ಮುಂಬೈನಲ್ಲಿರುವ ವಾಳಕೇಶ್ವರ ದೇಗುಲ, ರಾಮಾಯಾಣಕ್ಕಿದೆ ನಂಟು; ಶಿವಾಲಯ ಸ್ಥಾಪನೆ ಹಿಂದಿರುವ ಕತೆಯೇನು?..Walkeshwar Temple

Walkeshwar Temple History
Walkeshwar Temple History
Published on

ಪ್ರಮುಖ ಮುಖ್ಯಾಂಶಗಳು

  • ಸೀತಾಮಾತೆಯನ್ನು ಹುಡುಕುತ್ತಾ ಬಂದಾಗ ಗೌತಮ ಮುನಿಗಳನ್ನು ಭೇಟಿಯಾಗಿದ್ದ ರಾಮ
  • ಮುನಿವರ್ಯರ ಸಲಹೆಯಂತೆ ಬನಾರಸ್​ನಿಂದ ಲಿಂಗ ತಂದು ಪ್ರತಿಷ್ಠಾಪನೆ
  • ಸಂಸ್ಕೃತದಲ್ಲಿ 'ವಾಲುಕಾ' ಎಂದರೆ ಮರಳು ಎಂದರ್ಥ. ಮರಳಿನಿಂದ ಮಾಡಿದ ಲಿಂಗವಾದ್ದರಿಂದ ಇದಕ್ಕೆ 'ವಾಳಕೇಶ್ವರ' ಎಂಬ ಹೆಸರಿದೆ
Walkeshwar Temple History: ಮುಂಬೈ ಭಾರತದ ಆರ್ಥಿಕ ನಗರಿ. ನಿತ್ಯವೂ ಈ ಪ್ರದೇಶದ ಬಗ್ಗೆ ಕೇಳಿ ಬರುವುದು ಜನದಟ್ಟಣೆಯಿಂದ, ಟ್ರಾಫಿಕ್​ ಸಮಸ್ಯೆ, ಕಸದ ಸಮಸ್ಯೆ, ಕೊಲೆ ಹೀಗೆ. ಆದರೆ, ಹಿಂದೆ ಬಾಂಬೆ ಎಂದು ಹೆಸರು ಪಡೆದಿದ್ದ ಈ ಊರಿನ ಹೃದಯಭಾಗದಲ್ಲಿ ರಾಮಾಯಣ ಕಾಲಕ್ಕೆ ಸಂಬಂಧಿಸಿ ಹಳೆಯ ಇತಿಹಾಸ ಅಡಗಿದೆ.
ಹೌದು ಮಲಬಾರ್​​ ಹಿಲ್ಸ್​ ಬಳಿ ಇರುವ ವಾಳಕೇಶ್ವರ ದೇವಾಲಯಕ್ಕೂ, ಹಿಂದೂಗಳ ಪವಿತ್ರ ಗ್ರಂಥ ರಾಮಾಯಣಕ್ಕೂ ನಂಟಿದೆ. ಈ ಪುರಾತನ ಕ್ಷೇತ್ರ ಸದ್ಯ ದೇಶ-ವಿದೇಶದ ಭಕ್ತರ ಗಮನವನ್ನು ಸೆಳೆಯುವಂತೆ ಮಾಡುತ್ತಿದೆ.
ವಾಲುಕ ಎಂದರೆ ಮರಳು, ಮರಳಿನಿಂದ ಮಾಡಿದ ಲಿಂಗವನ್ನು ವಾಲುಕೇಶ್ವರ ಅಥವಾ ವಾಳಕೇಶ್ವರ ಎಂತಲೂ ಕರೆಯಲಾಗುತ್ತದೆ. ಮರಳಿನಿಂದ ಲಿಂಗ ತಯಾರಿಸಿದ್ದು ಯಾರು, ಪುರಾತನ ಶಿವನ ದೇಗುಲಕ್ಕಿರುವ ಕತೆಯೇನು ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.

ಏನಿದು ರಾಮಾಯಣದ ಕತೆ?

