳೆದ ದಶಕದಲ್ಲಿ ಶ್ವಾಸಕೋಶ ಕಾಯಿಲೆಗಳು ಗಣನೀಯವಾಗಿ ಏರಿಕೆಯಾಗಿವೆ.

    ಶ್ವಾಸಕೋಶವನ್ನು ಬಾಧಿಸುವ ಪ್ರಮುಖ ಕಾಯಿಲೆಗಳು: ಅಸ್ತಮಾ, ದಮ್ಮುಕಾಯಿಲೆ (ಸಿ.ಓ.ಪಿ.ಡಿ), ಪಲ್ಮನರಿ ಫೈಬ್ರೋಸಿಸ್, ಶ್ವಾಸಕೋಶದ ಕ್ಯಾನ್ಸರ್- ಇವು ಹೇರಳವಾಗಿ ಕಾಣಿಸಿಕೊಳ್ಳುತ್ತಿರುವ ದೀರ್ಘಕಾಲದ ಶ್ವಾಸಕೋಶದ ತೊಂದರೆಗಳಾಗಿವೆ. ಶ್ವಾಸಕೋಶದ ಸೋಂಕು-ಬ್ರಾಂಕೈಟಿಸ್, ಕ್ಷಯರೋಗ ಹಾಗೂ ನ್ಯುಮೋನಿಯಾ (ಶ್ವಾಸಕೋಶದ ತೀವ್ರತರಹದ ಸೋಂಕು) ಕಾಯಿಲೆಗಳು ತುರ್ತು ಶ್ವಾಸಕೋಶದ ತೊಂದರೆಗಳಾಗಿವೆ. ಇದನ್ನೂ ಓದಿ: ಕರೊನಾ: ಆರೋಗ್ಯ ಸಚಿವಾಲಯ ಹೊರಡಿಸಿದೆ ಹೊಸ ಮಾರ್ಗಸೂಚಿ- ಇಲ್ಲಿದೆ ವಿವರ…

    ಅಂಕಿಅಂಶಗಳನ್ನು ಗಮನಿಸಿದಾಗ, ಭಾರತ ವಿಶ್ವದ ಶೇಕಡ 32ರಷ್ಟು ಶ್ವಾಸಕೋಶದ ಅಸ್ವಸ್ಥ ರೋಗಿಗಳನ್ನು ಹೊಂದಿದೆ. ಧೂಮಪಾನದಿಂದ ಬರುವ ಸಿ.ಓ.ಪಿ.ಡಿ ರೋಗ ಭಾರತದಲ್ಲಿ ಪ್ರತಿವರ್ಷ 8 ಲಕ್ಷ ಸಾವಿಗೆ ಕಾರಣವಾದರೆ, ಶ್ವಾಸಕೋಶದ ಕ್ಯಾನ್ಸರ್ 2018ರಲ್ಲಿ 63 ಸಾವಿರ ಜನರನ್ನು ಬಲಿ ಪಡೆದಿದೆ. 37 ದಶಲಕ್ಷ ಜನರು ಅಸ್ತಮಾ ತೊಂದರೆಯಿಂದ ಬಳಲುತ್ತಿದ್ದಾರೆ. ಕ್ಷಯರೋಗದಿಂದ 2018ರಲ್ಲಿ 4.4 ಲಕ್ಷ ಜನರು ಅಸುನೀಗಿದ್ದಾರೆ.

    ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಶ್ವಾಸಕೋಶದ ತೊಂದರೆಗಳು ಶೇಕಡ 25ರಿಂದ 30ರಷ್ಟು ಹೆಚ್ಚಾಗಿವೆ. ಇದಕ್ಕೆ ಪ್ರಮುಖ ಕಾರಣ-ಧೂಮಪಾನ. ವಿಶ್ವದ ಶೇ.12ರಷ್ಟು ಧೂಮಪಾನಿಗಳು ಭಾರತದವರು. ಭಾರತದಲ್ಲಿ ಕಳೆದ ಎರಡು ದಶಕದಲ್ಲಿ ಧೂಮಪಾನಿಗಳ ಸಂಖ್ಯೆ ಶೇ.36ರಷ್ಟು ಹೆಚ್ಚಳವಾಗಿದೆ. ಎರಡನೆಯ ಕಾರಣ, ವಾಯುಮಾಲಿನ್ಯ. ವಾಹನಗಳ ದಟ್ಟಣೆ, ರಸ್ತೆಯಧೂಳು, ನಗರೀಕರಣ ಹಾಗೂ ಉದ್ಯಮೀಕರಣದಿಂದಾಗಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ಗಣನೀಯವಾಗಿ ಕುಸಿದಿದೆ. ಒಲೆಯ ಹೊಗೆ, ಸೊಳ್ಳೆಬತ್ತಿಯ ಹೊಗೆ, ಮನೆಯೊಳಗಿನ ಧೂಮಪಾನ ಹೀಗೆ ಒಳಾಂಗಣದ ವಾಯುಮಾಲಿನ್ಯವೂ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಯೋಗ ಎಂಬ ಆಧುನಿಕ ಕಾಲದ ಯಾಗ

