ಬದಲಾದ ಅಯೋಧ್ಯೆ ಮಸೀದಿ ವಿನ್ಯಾಸ…ಅರಬ್ ರಾಷ್ಟ್ರಗಳ ಮಾದರಿಯಲ್ಲಿ ನಿರ್ಮಾಣ

masjid
Published on

ಅಯೋಧ್ಯೆ: ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನೀಡಿರುವ ಐದು ಎಕರೆ ಜಾಗದಲ್ಲಿನ ಉದ್ದೇಶಿತ 'ಮಸ್ಜಿದ್-ಎ-ಅಯೋಧ್ಯೆ' ವಿನ್ಯಾಸ ಈಗ ಬದಲಾಗಿದೆ. ಮೊದಲು ವಿನ್ಯಾಸವು ಸಾಮಾನ್ಯವಾಗಿ ಭಾರತದಲ್ಲಿ ನಿರ್ಮಿಸಲಾದ ಮಸೀದಿಗಳಂತೆಯೇ ಇತ್ತು, ಆದರೆ ಈಗ ಮಸೀದಿ ಟ್ರಸ್ಟ್ ವಿನ್ಯಾಸವನ್ನು ಬದಲಾಯಿಸಿ ಮಧ್ಯಪ್ರಾಚ್ಯ ಮತ್ತು ಅರಬ್ ದೇಶಗಳಲ್ಲಿ ನಿರ್ಮಿಸಲಾದ ಭವ್ಯ ಮಸೀದಿಗಳ ಮಾದರಿಯಲ್ಲಿ ಮಸೀದಿಯನ್ನು ನಿರ್ಮಿಸಲು ನಿರ್ಧರಿಸಿದೆ.

ಮುಂಬೈನಲ್ಲಿ ಗುರುವಾರ ನಡೆದ ಸಭೆಯಲ್ಲಿ ಪುಣೆ ಮೂಲದ ವಾಸ್ತುಶಿಲ್ಪಿ ಸಿದ್ಧಪಡಿಸಿದ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್, ಅಯೋಧ್ಯಾ ಮಸೀದಿ ಟ್ರಸ್ಟ್‌ನ ಅಧ್ಯಕ್ಷ ಜುಫರ್ ಫಾರೂಕಿ ಉಲ್ಲೇಖಿಸಿದ್ದಾರೆ ಎಂದು ಟ್ರಸ್ಟ್‌ಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ. ಈ ಮಸೀದಿಯು ಹಿಂದಿನ ವಿನ್ಯಾಸಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ ಮತ್ತು ಇದು ಹೆಚ್ಚಿನ ಸ್ಥಳಾವಕಾಶವನ್ನು ನೀಡುತ್ತದೆ.

ಮುನ್ನೂರು ಹಾಸಿಗೆಗಳ ಚಾರಿಟಬಲ್ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸುತ್ತೇವೆ ಎಂದು ಫಾರೂಕಿ ಹೇಳಿದರು. ಅಂತರರಾಷ್ಟ್ರೀಯ ಫಾರ್ಮಾ ಕಂಪನಿ ವೊಕಾರ್ಡ್ ಗ್ರೂಪ್‌ನ ಅಧ್ಯಕ್ಷ ಡಾ. ಅಬೆಲ್ ಖೋರಕಿವಾಲಾ ಅವರು ದತ್ತಿ ಆಧಾರದ ಮೇಲೆ ಆಸ್ಪತ್ರೆಯನ್ನು ಸ್ಥಾಪಿಸಿ ನಡೆಸಲು ಒಪ್ಪಿಕೊಂಡಿದ್ದಾರೆ.

ರಾಜ್ಯಗಳಲ್ಲಿ ನಿಧಿ ಸಂಗ್ರಹ ಅಭಿಯಾನ ಆರಂಭ
ಕಳೆದ ಕೆಲವು ತಿಂಗಳುಗಳಿಂದ, ಉತ್ತರ ಪ್ರದೇಶ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ನಿಧಿ ಸಂಗ್ರಹಿಸುವ ಅಭಿಯಾನವನ್ನು ಮಸೀದಿ ಟ್ರಸ್ಟ್ ಪ್ರಾರಂಭಿಸಿದೆ. ಶೀಘ್ರದಲ್ಲೇ ಅಯೋಧ್ಯೆಯಲ್ಲಿ ಭವ್ಯ ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ ಎಂದು ಫಾರೂಕಿ ಹೇಳಿದ್ದಾರೆ.

ಆದರೆ, ಪ್ರಸ್ತಾವಿತ ಮಸೀದಿ ಮತ್ತು ಆಸ್ಪತ್ರೆಯ ನಕ್ಷೆಯು ಇನ್ನೂ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಬಳಿ ಇದೆ, ಏಕೆಂದರೆ ಪ್ರಾಧಿಕಾರದಿಂದ ನಕ್ಷೆಯನ್ನು ನೀಡಲು ಮಸೀದಿ ಟ್ರಸ್ಟ್ ಆರಂಭದಲ್ಲಿ 1 ಕೋಟಿ ರೂಪಾಯಿಗಳನ್ನು ಅಭಿವೃದ್ಧಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಉತ್ತರ ಪ್ರದೇಶ ರಾಜ್ಯ ಸರ್ಕಾರವು ಮಸೀದಿ ಮತ್ತು ಆಸ್ಪತ್ರೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಎನ್‌ಒಸಿಗಳನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net