ನವದೆಹಲಿ: ದೇಶದ ವಿರುದ್ಧ ನಕಾರಾತ್ಮಕತೆ ಹರಡುವವರ ವಿರುದ್ಧ ಮತ್ತು ಪ್ರಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದವರ ವಿರುದ್ಧ ವಾಗ್ದಾಳಿ ನಡೆಸಿದ ಪಿಎಂ, ಕೆಲವರಿಗೆ ಭಾರತದ ಪ್ರಗತಿಯನ್ನು ನೋಡಲಾಗುತ್ತಿಲ್ಲ. ಭಾರತವನ್ನು ಅರಾಜಕತೆ ಮತ್ತು ವಿನಾಶದತ್ತ ಕೊಂಡೊಯ್ಯಲು ಬಯಸುವ ಇಂಥವರಿಂದ ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭ್ರಷ್ಟರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಭ್ರಷ್ಟರ ವಿರುದ್ಧ ಸಮರ ಸಾರಿದ್ದೇನೆ. ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲಾಗಿದೆ. ಆದರೂ, ಈ ರಾಷ್ಟ್ರದ ಮುಂದೆ ನನ್ನ ಪ್ರತಿಷ್ಠೆ ಮುಖ್ಯವಲ್ಲ. ನಾನು ಭ್ರಷ್ಟರ ಮನಸ್ಸಿನಲ್ಲಿ ಭಯ ಸ್ಥಾಪಿಸಲು ಬಯಸುತ್ತೇನೆ. ಇದರಿಂದ ಅವರು ಸಾಮಾನ್ಯ ಜನರಿಗೆ ಮೋಸ ಮಾಡುವ ಧೈರ್ಯ ಹೊಂದುವುದಿಲ್ಲ ಎಂದು ತಿಳಿಸಿದರು.
ಕೊಲ್ಕತ್ತಾ ಅತ್ಯಾಚಾರ ಬಗ್ಗೆ ಪರೋಕ್ಷ ಉಲ್ಲೇಖ
ಕೊಲ್ಕತ್ತಾದಲ್ಲಿ ಯುವ ವೈದ್ಯೆ ಅತ್ಯಾಚಾರ ಪ್ರಕರಣದಿಂದ ಟಿಎಂಸಿಯ ಮಮತಾ ಬ್ಯಾನರ್ಜಿ ಸರ್ಕಾರ ಸಾರ್ವಜನಿಕ ಒತ್ತಡಕ್ಕೆ ಸಿಲುಕಿರುವ ಮಧ್ಯೆ, ಮಹಿಳಾ ದೌರ್ಜನ್ಯದ ಬಗ್ಗೆ ಸಮಾಜ ಆಕ್ರೋಶಗೊಂಡಿರುವುದು ನನಗೆ ಅರ್ಥವಾಗುತ್ತದೆ. ರಾಜ್ಯ ಸರ್ಕಾರಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಸಲಹೆ ನೀಡಿದ್ದಾರೆ. ಪರೋಕ್ಷವಾಗಿ ಪ್ರಧಾನಿ ಬಂಗಾಳ ಸರ್ಕಾರವನ್ನೇ ಉದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ. ಮಹಿಳೆಯರು ಭಾರತೀಯ ಸೇನೆ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸೇವೆ ನೀಡುತ್ತಿದ್ದಾರೆ. ಆದರೆ ಈ ಭರವಸೆಗಳ ಮಧ್ಯೆ ಆತಂಕವೂ ಇದ್ದು, ಕೆಂಪುಕೋಟೆಯಿಂದ ನಾನು ಇದನ್ನು ಬೇಸರದಿಂದ ಹೇಳಬೇಕಿದೆ. ಮಹಿಳಾ ದೌರ್ಜನ್ಯ, ಶೋಷಣೆ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ. ನಮ್ಮ ತಾಯಿ, ಸೋದರಿಯರ ಮೇಲಿನ ಹಿಂಸೆಗಳ ಕುರಿತು ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿದ್ದು, ಈ ಪ್ರಕರಣ ತನಿಖೆಯನ್ನು