ಬಿ.ಸೀತಾರಾಮ ತೋಳ್ಪಡಿತ್ತಾಯಗೆ ಪ್ರಶಸ್ತಿ ಪ್ರದಾನ

Bel_Sitharama
Published on

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ, ಚೆಂಡೆ-ಮದ್ದಳೆವಾದಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ ಸಾಧನೆ ಮಾಡಿರುವ ಬಿ.ಸೀತಾರಾಮ ತೋಳ್ಪಡಿತ್ತಾಯ ಅವರಿಗೆ, ಬೆಂಗಳೂರಿನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸಿ ಪ್ರದಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಶಿವರಾಜ್ ಎಸ್.ತಂಗಡಗಿ, ವಿ.ಪ. ಸಭಾಪತಿ ಬಸವರಾಜ್ ಎಸ್.ಹೊರಟ್ಟಿ ಪ್ರಶಸ್ತಿ ಪ್ರದಾನಿಸಿದರು.

ಯಕ್ಷಗಾನ ಭಾಗವತ ಬಿ.ರಾಘವೇಂದ್ರ ತೋಳ್ಪಡಿತ್ತಾಯ ಅವರ ಪುತ್ರರಾದ ಇವರು, 1953 ಮಾ.26ರಂದು ಧರ್ಮಸ್ಥಳದಲ್ಲಿ ಜನಿಸಿದರು. ಬಿ.ಎ. ಪದವೀಧರರಾಗಿದ್ದು, ಪ್ರಾಥಮಿಕ ಶಿಕ್ಷಣದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿ, ವೇಷಗಾರಿಕೆ ಹಾಗೂ ಹಿಮ್ಮೇಳದಲ್ಲಿ ಅಭಿರುಚಿ ಬೆಳೆಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ವಿ.ವಿ.ಮಟ್ಟದಲ್ಲಿ ಯಕ್ಷಗಾನ ಹಿಮ್ಮೇಳದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದು, 1972ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಪ್ರಾರಂಭವಾಗುವಾಗ ಕೇಂದ್ರದ ವಿದ್ಯಾರ್ಥಿಯಾಗಿ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತ ಮುಂತಾದವರಿಂದ ಯಕ್ಷಗಾನ ನಾಟ್ಯ ಹಾಗೂ ಚೆಂಡೆ, ಮದ್ದಳೆವಾದನದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಪರಿಣತಿ ಪಡೆದಿದ್ದಾರೆ. ಕಳೆದ 50 ವರ್ಷಗಳಿಂದ ಯಕ್ಷಗಾನ ಬಯಲಾಟ ಹಾಗು ತಾಳಮದ್ದಳೆಗಳಲ್ಲಿ ಹಿಮ್ಮೇಳ ಕಲಾವಿದರಾಗಿ ನಿರಂತರ ಪರಿಶ್ರಮ ನಿರತರಾಗಿದ್ದಾರೆ. ತೆಂಕು-ಬಡಗು ಜೋಡಾಟ ಹಾಗೂ ಕೂಡಾಟಗಳಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ ಸೀತಾರಾಮ ತೋಳ್ಪಡಿತ್ತಾಯ, ಅನೇಕ ಯಕ್ಷಗಾನ ಆಟ, ಕೂಟ, ಗಾನವೈಭವ, ರೂಪಕಗಳನ್ನು ನಿರ್ದೇಶಿಸಿದ್ದಾರೆ.

ಬಹುಮುಖ ಯಕ್ಷಗಾನ ಕಲಾಸೇವೆಯನ್ನು ಗುರುತಿಸಿ ದೊಂಡೋಲೆಯ ಶ್ರೀಗಣೇಶೋತ್ಸವದಲ್ಲಿ ಸನ್ಮಾನಿಸಲಾಗಿದೆ. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ, ಎಡನೀರು ಶ್ರೀಪಾದರು ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಪ್ರದಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net