

ನವದೆಹಲಿ: ಕಳೆದ 5 ವರ್ಷಗಳಲ್ಲಿ ವಿದೇಶಗಳಲ್ಲಿ(Abroad) ನಡೆದ ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 91 ಕೇಸ್ ದಾಖಲಾಗಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ್ ಸಿಂಗ್ ಲೋಕಸಭೆಯಲ್ಲಿ ಶುಕ್ರವಾರ ಉತ್ತರಿಸಿದರು.
ಕಾಂಗ್ರೆಸ್ ಸಂಸದ ತನುಜ್ ಪುನಿಯಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, '' ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆ ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಮಾನ್ಯತೆ ಪಡೆದ ಆಯಾ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಅಹಿತಕರ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ಅಂತಹ ದುರದೃಷ್ಟಕರ ಘಟನೆಗಳು ಯಾವುದಾದರೂ ಇದ್ದರೆ, ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಆತಿಥೇಯ ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ" ಎಂದು ಹೇಳಿದರು.
ಇನ್ನು ವಿದೇಶಾಂಗ ಇಲಾಖೆ ಮಾಹಿತಿ ಪ್ರಕಾರ, ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಅತಿ ಹೆಚ್ಚು ದಾಳಿಯ ಪ್ರಕರಣಗಳನ್ನು ಹೊಂದಿದೆ. ಅಂದರೆ, 27 ಹಿಂಸಾತ್ಮಾಕ ದಾಳಿ ಹೊಂದಿದ್ದು, ಅದರಲ್ಲಿ 16 ಮಾರಕವಾಗಿವೆ. 2ನೇ ಸ್ಥಾನದಲ್ಲಿ ರಷ್ಯಾ ಇದ್ದು, 15 ದಾಳಿ ನಡೆದಿದೆ. ಆದರೆ, ಯಾವುದೇ ಸಾವು ಆಗಿಲ್ಲ ಎಂದು ಇಲಾಖೆ ಮಾಹಿತಿ ತಿಳಿಸಿದೆ.
ಇಂಗ್ಲೆಂಡ್, ಜರ್ಮನಿಯಲ್ಲಿ ಕ್ರಮವಾಗಿ 12, 11 ದಾಳಿಯಾಗಿದ್ದು, 1 ಸಾವಾಗಿದೆ. ಚೀನಾ ಮತ್ತು ಕಿರ್ಗಿಸ್ತಾನ್ನಿಂದ ತಲಾ ಒಂದು ಮಾರಕ ಪ್ರಕರಣ ವರದಿಯಾಗಿದೆ. ಐರ್ಲೆಂಡ್, ಫಿಲಿಪೈನ್ಸ್, ಇಟಲಿ ಮತ್ತು ಇರಾನ್ ಕ್ರಮವಾಗಿ ನಾಲ್ಕು, ಮೂರು, ಮೂರು ಮತ್ತು ಒಂದು ಪ್ರಕರಣಗಳನ್ನು ವರದಿ ಮಾಡಿದೆ, ಅವುಗಳಲ್ಲಿ ಯಾವುದೂ ಸಾವುಗಳಿಗೆ ಕಾರಣವಾಗಲಿಲ್ಲ. ಆಸ್ಟ್ರೇಲಿಯಾವು ಒಂದು ಸಾವು ಸೇರಿದಂತೆ ನಾಲ್ಕು ಘಟನೆಗಳನ್ನು ದಾಖಲಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.(ಏಜೆನ್ಸೀಸ್)