    ಶ್ವಾಸಕೋಶದ ಕಾಯಿಲೆಗಳಿಂದ ಈ ಪರಿ ಮರಣ ಸಂಭವಿಸುತ್ತಿರುವುದಕ್ಕೆ ಇನ್ನೊಂದು ಮುಖ್ಯ ಕಾರಣ ಜನಸಾಮಾನ್ಯರಲ್ಲಿ ಶ್ವಾಸಕೋಶದ ರೋಗಗಳ ಬಗ್ಗೆ ತಪ್ಪುಮಾಹಿತಿ, ನಿರ್ಲಕ್ಷ್ಯ ಹಾಗೂ ಸರಿಯಾದ ಸಮಯಕ್ಕೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯದೇ ಇರುವುದು. ಪ್ರಸ್ತುತ ಪರಿಸ್ಥಿತಿಯಲ್ಲಿ ವಿಶ್ವವೇ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಈ ಕೋವಿಡ್ ಪ್ರಮುಖವಾಗಿ ಶ್ವಾಸಕೋಶದ ಸಮಸ್ಯೆ ಆಗಿರುವುದರಿಂದ, ಜನರು ಈಗ ಎಚ್ಚೆತ್ತು ಶ್ವಾಸಕೋಶದ ಬಗ್ಗೆ ಹೆಚ್ಚು ಮಾಹಿತಿ ಪಡೆಯುತ್ತಿದ್ದಾರೆ. ಶ್ವಾಸಕೋಶ ಸಂಬಂಧದ ತೊಂದರೆಗಳಾದ ಕೆಮ್ಮು, ಕಫ ಕಟ್ಟುವುದು, ಅಲರ್ಜಿ, ದಮ್ಮು, ವೀಸಿಂಗ್, ಉಸಿರಾಟದ ತೊಂದರೆ, ಎದೆನೋವು, ಗೊರಕೆ- ಹೀಗೆ ವಿವಿಧ ರೋಗಲಕ್ಷಣಗಳಿಗೆ ಸಾರ್ವಜನಿಕರು ನೇರವಾಗಿ ಶ್ವಾಸಕೋಶ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಅತ್ಯವಶ್ಯಕ. ಸಮಯ ವ್ಯರ್ಥ ಮಾಡದೆ ಸರಿಯಾದ ಚಿಕಿತ್ಸೆ ಪಡೆದರೆ ಬಹುಪಾಲು ರೋಗಗಳನ್ನು ಬೇಗನೆ ಗುಣಪಡಿಸಬಹುದು ಹಾಗೂ ಸಾವುಗಳನ್ನು ತಡೆಯಬಹುದು. 

    ಶ್ವಾಸಕೋಶ ರಕ್ಷಣೆಗೆ ಹೀಗೆ ಮಾಡಿ
    • ಶ್ವಾಸಕೋಶದ ದೊಡ್ಡ ವೈರಿಯಾದ ಧೂಮಪಾನವನ್ನು ತ್ಯಜಿಸಬೇಕು.
    • ನಾವು ಸೇವಿಸುವ ಗಾಳಿ ಶುದ್ಧ ಹಾಗೂ ಆಹ್ಲಾದಕರವಾಗಿರಬೇಕು. ಧೂಳು ಹಾಗೂ ಮಾಲಿನ್ಯದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು.
    • ಹೆಚ್ಚು ಗಿಡ-ಮರಗಳನ್ನು ಬೆಳೆಸಿ, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.
    • ಕೈಗಳ ನೈರ್ಮಲ್ಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸುವುದರಿಂದ ಕರೊನಾ ಅಷ್ಟೇ ಅಲ್ಲ, ವಾಯುಮಾಲಿನ್ಯ ಹಾಗೂ ಶ್ವಾಸಕೋಶದ ಸೋಂಕುಗಳಿಂದಲೂ ನಮ್ಮನ್ನು ರಕ್ಷಿಸಿಕೊಳ್ಳಬಹುದು.
    • ಅಸ್ತಮಾ ಹಾಗೂ ದಮ್ಮು ರೋಗದಿಂದ ಬಳಲುತ್ತಿರುವವರು ತಜ್ಞರ ಸಲಹೆ ಪಡೆದು ಇನ್ಹೇಲರ್ ಚಿಕಿತ್ಸೆ ಪಡೆಯಬೇಕು.
    • ಮಿತ ಪೌಷ್ಠಿಕ ಆಹಾರ ಸೇವನೆ, ವ್ಯಾಯಾಮ, ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಆರೋಗ್ಯಕರ ತೂಕ ಕಾಪಾಡಿಕೊಳ್ಳಬೇಕು.
    • ಪ್ರತಿನಿತ್ಯ ಉಸಿರಿನ ಮೇಲೆ ಗಮನವಿಟ್ಟು 10-15 ನಿಮಿಷ ಧ್ಯಾನ ಮಾಡಬೇಕು.

    (ಲೇಖಕರು: ಶ್ವಾಸಕೋಶ ತಜ್ಞರು

    ಮಂಗಳೂರು ಮೂಲದ ವೈದ್ಯರಿಂದ ದೇಶದ ಮೊದಲ ಶ್ವಾಸಕೋಶ ಕಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts