

ಭೋಪಾಲ್: ನರ್ಸ್ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಛತ್ತೀಸ್ಗಢದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಓರ್ವ ಆರೋಪಿ 17 ವರ್ಷದ ಅಪ್ರಾಪ್ತ ಎಂದು ತಿಳಿದುಬಂದಿದೆ.
ನಾಲ್ವರು ಆರೋಪಿಗಳು ದುಷ್ಕೃತ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿರುವುದಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಸಂತ್ರಸ್ತ ನರ್ಸ್ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಮಹೇಂದ್ರಗಢ ಜಿಲ್ಲೆಯ ಚಿಪ್ಚಿಪಿ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಗ್ಯ ಕೇಂದ್ರದಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯನ್ನು ಆರೋಪಿಗಳು ಗಮನಿಸಿದ್ದಾರೆ. ಇದಾದ ಬಳಿಕ ಆರೋಪಿಗಳು ಆರೋಗ್ಯ ಕೇಂದ್ರಕ್ಕೆ ಪ್ರವೇಶಿಸಿ, ನರ್ಸ್ ಅನ್ನು ಕಟ್ಟಿಹಾಕಿ, ಬಾಯಿಯನ್ನು ಮುಚ್ಚಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆದ ಬಳಿಕ ನರ್ಸ್ ತನ್ನ ಪಾಲಕರಿಗೆ ಮಾಹಿತಿ ನೀಡಿದ್ದು, ನಂತರ ಪಾಲಕರು ಪೊಲೀಸರಿಗೆ ದೂರು ನೀಡಿದರು. ಈವರೆಗೂ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇನ್ನೊರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ಘಟನೆಯ ಬೆನ್ನಲ್ಲೇ ಆರೋಗ್ಯ ಕಾರ್ಯಕರ್ತರ ಗುಂಪು ಭಯ ಭೀತರಾಗಿದ್ದು, ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಭದ್ರತೆಯನ್ನು ಒದಗಿಸುವಂತೆ ಛತ್ತೀಸ್‌ಗಢ ಸರ್ಕಾರವನ್ನು ಒತ್ತಾಯಿಸಿದೆ. ಇನ್ನೊಂದೆಡೆ ಭೂಪೇಶ್ ಭಾಗೇಲ್ ನೇತೃತ್ವದ ಛತ್ತೀಸ್‌ಗಢ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್)