More

    ಇಂದು ಭಾರತ-ಪಾಕ್ ಮೆಗಾ ಫೈಟ್​: ರೋಹಿತ್ ಶರ್ಮ ಪಡೆಗೆ ಟಿ20 ವಿಶ್ವಕಪ್​ನಲ್ಲಿ ಶುಭಾರಂಭದ ತವಕ

    ಮೆಲ್ಬೋರ್ನ್: ಭಾರತೀಯ ಕ್ರಿಕೆಟ್ ಪ್ರೇಮಿಗಳ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಧಮಾಕಾ ನೀಡಲು ರೋಹಿತ್ ಶರ್ಮ ಪಡೆ ರೆಡಿಯಾಗಿದೆ. 15 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಮಹತ್ವಾಕಾಂಕ್ಷೆಯೊಂದಿಗೆ ಟೀಮ್ ಇಂಡಿಯಾ ಮೆಲ್ಬೋರ್ನ್ ಮೈದಾನದಲ್ಲಿ ಭಾನುವಾರ ಕಣಕ್ಕಿಳಿಯಲಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಐಸಿಸಿ ವಿಶ್ವಕಪ್​ನಲ್ಲಿ ಎಂದೂ ಪಾಕ್ ಎದುರು ಸೋಲದ ಅಜೇಯ ದಾಖಲೆಯ ಬಲ ಈ ಬಾರಿ ಇಲ್ಲದಿದ್ದರೂ, ಭಾರತ ತಂಡವೇ ಫೇವರಿಟ್ ಆಗಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಭೀತಿ ಇದ್ದರೂ, ಸ್ಪಷ್ಟ ಫಲಿತಾಂಶ ಕಾಣಲು ಬೇಕಾಗುವಷ್ಟು ಓವರ್​ಗಳ ಆಟದ ನಿರೀಕ್ಷೆ ಇದೆ.

    ವಿಶ್ವಕಪ್​ನಲ್ಲಿ ಭಾರತ ಎದುರು ಗೆಲ್ಲದ ಇತಿಹಾಸವನ್ನು ಬಾಬರ್ ಅಜಮ್ ಪಡೆ ಕಳೆದ ಆವೃತ್ತಿಯಲ್ಲಿ ದುಬೈನಲ್ಲಿ ಅಳಿಸಿಹಾಕಿತ್ತು. ಹೀಗಾಗಿ ಈ ಬಾರಿ ಪಂದ್ಯದ ಬಗೆಗಿನ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಕಳೆದ ತಿಂಗಳು ಏಷ್ಯಾಕಪ್​ನಲ್ಲೂ 2 ಮುಖಾಮುಖಿಗಳಲ್ಲಿ ಉಭಯ ತಂಡಗಳು ತಲಾ 1ರಲ್ಲಿ ಗೆದ್ದಿದ್ದು, ಈ ಸಲವೂ ಜಿದ್ದಾಜಿದ್ದಿನ ಹೋರಾಟ ಏರ್ಪಡುವ ನಿರೀಕ್ಷೆ ಇದೆ.

    2023ರಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯಾಕಪ್​ಗೆ ಭಾರತ ತಂಡವನ್ನು ಕಳುಹಿಸುವುದಿಲ್ಲ ಎಂಬ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಹೇಳಿಕೆ ಮತ್ತು ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್​ನಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಿರುವುದು ಕೂಡ ಪಂದ್ಯದ ವೋಲ್ಟೇಜ್ ಹೆಚ್ಚಿಸಿದೆ.

