ಉಚಿತವಾಗಿ ಸಿಗಲ್ಲ ಅನ್ನಭಾಗ್ಯ ಅಕ್ಕಿ?

Anna Bhagya
Published on

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡೆಯುತ್ತಿರುವ ಅಕ್ಕಿ ಹಾಗೂ ಗೋಧಿಗೆ ಪಡಿತರದಾರರು ಇನ್ಮುಂದೆ ಹಣ ಪಾವತಿಸಬೇಕಾಗಬಹುದು. ಬಿಪಿಎಲ್ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸುತ್ತಿರುವ ಅಕ್ಕಿ ಹಾಗೂ ಗೋಧಿ ಪ್ರತಿ ಕೆಜಿಗೆ 2 ರೂ.ನಿಂದ 3 ರೂ.ವರೆಗೆ ದರ ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಸಾಧಕಬಾಧಕ ಬಗ್ಗೆ ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಉಚಿತ ಅಕ್ಕಿ ನೀಡುವ ಬದಲು ಕನಿಷ್ಠ ದರ ನಿಗದಿ ಮಾಡುವುದು ಸೂಕ್ತ ಎಂದಿದ್ದಾರೆ. ಹಾಗಾಗಿ, ದರ ನಿಗದಿಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಎಲ್ಲ ಅಂದುಕೊಂಡಂತೆ ನಡೆದರೆ ಬಜೆಟ್​ನಲ್ಲಿ ಈ ಹೊಸ ಯೋಜನೆ ಸೇರ್ಪಡೆಯಾಗಲಿದೆ.

  • 1,17,00,728: ರಾಜ್ಯದ ಬಿಪಿಎಲ್ ಕಾರ್ಡ್​ಗಳು
  • 3,90,47,574: ಬಿಪಿಎಲ್ ಕಾರ್ಡ್​ಗಳ ಸದಸ್ಯರು
  • 1.95 ಲಕ್ಷ ಮೆಟ್ರಿಕ್ ಟನ್ ಅಕ್ಕಿ: ಪ್ರತಿ ತಿಂಗಳು ಉಚಿತ ವಿತರಣೆ

ತಜ್ಞರ ಸಲಹೆ ಏನು?

  • ಅಕ್ಕಿಗೆ 3 ರೂ.ನಂತೆ ದರ ನಿಗದಿಗೊಳಿಸಿದರೆ ತಿಂಗಳಿಗೆ 58 ಕೋಟಿ ರೂ.ಆದಾಯ ಬರಲಿದೆ.
  • ಪ್ರತಿ ತಿಂಗಳ ಆದಾಯದಲ್ಲಿ ಪೋಷಕಾಂಶ ಸಹಿತ ಇನ್ನಿತರ ವಸ್ತು ನೀಡಬಹುದು
  • ಅಕ್ಕಿಗೆ ದರ ವಿಧಿಸಿದರೆ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಬಹುದು

159 ಕೋಟಿ ರೂ. ವೆಚ್ಚ: ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 30 ರೂ.ನಂತೆ ಖರೀದಿಸಿ ಪ್ರತಿ ತಿಂಗಳು ರಾಜ್ಯಕ್ಕೆ 3 ರೂ.ನಂತೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುತ್ತಿದೆ. ಅಕ್ಕಿ,ಗೋಧಿ ಖರೀದಿಗೆ, ಸಾಗಾಣಿಕೆ ವೆಚ್ಚ, ಹಮಾಲಿ ವೆಚ್ಚ ಸೇರಿ ರಾಜ್ಯ ಪ್ರತಿ ತಿಂಗಳು ಸರ್ಕಾರ 159 ಕೋಟಿ ರೂ. ಖರ್ಚು ಮಾಡುತ್ತಿದೆ.

ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದರಿಂದ ಪಡಿತರ ಸೋರಿಕೆ ತಡೆಗಾಗಿ ಪ್ರತಿ ಕೆಜಿ ಅಕ್ಕಿಗೆ ಕನಿಷ್ಠ ದರ ನಿಗದಿಪಡಿ ಸಬೇಕೆಂಬ ಸಲಹೆ ಬಂದಿದೆ. ಆದರೆ, ಈ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿಲ್ಲ.

| ಕೆ.ಗೋಪಾಲಯ್ಯ ಆಹಾರ ಇಲಾಖೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net