

ನವದೆಹಲಿ: ಕರೊನಾ ಸೋಂಕು ಜಗತ್ತನ್ನೇ ತಲ್ಲಣಿಸಿದ್ದರೂ, ಕೋವಿಡ್-19 ಹೊಡೆತಕ್ಕೆ ಎಂಥೆಂಥ ಶ್ರೀಮಂತರು ಕೂಡ ಅಲುಗಾಡಿ ಹೋಗಿದ್ದರೂ ಉದ್ಯಮಿ ಮುಖೇಶ್ ಅಂಬಾನಿ ಅವರ ಶ್ರೀಮಂತಿಕೆಯ ಪಟ್ಟ ಒಂಚೂರೂ ಏರುಪೇರಾಗಿಲ್ಲ. ಏಕೆಂದರೆ ಕಳೆದ ಒಂಬತ್ತು ವರ್ಷಗಳಿಂದ ಅವರು ಅತ್ಯಂತ ಶ್ರೀಮಂತ ಭಾರತೀಯ ಆಗಿಯೇ ಉಳಿದಿದ್ದಾರೆ.
2020ರ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟವಾಗಿದ್ದು, ಆ ಪ್ರಕಾರ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಏಷ್ಯಾದ ಅತಿ ಶ್ರೀಮಂತ ಮಾತ್ರವಲ್ಲ ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ, ಮಾರ್ಚ್ ನಂತರ ಲಾಕ್ಡೌನ್ ಅವಧಿಯಲ್ಲಿ ಮುಖೇಶ್ ಅಂಬಾನಿ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸಿದಂತಾಗಿದೆ.
ಅಂಬಾನಿ 6,58,400 ಕೋಟಿ ರೂ. ವೈಯಕ್ತಿಕ ಆಸ್ತಿ ಹೊಂದಿದ್ದು, ಜಾಗತಿಕ ಮಟ್ಟದ ಟಾಪ್-5 ಶ್ರೀಮಂತರ ಪೈಕಿ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಅಂಬಾನಿ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 73 ಹೆಚ್ಚಳಗೊಂಡಿದೆ.
ಹುರುನ್ ಇಂಡಿಯಾ ರಿಚ್ ಲಿಸ್ಟ್ಗೆ 2020ರ ಆಗಸ್ಟ್ 31ರ ಒಳಗೆ ದೇಶದಲ್ಲಿ 1000 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವವರನ್ನು ಮಾತ್ರ ಪರಿಗಣಿಸಲಾಗಿದೆ. ಹೀಗಾಗಿ 2020ರ ಈ ಪಟ್ಟಿಯಲ್ಲಿ 828 ಭಾರತೀಯರಿದ್ದಾರೆ. ಲಂಡನ್ ಮೂಲದ ಹಿಂದುಜಾ ಬ್ರದರ್ಸ್, ಎಚ್ಸಿಎಲ್ ಸ್ಥಾಪಕ ಶಿವ ನಾಡಾರ್, ಗೌತಮ್ ಅದಾನಿ, ಅಜೀಮ್ ಪ್ರೇಮ್ಜಿ ಕ್ರಮವಾಗಿ 2, 3, 4 ಮತ್ತು 5ನೇ ಸ್ಥಾನ ಹೊಂದಿದ್ದಾರೆ. (ಏಜೆನ್ಸೀಸ್)