    ಟೂರ್ನಿಯ ದಿಕ್ಸೂಚಿ ಹೈವೋಲ್ಟೇಜ್ ಪಂದ್ಯ
    ಇಂದು ಭಾರತ-ಪಾಕ್ ಮೆಗಾ ಫೈಟ್​: ರೋಹಿತ್ ಶರ್ಮ ಪಡೆಗೆ ಟಿ20 ವಿಶ್ವಕಪ್​ನಲ್ಲಿ ಶುಭಾರಂಭದ ತವಕಭಾರತ-ಪಾಕ್ ಪಂದ್ಯ ಐಸಿಸಿಗೆ ಹೇಗೆ ಆರ್ಥಿಕವಾಗಿ ಭಾರಿ ಲಾಭದಾಯಕವೋ, ಅದೇ ರೀತಿ ಉಭಯ ತಂಡಗಳಿಗೂ ಈ ಪಂದ್ಯ ಟೂರ್ನಿಯ ದಿಕ್ಸೂಚಿ ಎನಿಸಿದೆ. ಭಾರತ ಕಳೆದ ಆವೃತ್ತಿಯಲ್ಲಿ ಪಾಕ್ ವಿರುದ್ಧ ಸೋತ ಬಳಿಕ ಲಯಕ್ಕೆ ಮರಳಲಾಗದೆ ನಾಕೌಟ್​ಗೇರಲು ವಿಫಲವಾಗಿದ್ದರೆ, ಪಾಕ್ ಗೆದ್ದ ಜೋಶ್​ನಲ್ಲಿ ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿತ್ತು. ಹೀಗಾಗಿ ಈ ಬಾರಿಯೂ ಪಂದ್ಯದ ಫಲಿತಾಂಶ ಉಭಯ ತಂಡಗಳಿಗೂ ಟೂರ್ನಿಯಲ್ಲಿ ಭವಿಷ್ಯ ನಿರ್ಧರಿಸಲು ಮಹತ್ವದ್ದಾಗಿರಲಿದೆ.

    9 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಕನಸು
    ಭಾರತ ತಂಡ ಕಳೆದ 9 ವರ್ಷಗಳಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ. 2013ರಲ್ಲಿ ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ನಂತರದಲ್ಲಿ 3 ಫೈನಲ್ (2014ರ ಟಿ20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ, 2021ರ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್), 3 ಸೆಮಿಫೈನಲ್ (2015, 2019ರ ಏಕದಿನ ವಿಶ್ವಕಪ್, 2016ರ ಟಿ20 ವಿಶ್ವಕಪ್) ಪಂದ್ಯಗಳಲ್ಲಿ ಮುಗ್ಗರಿಸಿದೆ. ಹೀಗಾಗಿ 9 ವರ್ಷಗಳ ಐಸಿಸಿ ಟ್ರೋಫಿ ಕನಸು ನನಸಾಗಿಸಲು ತಂಡದ ಆಟಗಾರರು ತುಡಿತ ಹೊಂದಿದ್ದಾರೆ ಎಂದು ರೋಹಿತ್ ಶರ್ಮ ಹೇಳಿದ್ದಾರೆ. ರೋಹಿತ್ ಮತ್ತು ರಾಹುಲ್ ದ್ರಾವಿಡ್ ಅವರ ಕ್ಯಾಪ್ಟನ್-ಕೋಚ್ ಜೋಡಿಗೆ ಇದು ಮೊದಲ ಐಸಿಸಿ ಟೂರ್ನಿಯ ಸವಾಲೂ ಆಗಿದೆ.

    ಪಿಚ್ ರಿಪೋರ್ಟ್
    ಟಾಸ್ ನಿರ್ಣಾಯಕ ವೆನಿಸುವ ಸಾಧ್ಯತೆ ಇಲ್ಲ. ಆದರೆ ಮಳೆ ಭೀತಿ ಇರುವುದರಿಂದ ಟಾಸ್ ಗೆದ್ದವರು ಚೇಸಿಂಗ್​ಗೆ ಆದ್ಯತೆ ನೀಡಬಹುದು.ಎಂಸಿಜಿ ಪಿಚ್ ಜತೆಗೆ ಮೋಡ ಕವಿದ ವಾತಾವರಣವೂ ವೇಗಿಗಳಿಗೆ ಹೆಚ್ಚು ನೆರವಾಗಲಿದೆ.

