ಏಕದಿನ ವಿಶ್ವಕಪ್​ ವಿಜೇತ ತಂಡಕ್ಕೆ ಜೀವ ಬೆದರಿಕೆ; ಭಾರತೀಯ ಕ್ರೀಡಾಭಿಮಾನಿಗಳ ವಿರುದ್ಧ ದೂರು ಸಲ್ಲಿಸಿದ ಆಸೀಸ್​ ಆಟಗಾರರು

Australia
Published on

ನವದೆಹಲಿ: 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿರುವುದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಖಂಡಿತ ನಿರಾಸೆ ಮೂಡಿಸಿದೆ. ಕ್ರಿಕೆಟ್ ದಿಗ್ಗಜರು ಅಳುತ್ತಿರುವುದನ್ನು ಕಂಡು ಕೆಲ ಅಭಿಮಾನಿಗಳು ಇದೀಗ ತಾಳ್ಮೆ ಕಳೆದುಕೊಂಡು ತಪ್ಪು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕಪ್​ ವಿಜೇತ ತಂಡದ ಆಟಗಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸರ್ವಾಂಗೀಣ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ತಂಡವು ಆರನೇ ಬಾರಿಗೆ ಚಾಂಪಿಯನ್​​​ ಪಟ್ಟ ಅಲಂಕರಿಸಿತ್ತು. ಆದರೆ, ಇದೀಗ ವಿಶ್ವಕಪ್​ ವಿಜೇತ ತಂಡಕ್ಕೆ ಭಾರತ ತಂಡದ ಕ್ರಿಕೆಟ್​ ತಂಡದ ಅಭಿಮಾನಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಬಹುತೇಕ ಆಟಗಾರರು ಆರೋಪಿಸಿದ್ದಾರೆ.

ನವೆಂಬರ್ 19ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫಿನಾಲೆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಟ್ರಾವಿಸ್​ ಹೆಡ್​ ತಮ್ಮ ಅಮೋಘ ಶಥಕದ ಮೂಲಕ ತಂಡಕ್ಕೆ ಕಪ್​ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಭಾರತದ ಕ್ರಿಕೆಟ್​ ಅಭಿಮಾನಿಗಳು ಟ್ರಾವಿಸ್​ ಹೆಡ್​ ಅವರ ಪತ್ನಿ ಹಾಗೂ ಮಗಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಈ ಬಗ್ಗೆ ದೂರುಗಳು ಸಹ ದಾಖಲಾಗಿದ್ದಾವೆ.

ಇದೇ ವಿಚಾರವಾಗಿ ಈಚೆಗೆ ಕ್ರಿಕೆಟಿಗ ಮ್ಯಾಕ್ಸ್​ವೆಲ್ ಪತ್ನಿ ವಿನಿ ರಾಮನ್​ ಸಾಮಾಜಿಕ ಜಾಲತಾಣದಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದರು. ಈ ವಿಚಾರವಾಗಿ ಹಲವು ಮಾಜಿ ಆಟಗಾರರು ದನಿಗೂಡಿಸಿದ್ದು, ಭಾರತೀಯ ಕ್ರಿಕೆಟ್​ ಅಭಿಮಾನಿಗಳ ನಡೆಯನ್ನು ಆಕ್ಷೇಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net