'ಟಿಕ್​ಟಾಕ್​ ಸ್ಟಾರ್​' ಈಗ 'ಹಾಫ್​' ಚಿತ್ರದ ನಾಯಕಿ!

Half - Final
Published on

ಬೆಂಗಳೂರು:ಟಿಕ್​ಟಾಕ್​ನಲ್ಲಿ ಸ್ಟಾರ್​ ಆಗಿ ಮಿಂಚಿದವರು ಹಲವರಿದ್ದಾರೆ. ಈ ಪೈಕಿ ಬೆಂಗಳೂರಿನ ಅಥಿರಾ ಸಹ ಒಬ್ಬರು. ಟಿಕ್​ಟಾಕ್​ನಲ್ಲಿ ಎಂಟು ಲಕ್ಷ ಹಿಂಬಾಲಕರನ್ನು ಹೊಂದುವ ಮೂಲಕ 'ಟಿಕ್​ಟಾಕ್​ ಸ್ಟಾರ್​' ಎಂದೇ ಜನಪ್ರಿಯರಾಗಿದ್ದ ಅಥಿರಾ, ಇದೀಗ 'ಹಾಫ್​' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ 'ಹಾಫ್'. ಈಗ ಈ ಚಿತ್ರದ ಮೊದಲ ನಾಯಕಿಯ ಪೋಸ್ಟರ್ ಅನಾವರಣಗೊಂಡಿದ್ದು, ಮಲಯಾಳಂನಲ್ಲಿ 'ಲಾಲ್ ಜೋಸ್' ಎಂಬ ಸಿನಿಮಾದಲ್ಲಿ ನಟಿಸಿದ್ದ ಅಥಿರಾ ಈಗ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅಥಿರಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಬಗ್ಗೆ ಮಾತನಾಡುವ ನಟ-ನಿರ್ದೇಶಕ ಲೋಕೇಂದ್ರ ಸೂರ್ಯ, 'ನಮ್ಮ ಸಿನಿಮಾಗೆ ಸ್ಕೂಲ್​ ಹುಡುಗಿ ಪಾತ್ರಕ್ಕೆ ಒಬ್ಬ ನಟಿ ಬೇಕಿತ್ತು. ಆಡಿಶನ್​ನಲ್ಲಿ ಅಥಿರಾ ಭಾವಾಭಿವ್ಯಕ್ತಿಯನ್ನು ನೋಡಿ ಸೆಲೆಕ್ಟ್ ಮಾಡಿಕೊಂಡೆ' ಎನ್ನುತ್ತಾರೆ ಅವರು.

ಈ ಚಿತ್ರದ ಕುರಿತು ಮಾತನಾಡಿರುವ ಅಥಿರಾ, 'ಈ ಚಿತ್ರ ನನ್ನ ಪಾಲಿಗೆ ಸಿಕ್ಕಿದ್ದು ಅದೃಷ್ಟ. ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿಯೊಂದು ದೃಶ್ಯವನ್ನೂ ಮಾಡಿ ತೋರಿಸುತ್ತಿದ್ದರು. ಈ ಚಿತ್ರದಲ್ಲಿ ಅದ್ಭುತವಾದ ಪಾತ್ರ ನನ್ನದು. ಸಿನಿಮಾ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನನಗೆ ಯಾವ ತಕರಾರೂ ಇಲ್ಲʼ ಎನ್ನುತ್ತಾರೆ ಅಥಿರಾ.

'ರೆಡ್ ಅಂಡ್ ವೈಟ್ ಮ್ಯಾನ್' ಎಂದೇ ಜನಪ್ರಿಯರಾಗಿರುವ ಸೆವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಅಭಿನಯಿಸಿರುವ ಈ ಚಿತ್ರವನ್ನು ಡಾ. ಪವಿತ್ರ ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣ, ರಾಕಿ ಸೋನು ಸಂಗೀತ ಇರುವ ಈ ಚಿತ್ರದಲ್ಲಿ ಲೋಕೇಂದ್ರ ಸೂರ್ಯ, ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಪ್ರಭಾಕರ್ ರೆಡ್ಡಿ, ರಕ್ಷಾ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net