

ಕರಾಚಿ : ಪಾಕಿಸ್ತಾನದ ರಾಜಧಾನಿಯಲ್ಲಿ ಬುಧವಾರ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 5 ಮಂದಿ ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಕರಾಚಿಯ ಗುಲ್ಶನ್-ಎ-ಇಕ್ಬಾಲ್ ವಿಶ್ವವಿದ್ಯಾಲಯದ ಎದುರಿರುವ 4 ಅಂತಸ್ತಿನ ಕಟ್ಟಡದ ಬಳಿ ಸ್ಫೋಟ ಸಂಭವಿಸಿದ್ದು, ಎರಡು ಮಹಡಿಗಳು ಸಂಪೂರ್ಣ ಹಾನಿಗೀಡಾಗಿವೆ. ಸ್ಪೋಟಕ್ಕೆ ಕಟ್ಟಡದೊಳಗಿನ ಎಲ್ಪಿಜಿ ಸಿಲಿಂಡರ್ ಅಥವಾ ಬಾಂಬ್ ಕಾರಣವೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಸಿವಿಲ್ ವಾರ್ ಶುರುವಾಗಿದೆ ಎಂಬಿತ್ಯಾದಿ ವದಂತಿಗಳು ಹಬ್ಬತೊಡಗಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಂಧ್ ಪೊಲೀಸ್ ಮುಖ್ಯಸ್ಥರನ್ನು ಪಾಕ್ ಸೇನೆ ಅಪಹರಿಸಿದೆ ಎಂಬ ವದಂತಿ ಬಗ್ಗೆ ತನಿಖೆ ನಡೆಸುವಂತೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಾಮರ್ ಜಾವೇದ್ ಬೆಜ್ವಾ ಆದೇಶದ ನೀಡಿದ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದೆ. ಅಲ್ಲದೆ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯ ಸಫ್ದರ್ ಆವಾನ್ ಅವರ ಬಂಧನದ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. (ಏಜೆನ್ಸೀಸ್)