

ಏಪ್ರಿಲ್ 13ರ ರಾತ್ರಿ 10.17ಕ್ಕೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದನ್ನು ಮೇಷ ಸಂಕ್ರಮಣ ಎನ್ನಲಾಗುತ್ತದೆ. ಪಂಚಾಂಗದಲ್ಲಿ ಒಟ್ಟು 12 ಸಂಕ್ರಮಣಗಳಿದ್ದು, ಪ್ರಮುಖವಾಗಿ ಸೂರ್ಯ ಉತ್ತರದತ್ತ ಪ್ರಯಾಣಿಸುವ ಮಕರ ಸಂಕ್ರಮಣ ಹಾಗೂ ದಕ್ಷಿಣದತ್ತ ಪ್ರಯಾಣಿಸುವ ಕರ್ಕಾಟಕ ಸಂಕ್ರಮಣ ಸಾಮಾನ್ಯವಾಗಿ ಪ್ರಚಲಿತದಲ್ಲಿವೆ. ಇಲ್ಲಿಯವರೆಗೆ ನೇರ ರೇಖೆಯಲ್ಲಿ ಸಾಗಿಬಂದ ಸೂರ್ಯ ಮೇಷ ಸಂಕ್ರಮಣದಲ್ಲಿ ಏರುಮುಖದತ್ತ ಸಾಗಲು ಆರಂಭಿಸುತ್ತಾನೆ. ಯುದ್ಧಕ್ಕೆ ತೆರಳುವ ಮುನ್ನ ಭಗವಾನ್ ಶ್ರೀರಾಮನು ಸೂರ್ಯನನ್ನು ಪೂಜಿಸಿ, ಏನು ಮಾಡಬೇಕೆಂದು ಕೋರುತ್ತಾನೆ. ನೀನು ಯುದ್ಧಾಕಾಂಕ್ಷೆಯಿಂದ ಭೂಮಿಗೆ ಬಂದಿಲ್ಲ. ಆದರೆ ಭೂಮಿಯಲ್ಲಿ ನಡೆಯುತ್ತಿರುವ ಅಧರ್ಮವನ್ನು ನಾಶ ಮಾಡಲು ಬಂದಿದ್ದೀಯಾ. ಭೂಮಿಯಲ್ಲಿ ಅಧರ್ಮ ಹೆಚ್ಚಾದಾಗಲೆಲ್ಲ ಆಗಮಿಸಿ ಶಿಷ್ಟರನ್ನು ಕಾಪಾಡು ಎಂದು ಸೂರ್ಯನು ಮಾರ್ಗದರ್ಶನ ಮಾಡುತ್ತಾನೆ.
ಈಗಲೂ ನಾವೆಲ್ಲ ಯುದ್ಧಭೂಮಿಯಲ್ಲಿದ್ದೇವೆ. ಯುದ್ಧ ಎಂದ ಕೂಡಲೆ ಶತ್ರು ಬೇರೆಲ್ಲೋ ಇಲ್ಲ. ನಮ್ಮೊಳಗೇ ಅಡಗಿದ್ದಾನೆ. ಮನುಷ್ಯ ಮನುಷ್ಯನಿಂದಲೇ ದೂರಾಗಬೇಕಾದ ಪರಿಸ್ಥಿತಿ ಒದಗಿಬಂದಿದೆ. ಮನೆಯಲ್ಲೇ ಯುದ್ಧ ಮಾಡುತ್ತಿದ್ದೇವೆ. ಇದು ನಿಜಕ್ಕೂ ಸಂಕಷ್ಟದ ಸಮಯ. ಮೇಷ ಸಂಕ್ರಮಣದಲ್ಲಿ ಸೂರ್ಯನು ಎಲ್ಲವನ್ನೂ ಸಮತೋಲನಗೊಳಿಸುವ ಕಾರ್ಯ ಮಾಡುತ್ತಾನೆ. ಮಂಗಳವಾರದಿಂದ ಆರಂಭವಾಗಿ ಮೇ 15ಕ್ಕೆ ವೃಷಭ ರಾಶಿಗೆ ಸೂರ್ಯ ಪ್ರವೇಶಿಸುವವರೆಗೂ ಸೋಂಕಿನ
ಪ್ರಮಾಣ ನಿರಂತರ ಇಳಿಕೆಯತ್ತ ಸಾಗುತ್ತದೆ. ಆದರೆ ಈ ವಿದ್ಯಮಾನಕ್ಕೆ ಪೂರಕವಾಗಿ ಸಮಾಜ ಕೆಲಸ ಮಾಡುತ್ತಿದೆಯೇ ಎಂಬುದು ಪ್ರಶ್ನೆ.
