

ಸಿಡ್ನಿ: ಭಾರತದ ಸಂಪೂರ್ಣ ದೇಸೀ ಕರೊನಾ ಲಸಿಕೆಯಾದ ಕೋವಾಕ್ಸಿನ್ಗೆ ಆಸ್ಟ್ರೇಲಿಯಾ ಸರ್ಕಾರ ಮಾನ್ಯತೆ ನೀಡಿದೆ. ಇದರಿಂದಾಗಿ ಕೋವಾಕ್ಸಿನ್ ಪಡೆದಿರುವ ಭಾರತೀಯರು ಆಸ್ಟ್ರೇಲಿಯಾಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಭಾರತದ ಕೋವಿಶೀಲ್ಡ್ ಲಸಿಕೆಗೆ ಇದಕ್ಕೂ ಮುಂಚೆಯೇ ಮಾನ್ಯತೆ ನೀಡಲಾಗಿತ್ತು.
ಭಾರತ್ ಬಯೋಟೆಕ್ ತಯಾರಿಸುವ ಲಸಿಕೆಯಾದ ಕೋವಾಕ್ಸಿನ್ಅನ್ನು ಜಾಗತಿಕ ಮಟ್ಟದ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್(ಈಯುಎಲ್)ಗೆ ಸೇರಿಸುವ ಬಗ್ಗೆ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ), ಇನ್ನೆರಡು ದಿನಗಳಲ್ಲಿ ಅಂತಿಮ ಚರ್ಚೆ ಇಟ್ಟುಕೊಂಡಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಈ ನಿರ್ಧಾರವು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಈ ಮುನ್ನ ಸೀರಮ್ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ ಲಸಿಕೆಗೆ ಮತ್ತು ಚೀನಾದ ಸಿನೋವಾಕ್ಗೆ ಸಹ ಈ ದೇಶ ಮನ್ನಣೆ ನೀಡಿತ್ತು. ಆಸ್ಟ್ರೇಲಿಯಾದಲ್ಲಿ ಲಸಿಕೆಗಳನ್ನು ನಿಯಂತ್ರಿಸುವ ಮತ್ತು ಪರವಾನಗಿ ನೀಡುವ ಥೆರಪಿಟಿಕ್ಸ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ ಈ ಬಗ್ಗೆ ಹೇಳಿಕೆ ನೀಡಿದ್ದು, "ಈ (ಗುರುತಿಸಲ್ಪಟ್ಟ) ಲಸಿಕೆಗಳು ರಕ್ಷಣೆ ಒದಗಿಸುತ್ತವೆ ಹಾಗೂ ಇದನ್ನು ಪಡೆದ ಪ್ರಯಾಣಿಕರು ಆಸ್ಟ್ರೇಲಿಯಾದಲ್ಲಿ ಇತರರಿಗೆ ಕೋವಿಡ್ 19 ಹರಡುವ ಅಥವಾ ಕೋವಿಡ್ 19 ಸೋಂಕಿನಿಂದ ತುಂಬಾ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳನ್ನು ಕಡಿಮೆ ಎಂದು ತೋರಿಸುವ ಹೆಚ್ಚುವರಿ ಮಾಹಿತಿ ನಮಗೆ ಕಳೆದ ಕೆಲವು ವಾರಗಳಲ್ಲಿ ಲಭ್ಯವಾಗಿದೆ" ಎಂದಿದೆ.
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಪಡೆದಿರುವ ಭಾರತೀಯರು ಹಾಗೂ ಇತರ ದೇಶಗಳ ನಾಗರಿಕರನ್ನು ಆಸ್ಟ್ರೇಲಿಯಾ ಪೂರ್ಣ ಲಸಿಕೀಕೃತರೆಂದು ಪರಿಗಣಿಸಲಿದೆ. ಇದರಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಲ್ಲಿಗೆ ಮರಳಲು ಮತ್ತು ಉದ್ಯೋಗಿಗಳು-ಕಾರ್ಮಿಕರು ಪ್ರಯಾಣಿಸಲು ಅವಕಾಶ ಒದಗಿದಂತಾಗಿದೆ. (ಏಜೆನ್ಸೀಸ್)