ರೈಲು ಬರುತ್ತಂತೆ, ಇಡೀ ಊರು ಖಾಲಿ ಮಾಡಿಸ್ತಾರಂತೆ!

klr yashwanthapura
ರೈಲ್ವೆಗೆ ಗುರುತು ಮಾಡಿರುವ ಸ್ಯಾಟಲೈಟ್​ ಚಿತ್ರ.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ರಸ್ತೆ, ಕೈಗಾರಿಕೆ, ರೈಲ್ವೆ ಅಭಿವೃದ್ಧಿಗಾಗಿ ರೈತರ ಜಮೀನುಗಳನ್ನು ಸ್ವಾಧಿನಪಡಿಸಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಇಡೀ ಊರಿಗೆ ಊರನ್ನೇ ರೈಲ್ವೆ ಜಂಕ್ಷನ್​ಗಾಗಿ ಗುರುತು ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ?

ಹೌದು. ತಮಿಳುನಾಡು ಗಡಿ, ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯ ಮಾಲೂರು ತಾಲೂಕಿನ ಯಶವಂತಪುರದಲ್ಲಿ ರೈಲ್ವೆ ಜಂಕ್ಷನ್​ಗಾಗಿ ಸರ್ವೇ ಮಾಡಿರುವುದು ಗ್ರಾಮಸ್ಥರ ದುಗುಡಕ್ಕೆ ಕಾರಣವಾಗಿದೆ.

ಬೇರೆ ಕಡೆಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಜಮೀನು, ಒಂದೋ ಎರಡೋ ಮನೆಗಳು, ಮರಗಳು ಹೋಗಿದ್ದರೆ ಇಲ್ಲಿ ಇಡೀ ಗ್ರಾಮವೇ ರೈಲ್ವೆ ಜಂಕ್ಷನ್​ ಹಾಗೂ ರಸ್ತೆಗೆ ಬಲಿಯಾಗುತ್ತಿದೆ. ಇದಕ್ಕೆ ಪೂರಕ ಎಂದರೆ ಈಗಾಗಲೇ ಗಡಿ ಗುರುತಿಸಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ.

ಯಶವಂತಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಾದ ಬಪ್ಪನಹಳ್ಳಿ, ಲಕ್ಕೇನಹಳ್ಳಿ, ಚಿಕ್ಕಾಪುರ ಸೇರಿ ಹಲವು ಗ್ರಾಮಗಳಲ್ಲಿ ಇದೇ ರೀತಿಯ ಭಯದ ವಾತಾವರಣ ಎದುರಾಗಿದೆ. ಬೆಂಗಳೂರು ನಗರದ ಸುತ್ತಲೂ ಸಾರಿಗೆ ದಟ್ಟಣೆ ದಿನೇದಿನೆ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಬೆಂಗಳೂರು ಔಟರ್​ ರೈಲ್ವೆ ರಿಂಗ್​ ರೋಡ್​ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ದೇವನಹಳ್ಳಿಯಿಂದ ಮಾಲೂರು, ಆನೇಕಲ್​, ಮಾಗಡಿ ಹೀಗೆ ಬೆಂಗಳೂರು ಸುತ್ತ ಈ ರೈಲ್ವೆ ಮಾರ್ಗ ಹಾದು ಹೋಗಲಿದೆ ಎಂದು ಹೇಳುವ ಗ್ರಾಮಸ್ಥರು, ಈ ಕುರಿತು ಇಲಾಖಾಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಮಾಲೂರು ತಾಲೂಕಿನ ಪ್ರತಿ ಗ್ರಾಮದಲ್ಲೂ ಭೂಮಿ ಬೆಲೆ ಕೋಟಿ ಕೋಟಿ ಆಗಿದೆ. ಕೈಗಾರಿಕಾ ವಲಯ, ರಾಷ್ಟಿ$ಯ ಹೆದ್ದಾರಿಗಳು ಹಾದು ಹೋಗಿದ್ದು, ರೈಲ್ವೆ ಮಾರ್ಗಗಳು ಸಹ ಇವೆ. ಈಗ ಮತ್ತೊಂದು ರೈಲ್ವೆ ಕಾರಿಡಾರ್​ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಯೋಜನೆ ಕೈಗೆತ್ತಿಕೊಂಡಿದ್ದು, ಬೆಂಗಳೂರಿನಿಂದ ಚೆನ್ನೆ$ವರೆಗೆ ರೈಲ್ವೆ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರೈಲ್ವೆಯಿಂದ ಗಡಿಗಳನ್ನು ಗುರುತಿಸಿರುವುದನ್ನು ಗಮನಿಸಿರುವ ಗ್ರಾಮಸ್ಥರು ಸಂಸದ ಎಂ.ಮಲ್ಲೇಶ್​ ಬಾಬು ಅವರನ್ನು ಭೇಟಿ ಮಾಡಿ, ವಿಚಾರವನ್ನು ಗಮನಕ್ಕೆ ತಂದಿದ್ದು, ಎದುರಾಗಿರುವ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

* ಕೃಷಿ ಹೊಂಡ ಪರಿಚಯಿಸಿದ ಗ್ರಾಮ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೃಷಿ ಹೊಂಡ ಪರಿಚಯಿಸಿದ ಕೃಷಿ ಪ್ರಧಾನ ಗ್ರಾಮ ಯಶವಂತಪುರ. ಆದರೆ ಅದೊಂದು ಸರ್ವೇ ಈಗ ಆ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಗ್ರಾಮವೆಲ್ಲ ಹೋಗಲಿದೆ ಎಂಬ ಆತಂಕದಲ್ಲಿದ್ದಾರೆ.

