ಲಖನೌದಲ್ಲಿ ಅಶ್ವಿನ್​ ಕಣಕ್ಕಿಳಿಸುವ ಚಿಂತನೆಯಲ್ಲಿ ಭಾರತ; ಸ್ಥಾನ ಬಿಟ್ಟುಕೊಡುವವರು ಯಾರು?

ash web
Published on

ಲಖನೌ: ತವರಿನ ಏಕದಿನ ವಿಶ್ವಕಪ್​ನಲ್ಲಿ ಗೆಲುವಿನ ಸಿಕ್ಸರ್​ ಬಾರಿಸಲು ಸಜ್ಜಾಗಿರುವ ಟೀಮ್​ ಇಂಡಿಯಾ, ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಏಕನಾ ಕ್ರೀಡಾಂಗಣದ ಪಿಚ್​ ಸ್ಪಿನ್​-ಸ್ನೇಹಿಯಾಗಿ ವರ್ತಿಸುವ ನಿರೀಕ್ಷೆ ಇರುವುದರಿಂದ 3ನೇ ಸ್ಪಿನ್ನರ್​ ಆಗಿ ಅಶ್ವಿನ್​ರನ್ನು ಆಡಿಸಲು ಭಾರತ ಒಲವು ತೋರಿದೆ. ಆದರೆ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಗೈರಿನಲ್ಲಿ ತಂಡ ಸಂಯೋಜನೆ ರೂಪಿಸುವುದು ತುಸು ಸವಾಲೆನಿಸಿದೆ.

ಮೊದಲ ಪಂದ್ಯದಲ್ಲಿ ಆಸೀಸ್​ ವಿರುದ್ಧ ಚೆನ್ನೈನ ಸ್ಪಿನ್​-ಸ್ನೇಹಿ ಪಿಚ್​ನಲ್ಲಿ ಆಡಿದ್ದ ಅಶ್ವಿನ್​, ನಂತರದ 4 ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಲಖನೌದಲ್ಲಿ ಮತ್ತೆ ಅಶ್ವಿನ್​ ಆಡಿಸುವ ಒಲವು ಮೂಡಿದೆ. ಆದರೆ ಹಾರ್ದಿಕ್​ ಪಾಂಡ್ಯ ಇಂಗ್ಲೆಂಡ್​ ವಿರುದ್ಧವೂ ಆಡುವುದಿಲ್ಲ ಎಂಬುದು ಖಚಿತಗೊಂಡಿದೆ. ಹೀಗಾಗಿ ಈ ಬಾರಿ ಅಶ್ವಿನ್​ರನ್ನು ಆಡಿಸಿದರೆ, 2ನೇ ವೇಗದ ಬೌಲರ್​ ಆಗಿ ಮೊಹಮದ್​ ಸಿರಾಜ್​ ಮತ್ತು ಶಮಿ ಅವರಲ್ಲಿ ಒಬ್ಬರನ್ನಷ್ಟೇ ಕಣಕ್ಕಿಳಿಸಬಹುದಾಗಿದೆ.

ಕಿವೀಸ್​ ವಿರುದ್ಧ ಪಂದ್ಯಕ್ಕೆ ಹಾರ್ದಿಕ್​ ಅಲಭ್ಯರಾದಾಗ ಭಾರತ, ಶಮಿ ಮತ್ತು ಸೂರ್ಯಕುಮಾರ್​ ಇಬ್ಬರನ್ನೂ ಆಡಿಸಿತ್ತು ಮತ್ತು ಶಾರ್ದೂಲ್​ ಠಾಕೂರ್​ರನ್ನೂ ಕೈಬಿಟ್ಟಿತ್ತು. ಹಾರ್ದಿಕ್​ ಗೈರಿನಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಇಂಗ್ಲೆಂಡ್​ ವಿರುದ್ಧವೂ ಸೂರ್ಯಕುಮಾರ್​ರನ್ನು ಆಡಿಸಬಹುದು. ಆಗ ಅಶ್ವಿನ್​ಗೆ 3ನೇ ವೇಗದ ಬೌಲರ್​ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಇಂಗ್ಲೆಂಡ್​ ತಂಡ ಡೇವಿಡ್​ ಮಲಾನ್​, ಬೆನ್​ ಸ್ಟೋಕ್ಸ್​, ಸ್ಯಾಮ್​ ಕರನ್​ರಂಥ ಎಡಗೈ ಆಟಗಾರರನ್ನು ಹೊಂದಿರುವುದರಿಂದಲೂ ಅಶ್ವಿನ್​ ಆಯ್ಕೆ ನಿರೀಕ್ಷೆ ಹೆಚ್ಚಿದೆ.

ಹಾರ್ದಿಕ್​ ಗೈರಿನಲ್ಲಿ 6ನೇ ಬೌಲರ್​ ಕೊರತೆ ಕಾಡುವ ಅಪಾಯವನ್ನು ತಪ್ಪಿಸಲು ವಿರಾಟ್​ ಕೊಹ್ಲಿ ಮತ್ತು ಶುಭಮಾನ್​ ಗಿಲ್​ರನ್ನು ಅರೆಕಾಲಿಕ ಬೌಲರ್​ಗಳಾಗಿ ಬಳಸುವ ಸಾಧ್ಯತೆಯೂ ಕಾಣಿಸಿದೆ. ಅವರಿಬ್ಬರು ನೆಟ್ಸ್​ನಲ್ಲಿ ಬೌಲಿಂಗ್​ ಅಭ್ಯಾಸ ಮಾಡುತ್ತಿರುವುದು ಈ ಸುಳಿವು ನೀಡಿದೆ. ಐವರು ಪ್ರಮುಖ ಬೌಲರ್​ಗಳಲ್ಲಿ ಯಾರಿಗಾದರೂ ಕೆಟ್ಟ ದಿನ ಕಾಡಿದರೆ ಆಗ ಅರೆಕಾಲಿಕ ಬೌಲರ್​ಗಳಾದರೂ ಉಪಯುಕ್ತರೆನಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net