

ಕೋಟ: ಇಲ್ಲಿನ ಬ್ರಹ್ಮಾವರದಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಥಮ ಮಳೆಗೇ ಭಾರಿ ಗಾತ್ರದ ಹೊಂಡಗಳು ಸೃಷ್ಟಿಯಾಗಿವೆ. ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಮಾಡುತ್ತಿರುವ ಕೆ.ಕೆ.ಆರ್ ಕಂಪನಿಯ ನಿರ್ವಹಣಾ ವೈಫಲ್ಯಕ್ಕೆ ಇದು ಕೈಗನ್ನಡಿಯಾಗಿದೆ.
ಕಳೆದ ವರ್ಷ ನವಯುಗ ಕಂಪನಿಯಿಂದ ಕೆ.ಕೆ.ಆರ್ ಕಂಪನಿಗೆ ರಸ್ತೆ ನಿರ್ವಹಣೆ ಹೊಣೆ ನೀಡಲಾಗಿದೆ. ಆದರೆ ಮಳೆಗಾಲಕ್ಕೂ ಮುನ್ನ ರಸ್ತೆಗಳನ್ನು ಸರಿಯಾಗಿ ನಿರ್ವಹಿಸಿದ ಕಾರಣ ಮೊದಲ ಮಳೆಗೇ ಹೆದ್ದಾರಿ ಗುಂಡಿ ಬಿದ್ದಿದೆ.
ಕೆಕೆಆರ್ ಕಂಪನಿಯ ನಿರ್ಲಕ್ಷೃದ ವಿರುದ್ಧ ಆಕ್ರೋಶಗೊಂಡ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸತತ ಎಚ್ಚರಿಕೆ ನೀಡಿದರೂ ರಸ್ತೆ ನವೀಕರಿಸುವಲ್ಲಿ ವಿಳಂಬ ನೀತಿ ಅನುಸರಿಸಿತು. ನಂತರ ಹೆದ್ದಾರಿ ಜಾಗೃತಿ ಸಮಿತಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹೆಜಮಾಡಿಯಿಂದ ಕುಂದಾಪುರದ ವರೆಗೆ ರಸ್ತೆಗೆ ಮರು ಡಾಂಬರೀಕರಣಕ್ಕೆ ಮುಂದಾಯಿತು. ಆದರೆ ಡಾಂಬರಿಕರಣಗೊಂಡ ಒಂದೇ ತಿಂಗಳೊಳಗೆ ಹೊಂಡಗುಂಡಿಗಳು ನಿರ್ಮಾಣವಾಗಿ ಕಾಮಗಾರಿಯ ಗುಣಮಟ್ಟ ಸಾಬೀತಾಗಿದೆ.
ಈ ಹಿಂದೆ ನವಯುಗ ಕಂಪನಿ ರಸ್ತೆ ನಿರ್ವಹಣೆಯಲ್ಲಿ ಗುಣಮಟ್ಟ ಕಾಯ್ದಿರಿಸಿಕೊಂಡಿತ್ತು. ಆದರೆ ಪ್ರಸ್ತುತ ಕೆ.ಕೆ ಆರ್ ಕಂಪನಿ ಒಂದೇ ವರ್ಷದಲ್ಲಿ ರಸ್ತೆ ನಿರ್ವಹಣೆಯಲ್ಲಿ ನಿರಾಸಕ್ತಿ ತೋರಿದ್ದಲ್ಲದೆ ಮರು ಡಾಂಬರೀಕರಣದಲ್ಲೂ ಕಳಪೆ ಕಾಮಗಾರಿ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಡಾಂಬರೀಕರಣಗೊಂಡ ಒಂದೇ ತಿಂಗಳಲ್ಲಿ ರಸ್ತೆ ಹದಗೆಟ್ಟು ಸವಾರರ ನಿದ್ದೆಗೆಡಿಸಿದೆ. ಇದರಿಂದ ವಾಹನ ಸವಾರರರು ಜೀವಭಯದಲ್ಲೇ ಸಂಚರಿಸುವಂತಾಗಿದೆ.
ರಸ್ತೆ ಎರಡು ಕಡೆಗಳಲ್ಲಿ ಕೆಂಪು ಮಣ್ಣು ಹಾಕಲಾಗಿದ್ದು ಮಳೆಗೆ ಕೆಸರುಗದ್ದೆಯಂತಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಂಗಡಿಗಳಿಗೆ ಹೋಗುವವರಿಗೂ ಸಮಸ್ಯೆಯಾಗಿದೆ. ಇಷ್ಟಾಗಿಯೂ ಕೆಕೆಆರ್ ಕಂಪನಿ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ. ರಸ್ತೆ ಸಮರ್ಪಕಗೊಳಿಸಬೇಕು ಅಲ್ಲದೆ ಫುಟ್‌ಪಾತ್‌ನ ಮಣ್ಣು ತೆರವುಗೊಳಿಸಿ ಸಂಚಾರ ಯೋಗ್ಯವಾಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಡಾಂಬರೀರಿಕರಣಗೊಂಡ ಒಂದೇ ತಿಂಗಳೊಳಗೆ ಡಾಂಬರ್ ಎದ್ದು ಗುಂಡಿಗಳು ನಿರ್ಮಾಣಗೊಂಡಿವೆ. ಹೆದ್ದಾರಿ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿ ರಾಡಿ ಎಬ್ಬಿಸಿದ್ದಾರೆ. ಹಳೆಯ ರಸ್ತೆಯ ಡಾಂಬರ್ ತೆಗೆದು ಮಾರಿಕೊಂಡಿದ್ದಾರೆ. ಅದೇ ಡಾಂಬರನ್ನು ರಸ್ತೆಯ ಎರಡೂ ಕಡೆ ಹಾಕಿದ್ದರೆ ಈ ರೀತಿ ರಾಡಿ ಆಗುತ್ತಿರಲಿಲ್ಲ. ಜೀವ ಹಾನಿಯಾದರೆ ಕಂಪನಿಯೇ ಹೊಣ ಹೊರಬೇಕು. ಕೇಶವ ಆಚಾರ್ ಕೋಟ, ಸಾಮಾಜಿಕ ಕಾರ್ಯಕರ್ತರು ಕೆಕೆಆರ್ ಕಂಪನಿ ಹೆದ್ದಾರಿ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಎಡೆವಿದೆ ಟೋಲ್ ವಸೂಲಿಗಿದ್ದ ಆಸಕ್ತಿ ರಸ್ತೆ ನಿರ್ವಹಣೆಯಲ್ಲಿಲ್ಲ. ನಮ್ಮ ಸತತ ಹೋರಾಟದಿಂದಾಗಿ ಕಾಟಾಚಾರಕ್ಕೆ ಡಾಂಬರೀಕರಣ ಮಾಡಲಾಗಿದೆ. ಕೆಕೆಆರ್ ಕಂಪನಿ ಇಂಗ್ಲೆಂಡ್ ಮೂಲದ ಕಂಪನಿಯಾಗಿದ್ದು ರಸ್ತೆ ಮಾತ್ರ ಚೈನಾ ಮಾಡಲ್ ಆಗಿದೆ. ಪ್ರತಾಪ್ ಶೆಟ್ಟಿ ಸ್ತಾಸ್ತಾನ, ಮಾಜಿ ಅಧ್ಯಕ್ಷರು, ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