ತ್ವರಿತಗತಿಯಲ್ಲಿ ಮಾಡಬೇಕಿದೆ. ಯಾರು ಕುಕೃತ್ಯಗಳನ್ನು ಎಸಗುತ್ತಾರೋ ಅವರಿಗೆ ಅತಿ ಕಠಿಣ ಶಿಕ್ಷೆ ಅತಿವೇಗದಲ್ಲಿ ಖಾತರಿಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ನಂಬಿಕೆ ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ದೌರ್ಜನ್ಯದ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ. ಆದರೆ ಇಂತಹ ವಿಕೃತ ವ್ಯಕ್ತಿಗಳಿಗೆ ಶಿಕ್ಷೆಯಾದಾಗ, ಅದು ಸುದ್ದಿಯಲ್ಲಿ ಪ್ರಮುಖವಾಗಿ ಕಂಡುಬರುವುದಿಲ್ಲ. ಅಪರಾಧಿಗಳಲ್ಲಿ ಭಯ ಸೃಷ್ಟಿಯಾಗಬೇಕೆಂದರೆ ಶಿಕ್ಷೆಯ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ಈ ಭಯ ಸೃಷ್ಟಿಸುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ್ದಾರೆ.
ಹಿಂದುಗಳ ಸುರಕ್ಷತೆ ಬಗ್ಗೆ ಕಳವಳ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಹಿಂದುಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ 140 ಕೋಟಿ ಭಾರತೀಯರು ಕಳವಳ ಹೊಂದಿದ್ದಾರೆ. ಭಾರತವು ಶಾಂತಿಗೆ ಬದ್ಧವಾಗಿದೆ. ಅಭಿವೃದ್ಧಿ ಪಯಣದಲ್ಲಿ ಬಾಂಗ್ಲಾದೇಶ ನಮ್ಮ ಹಿತೈಷಿಯಾಗಿದೆ. ಅಲ್ಲಿ ಪರಿಸ್ಥಿತಿ ಶೀಘ್ರದಲ್ಲೇ ಸಾಮಾನ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿನ ಹಿಂದುಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಈಗ ಖಾತ್ರಿಪಡಿಸಲಾಗಿದೆ. ಭಾರತವು ಯಾವಾಗಲೂ ನೆರೆಯ ದೇಶವು ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಬೇಕೆಂದು ಬಯಸುತ್ತದೆ ಎಂದು ಅವರು ಹೇಳಿದರು.
ಸಂವಿಧಾನದ ಮಹತ್ವ : ದಲಿತರು, ತುಳಿತಕ್ಕೊಳಗಾದವರು ಮತ್ತು ಸಮಾಜದ ವಂಚಿತ ವರ್ಗಗಳ ಹಕ್ಕುಗಳನ್ನು ಕಾಪಾಡುವಲ್ಲಿ ಸಂವಿಧಾನವು ಪ್ರಮುಖವಾಗಿದೆ. ನಾಗರಿಕರು ಸಾಮೂಹಿಕವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದಾಗ ಅವರು ಸ್ವಾಭಾವಿಕವಾಗಿ ಪರಸ್ಪರರ ಹಕ್ಕುಗಳ ರಕ್ಷಕರಾಗುತ್ತಾರೆ. ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಯಾವುದೇ ಹೆಚ್ಚುವರಿ ಪ್ರಯತ್ನದ ಅಗತ್ಯವಿಲ್ಲದೆ ನಾವು ಹಕ್ಕುಗಳನ್ನು ರಕ್ಷಣೆ ಮಾಡಿದಂತಾಗುತ್ತದೆ. ಸಂವಿಧಾನದ ಅಂಗೀಕಾರದ 75ನೇ ವಾರ್ಷಿಕೋತ್ಸವವು ರಾಷ್ಟ್ರವನ್ನು ಒಗ್ಗೂಡಿಸುವ ಮತ್ತು ಬಲಪಡಿಸುವಲ್ಲಿ ಪ್ರಮುಖ ಹೆಗ್ಗುರುತಾಗಿದೆ ಎಂದು ಮೋದಿ ಹೇಳಿದರು. ಬಿಜೆಪಿಯು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ಪ್ರಧಾನಿ ಮೋದಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮೂಲ ಸೌಕರ್ಯದಲ್ಲಿ ಅಪಾರ ಸುಧಾರಣೆ: ಕಳೆದ 10 ವರ್ಷಗಳಲ್ಲಿ ಸರ್ಕಾರವು ಮೂಲ ಸೌಕರ್ಯಗಳನ್ನು ಆಧುನೀಕರಿಸುವತ್ತ ದೊಡ್ಡ ಕ್ರಮಗಳನ್ನು ತೆಗೆದುಕೊಂಡಿದೆ. ವ್ಯವಸ್ಥಿತ ಮೌಲ್ಯಮಾಪನಗಳು, ಮೂಲಸೌಕರ್ಯ ಮತ್ತು ಸೇವೆಗಳಲ್ಲಿ ಸುಧಾರಣೆಗಳ ಮೂಲಕ ನಗರ ಪ್ರದೇಶಗಳಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸಲಾಗುತ್ತಿದೆ. ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಬ್ರಾಡ್ಬ್ಯಾಂಡ್ ಸಂಪರ್ಕ, ಪ್ರತಿ ಹಳ್ಳಿಯ ಹೊಸ ಶಾಲೆಗಳು, ಆಸ್ಪತ್ರೆಗಳು, ಆರೋಗ್ಯ ಮಂದಿರಗಳು, ಮೂಲ ಸೌಕರ್ಯಗಳಲ್ಲಿ ಕಳೆದ 10 ವರ್ಷಗಳಲ್ಲಿ ಅಪಾರ ಪ್ರಗತಿಯಾಗಿದೆ. ಹೊಸ ವೈದ್ಯಕೀಯ ಕಾಲೇಜು ಗಳು ಮತ್ತು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಎನ್ಡಿಎ ಸರ್ಕಾರದಿಂದ ನಾಲ್ಕು ಕೋಟಿ ಮನೆ ಗಳನ್ನು ನಿರ್ವಿುಸಲಾಗಿದೆ. ಇನ್ನೂ ಮೂರು ಕೋಟಿ ಮನೆಗಳು ನಿರ್ಮಾಣ ಹಂತದಲ್ಲಿವೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಮೂಲ ಸೌಕರ್ಯಗಳನ್ನು ಆಧುನೀಕರಿಸುವ ನಿಟ್ಟಿನಲ್ಲಿ ನಾವು ದೊಡ್ಡ ಹೆಜ್ಜೆಗಳನ್ನು ಇಟ್ಟಿದ್ದೇವೆ ಎಂದರು.
98 ನಿಮಿಷದ ಭಾಷಣ: ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ಕೋಟೆಯಿಂದ ಮಾಡಿದ ಅತಿ ಸುದೀರ್ಘ ಭಾಷಣ ಇದಾಗಿದೆ. ಒಟ್ಟು 98 ನಿಮಿಷಗಳ ಕಾಲ ಭಾಷಣ ಮಾಡಿದ ಪಿಎಂ, ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ಭಾಷಣ ಮಾಡಿದ ಖ್ಯಾತಿ ಹೊಂದಿದ್ದಾರೆ. 2016ರಲ್ಲಿ 96 ನಿಮಿಷಗಳ ಭಾಷಣ ಮಾಡಿದ್ದ ಅವರು, 2017ರಲ್ಲಿ ಸುಮಾರು 56 ನಿಮಿಷಗಳ ಮಾತನಾಡಿದ್ದು, ಸಣ್ಣ ಅವಧಿಯ ಭಾಷಣವಾಗಿತ್ತು.
