

ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಅಂತಿಮ ದಿನದಾಟದ ಕುತೂಹಲಕ್ಕೆ ತೆರೆಬಿದ್ದಿದೆ. ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದ್ದು, ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ 2ನೇ ಬಾರಿ ಚಾಂಪಿಯನ್ ಆಗುವ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿದೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 444ರನ್ಗಳ ಕಠಿಣ ಸವಾಲಿಗೆ ಐದನೇ ದಿನದಾಟದಲ್ಲಿ ಉತ್ತಮ ಪೈಪೋಟಿ ನೀಡದೆ ಭಾರತ ತಂಡ ಸೋಲು ಒಪ್ಪಿಕೊಂಡಿತು. ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಸ್ಟೀವ್ ಸ್ಮಿತ್ (121) ಹಾಗೂ ಟ್ರಾವಿಸ್ ಹೆಡ್ (163) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 469 ರನ್ ಕಲೆಹಾಕಿತ್ತು.
ಆಸೀಸ್ ನೀಡಿದ ಸವಾಲಿನ ಮೊತ್ತಕ್ಕೆ ಪ್ರತ್ಯುತ್ತರ ನೀಡುವಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಎಡವಿದರು. ಅಗ್ರ ಕ್ರಮಾಂಕದ ವೈಫಲ್ಯದ ಹೊರತಾಗಿ ಅಜಿಂಕ್ಯಾ ರಹಾನೆ (89) ಹಾಗೂ ಶಾರ್ದೂಲ್ ಠಾಕೂರ್ (51) ಅವರ ಅರ್ಧಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 173 ರನ್ಗಳ ಹಿನ್ನಡೆ ಅನುಭವಿಸಿತು.
173 ರನ್ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 270 ರನ್ಗಳಿಸಿದ್ದ ವೇಳೆ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 444 ರನ್ಗಳ ಗುರಿಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 234 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಆಸ್ಟ್ರೇಲಿಯಾ 209 ರನ್ಗಳ ಭರ್ಜರಿ ಜಯದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಟ್ಟ ಅಲಂಕರಿಸಿಕೊಂಡಿತು.