

ನವದೆಹಲಿ: ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಬ್ಬ ಶ್ರೇಷ್ಠ ಬೌಲರ್, ಆದರೆ, ಆತ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಸ್ಥಾನ ಪಡೆಯಲು ಅರ್ಹ ಎಂದು ನಾನು ಭಾವಿಸುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಶ್ವಿನ್ ಒಬ್ಬ ವಿಶ್ವ ದರ್ಜೆಯ ಸ್ಪಿನ್ನರ್ ಎಂಬುದರಲ್ಲಿ ಅನುಮಾನವಿಲ್ಲ, ಆತ ವೈಟ್-ಬಾಲ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ. ಏಕದಿನ ಮತ್ತು ಟಿ20 ಕ್ರಿಕೆಟ್ ಸೆಟಪ್ಗೆ ಹೊಂದಿಕೊಳ್ಳಲ್ಲ. ಬ್ಯಾಟಿಂಗ್ನಲ್ಲಿ ಕಾಣಿಕೆ ನೀಡದ ಕಾರಣ ಸೀಮಿತ ಓವರ್ಗಳ ಕ್ರಿಕೆಟ್ಗೆ ಅರ್ಹರೆಂದು ಭಾವಿಸುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ
ಅಶ್ವಿನ್ ಬೌಲಿಂಗ್ನಲ್ಲಿ ಮ್ಯಾಜಿಕ್ ನಡೆಸುತ್ತಾರೆ. ಅದ್ಭುತ ಬೌಲಿಂಗ್ ಮೂಲಕ ಪಂದ್ಯದ ಚಿತ್ರಣ ಬದಲಿಸುತ್ತಾರೆ. ಆದರೆ ಅವರು ಬ್ಯಾಟ್ ಮತ್ತು ಫೀಲ್ಡಿಂಗ್ನೊಂದಿಗೆ ಏನು ಕೊಡುಗೆ ನೀಡುತ್ತಾರೆ? ಅವರಿಂದ ಈ ಎರಡೂ ವಿಭಾಗಗಳಲ್ಲಿ ನಿರೀಕ್ಷೆಗೆ ತಕ್ಕಂತೆ ನ್ಯಾಯ ಸಿಗುವುದಿಲ್ಲ ಎಂದು ಯುವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಭವಿಷ್ಯದ ನಾಯಕನನ್ನು ರೂಪಿಸಬೇಕು: ಇದೇ ವೇಳೆ ಭವಿಷ್ಯದ ನಾಯಕನನ್ನು ರೂಪಿಸಬೇಕು ಎಂದು ತಿಳಿಸಿದ ಯುವಿ, ಶುಭ್ಮನ್ ಗಿಲ್ಗೆ ಬೆಂಬಲ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ವೈಟ್-ಬಾಲ್ ತಂಡವನ್ನು ದೀರ್ಘಾವಧಿವರೆಗೂ ಮುನ್ನಡೆಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾರ್ದಿಕ್ ಪಾದದ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಗಾಯದಿಂದ ಬಳಲುತ್ತಿರುವ ಕಾರಣ ಸೂರ್ಯಕುಮಾರ್ ಯಾದವ್ ಮತ್ತು ಶುಭ್ಮನ್ ಗಿಲ್ ಅವರಂತಹ ಆಟಗಾರರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಬೇಕು ಎಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ.