

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲಿನ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಸದ್ಯ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಟನ ಮೇಲಿನ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಕೆಲಸದಾಕೆ ಸೇರಿದಂತೆ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದಿದ್ದು, ಶಂಕೆಯ ಮೇರೆಗೆ ಹಲವರನ್ನುವಿಚಾರಣೆಗೆ ಒಳಪಡಿಸಿದ್ದಾರೆ. ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರು ಪೊಲೀಸರ ಎದುರು ಶಾಕಿಂಗ್ ವಿಚಾರ ಒಂದನ್ನು ರಿವೀಲ್ ಮಾಡಿದ್ದು, ಆರೋಪಿ 1 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಗುರುವಾರ (ಜನವರಿ 16) ನಸುಕಿನ ಜಾವ ಆರೋಪಿ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ದಾಳಿ ಮಾಡಿದ್ದು, ಆ ವೇಳೆ ಮನೆಯಲ್ಲಿ ಯಾರು ಎದ್ದಿರಲಿಲ್ಲ. ಈ ವೇಳೆ ಆರೋಪಿಯು ಸೈಫ್ ಅಲಿ ಖಾನ್ರ ದ್ವಿತೀಯ ಪುತ್ರ ಜೇಹ್ ಮಲಗಿದ್ದ ಕೋಣೆಗೆ ನುಗ್ಗಿದ್ದು, ಒಂದು ಕೋಟಿ ರೂಪಾಯಿ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ಆತ ನನ್ನ ಮೇಲೆ ಚಾಕು ಹಾಗೂ ಕೋಲಿನಿಂದ ಹಲ್ಲೆ ನಡೆಸಿದ ಎಂದು 56 ವರ್ಷದ ನರ್ಸ್ ಎಲಿಯಾಮಾ ಫಿಲಿಪ್ ವಿಚಾರಣೆ ವೇಳೆ ಹೇಳಿದ್ದಾರೆ.
ಕಳ್ಳ ನನ್ನ ಮೇಲೆ ಹಲ್ಲೆ ಮಾಡಿದಾಗ ನಾನು ಜೋರಾಗಿ ಕೂಗಿಕೊಂಡೆ. ಇದರಿಂದ ಮನೆಮಂದಿಯೆಲ್ಲಾ ಎಚ್ಚರಗೊಂಡು ತಕ್ಷಣವೇ ನನ್ನ ನೆರವಿಗೆ ಧಾವಿಸಿದರು. ಸೈಫ್ ಅಲಿ ಖಾನ್ ಅವರು ಹೆಂಡತಿ, ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಸೈಫ್ ಮೇಲೆ ಕಳ್ಳ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ಸೈಫ್ ಅವರಿಗೆ ಅನೇಕ ಗಂಭೀರ ಗಾಯಗಳಾಗಿವೆ. ಮನೆಯಲ್ಲಿ ಇರುವ ಇನ್ನೂ ಹೆಚ್ಚಿನ ಸಿಬ್ಬಂದಿ ಆಗಮಿಸುವುದರೊಳಗೆ ಕಳ್ಳ ಎಸ್ಕೇಪ್ ಆದ ಎಂದು ನರ್ಸ್ ಎಲಿಯಾಮಾ ಫಿಲಿಪ್ ಪೊಲೀಸರ ಬಳಿ ಹೇಳಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೈಫ್ ಅಲಿ ಖಾನ್ಗೆ ಆರೋಪಿಯು 6 ಕಡೆ ಚುಚ್ಚಿದ್ದು, ಸದ್ಯ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರಿಎ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದು, ನಿಗಾ ವಹಿಸಿದ್ದಾರೆ. ನಟನ ಆರೋಗ್ಯದ ಕುರಿತಾಗಿ ಆಸ್ಪತ್ರೆ ಸಿಬ್ಬಂದಿ ಪ್ರಕಟಣೆಯನ್ನು ಹೊರಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.