ಕಾರವಾರ: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಫೇಶಿಯಲ್ ರೆಕಗ್ನೈಜೇಶನ್ ಮೊಬೈಲ್ ಆ್ಯಪ್ ಮೂಲಕ ಪಡೆದುಕೊಳ್ಳುವ ವಿಧಾನವನ್ನು ಅಳವಡಿಸುವ ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ಅವರು ಬುಧವಾರ ಜಿಪಂ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಸಿ ಮಾತನಾಡಿದರು. ಎಲ್ಲ ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಪೈಲಟ್ ಯೋಜನೆಯಾಗಿ ಮಕ್ಕಳ ಹಾಜರಾತಿಯನ್ನು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಮೊಬೈಲ್‌ನಲ್ಲಿ ಫೇಶಿಯಲ್ ರೆಕಗ್ನೇಶನ್ ಮೂಲಕ ಪಡೆದುಕೊಂಡಿದ್ದು, ಯೋಜನೆಯು ಯಶಸ್ವಿಯಾಗಿದೆ. ಉತ್ತರ ಕನ್ನಡದಲ್ಲಿಯೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ಯಾವುದೇ ಸಮಸ್ಯೆಯಿಲ್ಲವೆಂದು ತಿಳಿಸಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದರು.
ಈ ವ್ಯವಸ್ಥೆಯಿಂದ ರಾಜ್ಯದ ಪ್ರತಿ ಶಾಲೆಗಳಲ್ಲಿ ಪ್ರತಿ ದಿನದ ವಿದ್ಯಾರ್ಥಿಗಳ ನಿಖರ ಹಾಜರಾತಿ ಮತ್ತು ಗೈರಾದವರ ವಿವರ ದೊರೆಯಲಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರೂಪಿಸಿರುವ ಅನೇಕ ಯೋಜನೆಗಳ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ ಎಂದರು.
ಭಟ್ಕಳ ಬಂದ್‌ಗೆ ನೀರಸ ಪ್ರತಿಕ್ರಿಯೆ (vijayavani.net)https://www.vijayavani.net/a-lackluster-response-to-bhatkals-bandh