ಕಾಸರಗೋಡು: ಎಡನೀರುಶ್ರೀಗಳು ಸಂಚರಿಸುತ್ತಿದ್ದ ವಾಹನದ ಮೇಲೆ ಬೋವಿಕ್ಕಾನದ ಬಾವಿಕೆರೆಯಲ್ಲಿ ದಾಳಿ ನಡೆಸಿದ್ದು, ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಭಾನುವಾರ ಶ್ರೀಗಳು ಚೆರುಪುಳದಿಂದ ವಾಪಸಾಗುವಾಗ ರಾಜ್ಯಮಟ್ಟದ ಸೈಕಲ್ ರ‌್ಯಾಲಿಯೊಂದು ರಸ್ತೆಯಲ್ಲಿ ಹಾದುಹೋಗುತ್ತಿದ್ದ ಹಿನ್ನೆಲೆಯಲ್ಲಿ ಇರಿಯಣ್ಣಿಯಲ್ಲಿ ಕಾರಿಗೆ ತಡೆಯೊಡ್ಡಲಾಗಿತ್ತು. ಎಡನೀರು ಶ್ರೀಗಳು ಸಂಚರಿಸುತ್ತಿರುವ ವಾಹನ ಎಂದು ತಿಳಿಯುತ್ತಿದ್ದಂತೆ ಕಾರಿಗೆ ಮುಂದಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಮುಂದೆ ಬಾವಿಕೆರೆಯಲ್ಲಿ ಸೈಕಲ್ ರ‌್ಯಾಲಿಯ ಕಾರ್ಯಕರ್ತರೆನ್ನಲಾದ ಕೆಲವು ಮಂದಿಯಿದ್ದ ತಂಡ ಕಾರಿಗೆ ತಡೆಯೊಡ್ಡಿ, ಲಾಟಿಯಿಂದ ಹೊಡಿದಿದೆ. ಆಸುಪಾಸಿನವರು ಕೃತ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಸ್ವಾಮೀಜಿ ಕಾರಿಗೆ ಲಾಟಿಪ್ರಹಾರ ನಡೆಸಿದ ಕೃತ್ಯ ಕಾಡ್ಗಿಚ್ಚಿನಂತೆ ವ್ಯಾಪಿಸಿದೆ.
ಸೋಮವಾರ ಎಡನೀರು ಮಠದ ವಠಾರದಲ್ಲಿ ಪಕ್ಷಭೇದ ಮರೆತು ನೂರಾರು ಮಂದಿ ಪ್ರತಿಭಟನೆ ನಡೆಸಿ, ಕೃತ್ಯವನ್ನು ಖಂಡಿಸಿದ್ದರು. ಕೃತ್ಯವನ್ನು ಮಧೂರು ಕ್ಷೇತ್ರ ಪುನರ್ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯೂ ಖಂಡಿಸಿದೆ.
ಪ್ರತಿಭಟನೆ
ಶ್ರೀಪಾದಂಗಳವರ ವಾಹನದ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡಿಸಿ ನ.5ರಂದು ಸಂಜೆ 5ಕ್ಕೆ ಬೋವಿಕ್ಕಾನ ಪೇಟೆಯಲ್ಲಿ ಸಮಸ್ತ ಹಿಂದು ಸಂಘಟನೆಗಳು, ದೇವಾಲಯದ ಭಕ್ತರು ಮತ್ತು ಸಮುದಾಯದ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.