

ರಾಮನಗರ: ನನ್ನ ಅಂತ್ಯಕ್ರಿಯೆಯಲ್ಲಿ ನೀವು ಭಾಗಿಯಾಗಬೇಕೆಂದು ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟು ಕೊನೆಯುಸಿರೆಳೆದಿದ್ದ ಆಟೋ ಚಾಲಕನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಟೋ ಚಾಲಕನ ಕೊನೆಯ ಆಸೆಯನ್ನು ನೆರವೇರಿಸಿದರು.
ಆಟೋ ಚಾಲಕ ಜಯರಾಮು ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಬೊಮ್ಮಚನಹಳ್ಳಿ ಗ್ರಾಮದಲ್ಲಿ ನಡೆದ ಅವರ ಅಂತಿಮ ಸಂಸ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಜತೆ ಭಾಗವಹಿಸಿದರು.
ಜಯರಾಮು ಸಾವಿಗೂ ಮುನ್ನವೇ ತನ್ನ ಅಂಗಿಯಲ್ಲಿ ಡೆತ್ ನೋಟ್ ಬರೆದಿಟ್ಟುಕೊಂಡಿದ್ದರು. ನನ್ನ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಎಚ್ಡಿಕೆ ಭಾಗಿಯಾಗಬೇಕು. ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ. ಆತನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕು. ನಿಮ್ಮ ಋಣವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ. ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಅಂತಾ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟಿದ್ದರು.
ಜಯರಾಮುವಿನ ಕೊನೆಯ ಮಾತಿನಂತೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮೃತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ನಿಖಿಲ್, ಕುಟುಂಬಸ್ಥರಿಗೆ ಪರಿಹಾರದ ಹಣ ನೀಡಿದರು. (ದಿಗ್ವಿಜಯ ನ್ಯೂಸ್)