* ಗ್ರಾಮವನ್ನೇ ಖಾಲಿ ಮಾಡಿಸುವ ಆತಂಕ

ಬೆಂಗಳೂರು ಮತ್ತು ಮಾಲೂರು ಮಧ್ಯೆ ಇರುವ ಈ ಗ್ರಾಮ ಕೃಷಿ ಪ್ರಧಾನವಾಗಿದೆ. 500ಕ್ಕೂ ಹೆಚ್ವು ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದು, ಇದಕ್ಕೆ ಈಗ ರೈಲ್ವೆ ಮಂಡಳಿಯು ಕೊಳ್ಳಿ ಇಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ರೈಲ್ವೆ ಇಲಾಖೆಯಿಂದ ಸರ್ವೇ ಮಾಡಲಾಗಿದ್ದು, ಅಲ್ಲಲ್ಲಿ ಮಾರ್ಕ್​ ಮಾಡಲಾಗಿದೆ. ಹಾಗಾಗಿ ಗ್ರಾಮದ ಜನರಲ್ಲಿ ಊರಿನ ಮೇಲೆ ರೈಲ್ವೆ ಟ್ರ್ಯಾಕ್​ ಹಾದು ಹೋಗಲಿದ್ದು ಗ್ರಾಮಕ್ಕೆ ಗ್ರಾಮವೇ ಖಾಲಿ ಮಾಡಬೇಕು ಎನ್ನುವ ಆತಂಕ ಮನೆ ಮಾಡಿದೆ.

* ಗೊತ್ತಾಗಿದ್ದು ಹೇಗೆ..?

ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಬೆಂಗಳೂರು&ಚೆನ್ನೈ ಕಾರಿಡರ್​ ರಸ್ತೆ ನಿರ್ಮಾಣ ಆಗಿದ್ದು, ಮತ್ತೊಂದು ಹೆದ್ದಾರಿ ರಸ್ತೆ ನಿರ್ಮಾಣ ಮಾಡಲು ಸರ್ವೇ ನಡೆಯುತ್ತಿರಬಹುದು ಎಂದು ಗ್ರಾಮಸ್ಥರು ತಿಳಿದಿದ್ದರು. ಸರ್ವೇ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಕೆಲ ಗ್ರಾಮಸ್ಥರು ಪ್ರಶ್ನಿಸಿದ್ದು, ಆಗ ರೈಲ್ವೆಗೆ ಎಂಬುದು ಗೊತ್ತಾಗಿದೆ. ಅಲ್ಲದೆ ಗುರುತುಗಳನ್ನು ನೋಡಿದಾಗಿನಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಕೋಟ್​..

ಯಾವ ರೀತಿ ಸರ್ವೇ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದು, ರೈಲ್ವೆ ಇನ್​ಫ್ರಾಸ್ಟ$ಚರ್​ ಡೆವಲಪ್​ಮೆಂಟ್​ ಕಂಪನಿ (ಕರ್ನಾಟಕ) ಬಳಿಯೂ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು.

> ಡಾ.ಎಂ.ಆರ್​.ರವಿ, ಜಿಲ್ಲಾಧಿಕಾರಿ ಕೋಲಾರ

ಕೋಟ್​..

ಯಶವಂತಪುರ ಗ್ರಾಮದ ಬಳಿಯೇ ರೈಲ್ವೆ ಜಂಕ್ಷನ್​ ನಿರ್ಮಾಣ ಆಗಲಿದೆ. ಇದಕ್ಕೆ ಇಡೀ ಗ್ರಾಮದ ಭೂಮಿ ಹೋಗಲಿದೆ. ಹೀಗಾಗಿ ಈಗಾಗಲೆ ಸರ್ವೇ ಮಾಡಿ ಮಾರ್ಕ್​ ಮಾಡಿದ್ದಾರೆ. ನಮ್ಮ ಭೂಮಿಗೆ ಯಾವತ್ತಿದ್ದರೂ ಚಿನ್ನದ ಬೆಲೆ ಇದೆ ಎಂದು ಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ಸಾಗಿಸುತ್ತಿದ್ದ ಗ್ರಾಮಗಳಲ್ಲಿ ಈಗ ಆತಂಕ ಮನೆ ಮಾಡಿದೆ.

> ಶ್ರೀನಿವಾಸ್​, ಗ್ರಾಮಸ್ಥ

ಕೋಟ್​..

ಬೆಂಗಳೂರು&ಹೊಸಕೋಟೆ ನಂತರವೇ ಯಶವಂತಪುರ ಗ್ರಾಮ ಇರೋದು. ನೂರಾರು ವರ್ಷಗಳಿಂದ ಇಲ್ಲಿ ಜೀವನ ಸಾಗಿಸುತ್ತಾ ಇರುವ ಗ್ರಾಮಸ್ಥರ ಪಾಲಿಗೆ ಈ ಸರ್ವೇ ನೆಮ್ಮದಿ ಕಿತ್ತುಕೊಳ್ಳುವ ಯತ್ನವಾಗಿದೆ. ಸಂಬಂಧಿಸಿದವರು ಗ್ರಾಮದವರ ಸಮಸ್ಯೆ ಪರಿಹರಿಸಬೇಕು.

> ವೇಣುಗೋಪಾಲ್​, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net