ಅಯೋಧ್ಯೆ ತೊರೆದು ಬಂದ ರಾಮ-ಸೀತೆ ಮತ್ತು ಲಕ್ಷ್ಮಣರು ಪರ್ಣ ಕುಟೀರದಲ್ಲಿ ನೆಲೆಸುತ್ತಾರೆ. ಇಲ್ಲಿ ಬಂಗಾರದ ಮಾಯಜಿಂಕೆಯನ್ನು ಕಾಣುವ ಸೀತೆ, ಅದೇ ಪ್ರಾಣಿ ಬೇಕೆಂದು ಹಠ ಹಿಡಿಯುತ್ತಾಳೆ. ರಾಮನು ಅದನ್ನು ಹುಡುಕಿ ಹೊರಟ, ಇತ್ತ ರಾವಣನು ಎಂಟ್ರಿ ಕೊಟ್ಟು ಸೀತೆಯನ್ನು ಅಪಹರಿಸುತ್ತಾನೆ. ಇತ್ತ ಪರ್ಣ ಕುಟೀರದತ್ತ ಬರುವ ರಾಮನು ಸೀತೆ ಇಲ್ಲದನ್ನು ಕಂಡು ಮರುಗುತ್ತಾನೆ. ಆಕೆಯನ್ನು ಹುಡುಕಿ ಪಂಚವಟಿಯಿಂದ ದಕ್ಷಿಣಾಭಿಮುಖವಾಗಿ ಸಾಗುವಾಗ ಈಗಿನ ಮುಂಬೈ ಪ್ರದೇಶವನ್ನು ತಲುಪಿದ್ದನು ಎನ್ನುವುದು Mumbai Legacy Project D ನಡೆಸಿದ ಸಂಶೋಧನಾ ವರದಿಯಿಂದ ತಿಳಿದುಬಂದಿದೆ.
ಹೀಗೆ ಸೀತೆ ಹುಡುಕುತ್ತಾ ಬಂದಾಗ ಸಮುದ್ರ ತೀರದಲ್ಲಿ ತಪಸ್ಸು ಮಾಡುತ್ತಿದ್ದ ಬ್ರಾಹ್ಮಣರು ರಾಮನ ದರ್ಶನ ಪಡೆದುಕೊಂಡರು. ರಾಮನು ದುಃಖದಲ್ಲಿರುವುದನ್ನು ಅರಿತ ಗೌತಮ ಋಷಿಯು ಈ ಬಗ್ಗೆ ಪ್ರಶ್ನಿಸಿದನು. ರಾಮನು ಸೀತೆಯನ್ನು ಕಳೆದುಕೊಂಡಿದ್ದು ಹೇಗೆ ಎಂಬ ಬಗ್ಗೆ ವಿಸ್ತಾರವಾಗಿ ಮುನಿವರ್ಯರಿಗೆ ವಿವರಿಸಿದನು. ಸೀತೆಯನ್ನು ಹುಡುಕುವ ಕಾರ್ಯದಲ್ಲಿ ಯಶಸ್ಸು ಸಿಗಲು ಬನಾರಸ್ ಅಥವಾ ಇಂದಿನ ವಾರಣಾಸಿಯಲ್ಲಿರುವ ಕಾಶಿಯಿಂದ
ಶಿವನ ಲಿಂಗವನ್ನು ತಂದು ಪ್ರತಿಷ್ಠಾಪಿಸಿ, ಪೂಜೆ ಮಾಡುವಂತೆ ಸಲಹೆ ಕೊಟ್ಟರು ಎನ್ನಲಾಗಿದೆ.

ಲಿಂಗ ಪ್ರತಿಷ್ಠಾಪನೆ ಮಾಡಿದ ರಾಮ

ರಾಮನಿಗೆ ಗೌತಮ ಋಷಿಗಳು ಕೊಟ್ಟ ಸೂಚನೆಯಂತೆ ರಾಮನು ಕಾಶಿಯಿಂದ ಪವಿತ್ರ ಲಿಂಗವನ್ನು ತರುವಂತೆ ಸೂಚನೆ ಕೊಟ್ಟನು. ಲಕ್ಮಣನು ವಾಪಸ್​ ಆಗುವುದು ತಡವಾಗಿತ್ತು. ಹೀಗಾಗಿ ರಾಮನು ಮರಳಿನಿಂದಲೇ ಲಿಂಗವನ್ನು ಭಕ್ತಿಭಾವದಿಂದ ತಯಾರಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಿದರೆನ್ನಲಾಗಿದೆ. ಮರಳಿನಿಂದ ಅಂದರೆ ವಾಳುಕದಿಂದ ನಿರ್ಮಿಸಿದ ಹಿನ್ನೆಲೆ ಇದಕ್ಕೆ ವಾಳುಕೇಶ್ವರ ಅಥವಾ ವಾಲುಕೇಶ್ವರ ಎಂದು ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ.
ಕಾಶಿಯಿಂದ ಲಕ್ಷ್ಮಣ ತಂದ ಲಿಂಗವನ್ನು ಸಹ, ಮರಳಿನ ಲಿಂಗದ ಪಕ್ಕದಲ್ಲೇ ಇಡಲಾಯಿತು. ಇಂದಿಗೂ ಈ ಲಿಂಗವನ್ನೇ ಇಲ್ಲಿ ಪೂಜಿಸಲಾಗುತ್ತಿದ್ದು, ಇದಕ್ಕೆ ಲಕ್ಷ್ಮಣೇಶ್ವರ ಎಂದು ಹೆಸರಿಡಲಾಗಿದೆ. ಪ್ರಸ್ತುತ ಇರುವ ವಾಲುಕೇಶ್ವರ ದೇವಾಲಯ ಮತ್ತು ಬಾಣಗಂಗಾ ಕೆರೆ ಕ್ರಿಸ್ತಶಕ 1127ರಲ್ಲಿ ಶಿಲಾಹಾರ ರಾಜರ ಕಾಲದಲ್ಲಿ ಮಂತ್ರಿ ಲಕ್ಷ್ಮಣ ಎನ್ನುವವರು ನಿರ್ಮಿಸಿದರು ಎನ್ನಲಾಗುತ್ತದೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಉತ್ಸವ ನಡೆಯುತ್ತದೆ. ಜೊತೆಗೆ ಮಹಾಶಿವರಾತ್ರಿಯಂದು ಬೃಹತ್​ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net