ಈ ಸಂಕಷ್ಟದಿಂದ ಹೊರಬರಲು ದೇಶದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮೆಲ್ಲ ವೈದ್ಯಕೀಯ ವ್ಯವಸ್ಥೆಯ ಜತೆಗೆ ಶ್ರಮಿಸುತ್ತಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿಗಳದ್ದು ಸಮಾಜಕ್ಕೆ ತಂದೆಯ ಸ್ಥಾನ. ಮನೆಯಿಂದ ಹೊರಬರಬೇಡಿ ಎನ್ನುವ ನಿಯಮವನ್ನು ಎಲ್ಲರೂ ಪಾಲನೆ ಮಾಡುತ್ತಿಲ್ಲ. ಮೋದಿಯವರು ಈ ಯುದ್ಧದಲ್ಲಿ ತಾವು ಗೆಲ್ಲುತ್ತಾರೆ, ನಮ್ಮನ್ನೂ ಗೆಲ್ಲಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಜೆಗಳಲ್ಲರ ಸಹಕಾರ ಮುಖ್ಯ. ದೇಶದ ಶೇ.18ರಷ್ಟಿರುವ ಮುಸ್ಲಿಂ ಬಾಂಧವರಿಗೆ ನಿರ್ದಿಷ್ಟವಾಗಿ ಕಾಂಗ್ರೆಸ್ ಇಷ್ಟು ದಶಕಗಳಿಂದ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಆದರೆ ಈಗ ಕರೊನಾ ಸಂಕಷ್ಟದ ಕಾಲದಲ್ಲಿ ಕಾನೂನು ಪಾಲನೆ ಬಗ್ಗೆ ಅವರಿಗೆ ಕಾಂಗ್ರೆಸ್ ಪಕ್ಷ ಯಾವ ಮಾರ್ಗದರ್ಶನ ಮಾಡಿದೆ? ಸಂಕಷ್ಟದ ಕಾಲದಲ್ಲಿ ಎಲ್ಲರೂ ನಿಯಮ ಪಾಲನೆ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಅದರ ರಾಷ್ಟ್ರೀಯ ಅಧ್ಯಕ್ಷರಾಗಲಿ, ರಾಜ್ಯದ ಅಧ್ಯಕ್ಷರಾಗಲಿ ಹೇಳಲೇ ಇಲ್ಲ. ಇದು ಅವರ ಜವಾಬ್ದಾರಿಯಾಗಬೇಕಿದ್ದು ಅವರ ಧರ್ಮವಲ್ಲವೇ?
