ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ದೈನಂದಿನ ಧಾರ್ಮಿಕ ಕ್ರಿಯೆಗಳನ್ನು ಮಾಡುವ ಪುರೋಹಿತರ ವೇತನವನ್ನು ಹೆಚ್ಚಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರದ ಅರ್ಚಕರು ಮತ್ತು ನೌಕರರ ವೇತನವನ್ನು ಹೆಚ್ಚಿಸಿದೆ. ಇದರೊಂದಿಗೆ ಅವರಿಗೆ ಇತರ ಸೌಲಭ್ಯಗಳನ್ನು ಒದಗಿಸುವುದಾಗಿಯೂ ತಿಳಿಸಿದೆ. ಪೂಜೆಯ ನಿರ್ವಹಣೆಯಲ್ಲಿ ತೊಡಗಿರುವ ಅರ್ಚಕರು ಮತ್ತು ಇತರ ನೌಕರರಿಗೆ ಭವಿಷ್ಯ ನಿಧಿ ಮತ್ತು ಪರಿಹಾರವನ್ನು ಟ್ರಸ್ಟ್ ನೀಡುತ್ತದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ದೇವಾಲಯದ ಪ್ರಧಾನ ಅರ್ಚಕರು ಮತ್ತು ಅರ್ಚಕೇತರ ನೌಕರರು, ಸ್ಟೋರ್ ಕೀಪರ್ಗಳು, ವ್ಯವಸ್ಥಾಪಕರು ಮತ್ತು ಇತರ ಸಿಬ್ಬಂದಿಯ ವೇತನವನ್ನು ಟ್ರಸ್ಟ್ 35 ರಿಂದ 40ರಷ್ಟು ಹೆಚ್ಚಿಸಿದೆ. ಸಂಬಳದ ಜತೆಗೆ ಟ್ರಸ್ಟ್ ತನ್ನ ನೌಕರರಿಗೆ ವಾರದ ರಜೆಯೊಂದಿಗೆ ವಸತಿ, ವೈದ್ಯಕಿಯ ಭತ್ಯೆಯನ್ನು ಸಹ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಟ್ರಸ್ಟ್ ಮೂಲಗಳ ಪ್ರಕಾರ ಪ್ರಧಾನ ಅರ್ಚಕರ ವೇತನ ಹೆಚ್ಚಳದಿಂದ ಮಾಸಿಕ ವೇತನ 25 ಸಾವಿರ ರೂಪಾಯಿಯಿಂದ 32,900 ರೂಪಾಯಿಗೆ ಏರಿಕೆಯಾಗಿದ್ದು, ಮಾಸಿಕ 20 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ಸಹಾಯಕ ಅರ್ಚಕರಿಗೆ ಈಗ 31 ಸಾವಿರ ರೂಪಾಯಿ ಹೆಚ್ಚಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ ಮೇ ತಿಂಗಳಲ್ಲಿ ತನ್ನ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿತ್ತು.
ರಾಮಮಂದಿರದ ಸಂಪೂರ್ಣ ನಿರ್ಮಾಣ ಕಾರ್ಯ 2025ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. 2024ರ ಜನವರಿ ವೇಳೆಗೆ ದೇವಾಲಯದ ನೆಲ ಅಂತಸ್ತು, ಡಿಸೆಂಬರ್ 2024ರಲ್ಲಿ ಎರಡನೇ ಹಂತವು ಪೂರ್ಣಗೊಳ್ಳಲಿದೆ. 2024ರ ಜನವರಿ 22ರಂದು ಹೊಸ ದೇವಸ್ಥಾನದಲ್ಲಿ ರಾಮಲಾಲಾ ಪ್ರತಿಷ್ಠಾಪನೆಯಾಗಲಿದೆ.
-ಚಂಪತ್ ರೈ, ಪ್ರಧಾನ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್