ರಾಹುಲ್ಗೆ ಹಿಂದಿನ ಸೀಟು: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾಜರಾಗಿ ಗಮನಸೆಳೆದರು. ಅವರು ಒಲಿಂಪಿಕ್ಸ್ ಪದಕ ವಿಜೇತರೊಂದಿಗೆ ಎರಡನೇ ಸಾಲಿನಲ್ಲಿ ಕುಳಿತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಳಿ ಕುರ್ತಾ-ಪೈಜಾಮಾ ಧರಿಸಿದ್ದ ರಾಹುಲ್, ಭಾರತದ ಹಾಕಿ ತಂಡದ ಆಟಗಾರ ಗುರ್ಜಂತ್ ಸಿಂಗ್ ಪಕ್ಕದಲ್ಲಿ ಕುಳಿತಿದ್ದರು. ಮುಂದಿನ ಸಾಲುಗಳಲ್ಲಿ ಶೂಟಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ರಂತಹ ಪದಕ ವಿಜೇತರು ಕುಳಿತಿದ್ದರು. ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಪಿಆರ್ ಶ್ರೀಜೇಶ್ ಸೇರಿ ತಂಡದ ಸದಸ್ಯರು ಕೂಡ ರಾಹುಲ್ ಗಾಂಧಿಯವರಿಗಿಂತ ಮುಂದೆ ಕುಳಿತಿದ್ದರು. ಶಿಷ್ಟಾಚಾರದ ಪ್ರಕಾರ, ಲೋಕಸಭೆಯ ವಿಪಕ್ಷ ನಾಯಕ ಸ್ಥಾನ ಕ್ಯಾಬಿನೆಟ್ ಸಚಿವರಿಗೆ ಸ್ಥಾನಮಾನಕ್ಕೆ ಸಮನಾಗಿರುತ್ತದೆ. ಅವರಿಗೆ ಯಾವಾಗಲೂ ಮುಂದಿನ ಸಾಲಿನಲ್ಲಿ ಆಸನ ನಿಗದಿಪಡಿಸಲಾಗುತ್ತದೆ. ಮುಂದಿನ ಸಾಲಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಷಾ ಮತ್ತು ಎಸ್ ಜೈಶಂಕರ್ ಕುಳಿತಿದ್ದರು. ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿರುವಂತೆ ಮುಂದಿನ ಸಾಲುಗಳನ್ನು ಒಲಿಂಪಿಕ್ ಪದಕ ವಿಜೇತರಿಗೆ ನಿಗದಿಪಡಿಸಿದ್ದರಿಂದ ರಾಹುಲ್ ಅವರನ್ನು ಹಿಂದಕ್ಕೆ ಸ್ಥಳಾಂತರಿಸಬೇಕಾಯಿತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಿರ್ವಹಿಸುವ ಮತ್ತು ಆಸನ ವ್ಯವಸ್ಥೆಗೊಳಿಸುವ ಜವಾಬ್ದಾರಿ ರಕ್ಷಣಾ ಸಚಿವಾಲಯದ್ದಾಗಿದೆ. ವಿಪಕ್ಷ ನಾಯಕನಿಗೆ ಮೊದಲ ಸಾಲುಗಳಲ್ಲಿ ಸ್ಥಾನ ನೀಡುವುದು ಶಿಷ್ಟಾಚಾರ. ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಆಡಳಿತದಲ್ಲಿ, ಸೋನಿಯಾ ಗಾಂಧಿಯರಿಗೆ ಮೊದಲ ಸಾಲಿನಲ್ಲೇ ಆಸನ ನೀಡಲಾಗುತ್ತಿತ್ತು.
ಬಿಎಸ್ ಯಡಿಯೂರಪ್ಪ ಆಪ್ತ, ಅರಸೀಕೆರೆ ಮಾಜಿ ಶಾಸಕ ಎ.ಎಸ್ ಬಸವರಾಜು ನಿಧನ