

ಹಾಸನ: ಮಾರ್ಗಮಧ್ಯೆ ಕಾರೊಂದನ್ನು ಓವರ್ಟೇಕ್ ಮಾಡಿದ್ದಕ್ಕೆ ಅದರಲ್ಲಿದ್ದ ಪಾನಮತ್ತರ ಗುಂಪು ತಮ್ಮ ಕಾರನ್ನು ತಡೆದು ತಂದೆ ಹಾಗೂ ಪತಿ ಮೇಲೆ ಹಲ್ಲೆ ನಡೆಸಿದೆ ಎಂದು ಮಹಿಳೆಯೊಬ್ಬರು ವಿಡಿಯೋ ಮುಖೇನ ಅಳಲು ತೋಡಿಕೊಂಡಿದ್ದಾರೆ. ಮಾತ್ರವಲ್ಲ, ಪೊಲೀಸ್ ತುರ್ತು ನೆರವು ಸಂಖ್ಯೆಗೆ ಕರೆ ಮಾಡಿದ್ದರೂ ತಕ್ಷಣಕ್ಕೆ ಯಾರೂ ಸಹಾಯಕ್ಕೆ ಬಂದಿರಲಿಲ್ಲ ಎಂದೂ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಬಿ.ಕೆ.ಸ್ಕಂದನ್ ಎಂಬವರು ಸಕಲೇಶಪುರದ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರು ತಮ್ಮ ಕುಟುಂಬದ ಜತೆ ಮಾ. 27ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಬರುವಾಗ ಬಿಸಿಲೆ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಮಾರ್ಗಮಧ್ಯೆ ಸಿಕ್ಕ ಕೆಎ 41 ಎಸಿ 9820 ನೋಂದಣಿ ಸಂಖ್ಯೆಯ ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದಕ್ಕೆ ಅದರಲ್ಲಿದ್ದವರು ಮುಂದೆ ಕೂಡು ರಸ್ತೆ ಬಳಿ ನಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಹಿಳೆ ಮಕ್ಕಳಿದ್ದರೂ ಕುಡಿದ ಅಮಲಿನಲ್ಲಿದ್ದ ಪುಂಡರು ದುರ್ವರ್ತನೆ ತೋರಿದ್ದು, ತಮ್ಮ ತಂದೆ ಹಾಗೂ ಪತಿ ಮೇಲೆ ಹಲ್ಲೆ ಮಾಡಿದ್ದರು. ಕೂಡಲೇ 100ಗೆ ಕರೆ ಮಾಡಿದರೆ ಅವರು 112ಕ್ಕೆ ಕರೆ ಮಾಡಿ ಎಂದರು. ಅವರು ಎಲ್ಲ ಮಾಹಿತಿ ಪಡೆದು ಬಳಿಕ ಸಮೀಪದ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಫೋನ್ ನಂಬರ್ ಕೊಟ್ಟರು. ಆ ನಂಬರ್ಗೆ ಕರೆ ಮಾಡಿದರೆ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಮತ್ತೊಂದು ಫೋನ್ ನಂಬರ್ ಕೊಟ್ಟರು. ಆದರೆ ಕರೆ ಮಾಡಿ 2 ಗಂಟೆ ಕಳೆದರೂ ಪೊಲೀಸರು ಬಂದಿಲ್ಲ ಎಂದು ಹಲ್ಲೆಗೊಳಗಾದ ಕುಟುಂಬದ ಮಹಿಳೆಯೊಬ್ಬರು ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಅಕಸ್ಮಾತ್ ಯಾರಾದ್ರೂ ಕೊಲೆ ಮಾಡಿದ್ರೂ ಕೇಳೋರಿಲ್ವೇ? ಎರಡೂವರೆ ವರ್ಷದ ಮಗು ಜತೆ ನಾವು ಸಾಕಷ್ಟು ಕಷ್ಟಪಟ್ಟೆವು. ಸಮಸ್ಯೆ ಇದ್ದಾಗ ನೆರವು ಸಿಗದ ಸಹಾಯವಾಣಿ ಯಾಕೆ ಬೇಕು ಎಂದು ಅವರು ಆಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೊನೆಗೆ ಯಸಳೂರು ಪೊಲೀಸರು ಸ್ಪಂದಿಸಿ ನಮಗೆ ಊಟ ಕೊಡಿಸಿ ದೂರು ಸ್ವೀಕರಿಸಿದರು ಎಂದರು.