    ಸೇಡಿನ ತವಕ
    ಕಳೆದ ಆವೃತ್ತಿಯ ಟಿ20 ವಿಶ್ವಕಪ್​ನ ಲೀಗ್ ಪಂದ್ಯದಲ್ಲಿ ಮತ್ತು ಇತ್ತೀಚೆಗೆ ಏಷ್ಯಾಕಪ್​ನ ಸೂಪರ್-4 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಎಡವಿದ್ದ ಭಾರತ ತಂಡ, ಅದಕ್ಕೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದೆ.

    ತಗ್ಗಿದ ಮಳೆ ಭೀತಿ
    ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಶೇ. 90ರಷ್ಟಿದೆ ಎಂದು ಈ ಮುನ್ನ ವರದಿಯಾಗಿತ್ತು. ಆದರೆ ಶನಿವಾರದ ವೇಳೆಗೆ ಮೆಲ್ಬೋರ್ನ್ ವಾತಾವರಣ ಸುಧಾರಿಸಿದ್ದು, ಸದ್ಯಕ್ಕೆ ಭಾನುವಾರ ಮಳೆ ಕಾಡುವ ಭೀತಿ ಶೇ. 60ಕ್ಕೆ ಕುಸಿದಿದೆ. ಆದರೆ ಸಂಜೆಯ ವೇಳೆಯಲ್ಲೇ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಪಂದ್ಯವೂ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ‘ಓವರ್ ಕಡಿತದ ಪಂದ್ಯಕ್ಕೂ ಮಾನಸಿಕವಾಗಿ ಸಜ್ಜಾಗಿದ್ದೇವೆ’ ಎಂದು ರೋಹಿತ್ ಶರ್ಮ ತಿಳಿಸಿದ್ದಾರೆ.

    37 ವರ್ಷಗಳ ಬಳಿಕ ಎಂಸಿಜಿಯಲ್ಲಿ!
    ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ (ಎಂಸಿಜಿ) 37 ವರ್ಷಗಳ ಬಳಿಕ ಇಂಡೋ-ಪಾಕ್ ಪಂದ್ಯ ನಡೆಯುತ್ತಿದೆ. 1985ರ ಬೆನ್ಸನ್ ಆಂಡ್ ಹೆಡ್ಜಸ್ ಏಕದಿನ ವಿಶ್ವ ಚಾಂಪಿಯನ್​ಷಿಪ್ ಫೈನಲ್​ನಲ್ಲಿ ಮೊದಲ ಮತ್ತು ಕೊನೇ ಬಾರಿ ಆಡಿದಾಗ ಸುನೀಲ್ ಗಾವಸ್ಕರ್ ಸಾರಥ್ಯದ ಭಾರತ ತಂಡ ಜಾವೇದ್ ಮಿಯಾಂದಾದ್ ನೇತೃತ್ವದ ಪಾಕ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿತ್ತು. ಆಗ ಇದೊಂದು ಸಾಮಾನ್ಯ ಪಂದ್ಯವಾಗಿದ್ದರೆ, ಈಗ ಇಂಡೋ-ಪಾಕ್ ಮ್ಯಾಚ್ ವಿಶ್ವವನ್ನೇ ಕಾತರದಿಂದ ಕಾಯುವಂತೆ ಮಾಡುವ ಮತ್ತು ಕಮರ್ಷಿಯಲ್ ಆಗಿ ಭಾರಿ ಲಾಭದಾಯಕ ಪಂದ್ಯವಾಗಿ ಬೆಳೆದಿದೆ.

    ಇಂದು ಭಾರತ-ಪಾಕ್ ಮೆಗಾ ಫೈಟ್​: ರೋಹಿತ್ ಶರ್ಮ ಪಡೆಗೆ ಟಿ20 ವಿಶ್ವಕಪ್​ನಲ್ಲಿ ಶುಭಾರಂಭದ ತವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts