

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿರ ನಡೆಸಿದ್ದಕ್ಕಿಂತ ಆಂತರಿಕವಾಗಿ ಕಚ್ಚಾಡಿಕೊಂಡಿದ್ಎ ಜಾಸ್ತಿ. ಅದ್ದರಿಂದ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಈ ವಿಚಾರದಲ್ಲಿ ರಾಜಸ್ಥಾನ ದೇಶದಲ್ಲೇ ನಂಬರ್ 1 ಸ್ಥಾನ ಪಡೆದಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ವರ್ಷಾಂತ್ಯದಲ್ಲಿ ವಿಧಾನಸಬೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದ ಜನರನ್ನು ವಂಚಿಸಿ ಕಾಂಗ್ರೆಸ್ ಇಲ್ಲಿ ಸರ್ಕಾರ ರಚಿಸಿತ್ತು. ಆದರೆ, ಆಡಳಿತ ನಡೆಸುವ ವಿಚಾರದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದ್ದು, ಅಶೋಕ್ ಗೆಹ್ಲೋಟ್ ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಹೋರಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜಸ್ಥಾನವನ್ನು ಲೂಟಿ ಮಾಡಿ ಹಾಳುಗೆಡವಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕಾಂಗ್ರೆಸ್ ತನ್ನ ಆಡಳಿತದಲ್ಲಿ ಇದನ್ನು ಒಂದು ಸಂಪ್ರದಾಯವಾಗಿ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ದಿನಗಣನೆ ಆರಂಭವಾಗಿದ್ದು, ಜನರು ಬಿಜೆಪಿಯನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಾರ್ವಜನಿಕವಾಗಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇದು ಮೋದಿ ನಿಮ್ಮಗೆ ಕೊಡುತ್ತಿರುವ ಗ್ಯಾರಂಟಿ ಎಂದು ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪೇಪರ್ ಲೀಕ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಮೋದಿ ರಾಜಸ್ಥಾನದ ಯುವಕರಿಗೆ ನೀಡುತ್ತಿರುವ ಗ್ಯಾರಂಟಿ ಎಂದು ರಾಜಸ್ಥಾನದ ಚಿತ್ತೋರ್ಘರ್ನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.