

ಕೊಲಂಬೊ: ಫೈನಲ್ ಪಂದ್ಯದ ಸಹಿತ ಕೊಲಂಬೊದಲ್ಲಿ ನಿಗದಿಯಾಗಿರುವ ಏಷ್ಯಾಕಪ್ ಟೂರ್ನಿಯ ಎಲ್ಲ ಪಂದ್ಯಗಳು ಪಲ್ಲೆಕಿಲೆ, ಡಂಬುಲಾ ಅಥವಾ ಹಂಬಂತೋಟಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ.
ಕೊಲಂಬೊದಲ್ಲಿ ಪ್ರಸಕ್ತ ಸುರಿಯುತ್ತಿರುವ ಭಾರಿ ಮಳೆ ಇದಕ್ಕೆ ಕಾರಣವಾಗಿದೆ. ಫೈನಲ್ ಜತೆಗೆ ಸೂಪರ್-4 ಹಂತದ 5 ಪಂದ್ಯಗಳೂ ಕೊಲಂಬೊದಲ್ಲಿ ನಿಗದಿಯಾಗಿವೆ. ಆದರೆ, ಕೊಲಂಬೊದಲ್ಲಿ ಈಗ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರ್. ಪ್ರೇಮದಾಸ ಕ್ರೀಡಾಂಗಣ ಸದ್ಯ ಮಳೆಯಿಂದಾಗಿ ಸಂಪೂರ್ಣ ಜಲಾವೃತ್ತವಾಗಿದೆ. ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಂದ್ಯಗಳ ಸ್ಥಳಾಂತರಕ್ಕೆ ಗಂಭೀರ ಚಿಂತನೆಯಲ್ಲಿದೆ.
ಈಗಾಗಲೆ ಪಲ್ಲೆಕಿಲೆಯಲ್ಲಿನ ಪಂದ್ಯಗಳು ಮಳೆ ಅಡಚಣೆ ಎದುರಿಸಿವೆ. ಹೀಗಾಗಿ ಇಲ್ಲಿಗೆ ಇನ್ನಷ್ಟು ಪಂದ್ಯಗಳ ಸ್ಥಳಾಂತರವು ಪರಿಸ್ಥಿತಿಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸದು. ಆದರೆ ಡಂಬುಲಾದ ರಣಗಿರಿ ಕ್ರೀಡಾಂಗಣವನ್ನು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಪಂದ್ಯಗಳಿಗೆ ಸಜ್ಜುಗೊಳಿಸುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಕಠಿಣ ಸವಾಲೆನಿಸಿದೆ. ಇನ್ನು ಹಂಬಂತೋಟಾದಲ್ಲಿ ಪಂದ್ಯ ನಡೆಸಲು ಸೂಕ್ತ ವಾತಾವರಣವೂ ಇದೆ. ಹೀಗಾಗಿ ಅಲ್ಲಿನ ಮಹಿಂದಾ ರಾಜಪಕ್ಷ ಕ್ರೀಡಾಂಗಣದಲ್ಲಿ ಏಷ್ಯಾಕಪ್ ಪಂದ್ಯಗಳ ಆಯೋಜನೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೆಚ್ಚಿನ ಒಲವು ಹೊಂದಿದೆ. ಆದರೆ ಇದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂತಿಮ ಒಪ್ಪಿಗೆ ನೀಡಬೇಕಾಗಿದೆ.
ಹೈಬ್ರಿಡ್ ಮಾದರಿಯ ಟೂರ್ನಿಯಲ್ಲಿ ಸೂಪರ್-4 ಹಂತದ 1 ಪಂದ್ಯ ಮಾತ್ರ ಪಾಕಿಸ್ತಾನದ ಲಾಹೋರ್ನಲ್ಲಿ ನಿಗದಿಯಾಗಿದೆ. ಏಷ್ಯಾಕಪ್ನ ಎಲ್ಲ ಪಂದ್ಯಗಳು ಈ ಮುನ್ನ ಪಾಕಿಸ್ತಾನದಲ್ಲೇ ನಿಗದಿಯಾಗಿದ್ದರೂ, ಭದ್ರತಾ ಭೀತಿಯಿಂದಾಗಿ ಭಾರತ ಅಲ್ಲಿಗೆ ತೆರಳದ ಕಾರಣ ಟೂರ್ನಿ ಶ್ರೀಲಂಕಾಕ್ಕೂ ವಿಸ್ತರಿಸಲ್ಪಟ್ಟಿತ್ತು.