ಸೆಪ್ಟೆಂಬರ್ನಿಂದ ದೇಶದ ಆರ್ಥಿಕತೆ ಸುಧಾರಣೆಯತ್ತ ಸಾಗಲಿದೆ. ಆದರೆ ಅಷ್ಟರೊಳಗೆ ಜೂ.21ಕ್ಕೆ ಎದುರಾಗುವ ಸೂರ್ಯಗ್ರಹಣ ಸಂದರ್ಭದಲ್ಲಿ ಸಂಕಷ್ಟವಿದೆ. ರಾಷ್ಟ್ರವನ್ನೇ ಅಲ್ಲೋಲಕಲ್ಲೋಲವಾಗಿಸುವ ವಿಷಮ ಸ್ಥಿತಿ ಎದುರಾಗಬಹುದು. ದೇಶದ ಗಡಿಗಳನ್ನು ಸರ್ಕಾರ ಭದ್ರಪಡಿಸಿಕೊಳ್ಳಬೇಕು. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಆರ್ಥಿಕ ತಜ್ಞರ ಸಹಕಾರವನ್ನು ಸರ್ಕಾರ ಪಡೆಯಲು ಮುಂದಾಗಬೇಕು, ಅದರಲ್ಲಿ ಯಾವುದೇ ಹಿಂಜರಿಕೆ ಇರಕೂಡದು. ದೇಶಬಿಟ್ಟು ಓಡಿಹೋದವರು ಸಾಲ ತೀರಿಸುತ್ತೇನೆ ಎಂದರೆ ಅವಕಾಶ ನೀಡಬೇಕು. ಇದರಿಂದ ಆರ್ಥಿಕತೆಗೆ ಬಲ ಬರುತ್ತದೆ. ಅಪರಾಧಿಗೆ ಶಿಕ್ಷೆ ಕೊಡುವುದೊಂದೇ ಮಾರ್ಗವಲ್ಲ. ಕರೊನಾ ಸಂಕಷ್ಟ ಮುಕ್ತಾಯವಾದ ನಂತರ ಶ್ರೀಕ್ಷೇತ್ರ ಗಾಣಗಾಪುರಕ್ಕೆ ಪ್ರಧಾನಿಯವರು ಭೇಟಿ ನೀಡಬೇಕು. ದೇಶವನ್ನು ರಾಮರಾಜ್ಯವಾಗಿಸುವತ್ತ ಶ್ರೀರಾಮನೇ ಸಹಕಾರ ನೀಡುತ್ತಾನೆ. ಆದರೆ ಅವನ ಮಂದಿರ ಸ್ಥಾಪನೆಗೆ ದೇಶದೆಲ್ಲೆಡೆಯ ಸಾಧು ಸಂತರ ಸಹಕಾರ ಪಡೆಯಲೇಬೇಕು. ರಾಮಮಂದಿರ ಕೇವಲ ಉತ್ತರ ಭಾರತಕ್ಕೆ ಸೀಮಿತವಾದದ್ದಲ್ಲ. ದಕ್ಷಿಣದಲ್ಲಿ ಪ್ರಮುಖವಾಗಿರುವ ಶ್ರೀಕ್ಷೇತ್ರ ಶೃಂಗೇರಿಯ ಭಾರತೀತೀರ್ಥ ಸ್ವಾಮೀಜಿಯವರ ಆಶೀರ್ವಾದ ಇರುವಂತೆ ನೋಡಿಕೊಳ್ಳಬೇಕು. ಅಮೆರಿಕಕ್ಕೆ ಮತ್ತಷ್ಟು ಸಂಕಷ್ಟದ ದಿನಗಳು ಎದುರಾಗಲಿವೆ. ಅಮೆರಿಕ ಸೇರಿ ವಿಶ್ವಕ್ಕೆ ಭಾರತ ಸಹಾಯ ಮಾಡುವ ಸ್ಥಿತಿ ಬಂದೇ ಬರುತ್ತದೆ. ಸೂರ್ಯದೇವ ಆರೋಗ್ಯ ನೀಡುತ್ತಾನೆ, ದುರ್ಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತಾಳೆ. ಆದರೆ ಎಲ್ಲರ ಸಹಕಾರವೇ ಪ್ರಬಲ ಅಸ್ತ್ರ.
| ರಾಜಗುರು ಬಿ.ಎಸ್. ದ್ವಾರಕಾನಾಥ್ ದೈವ ಚಿಂತಕರು