More

    ಶಿಕ್ಷಕರಾಗ್ತೀರಾ..; ನಾಲ್ಕು ವರ್ಷ ಬಿಎಡ್ ಓದಿ..

    ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಬೇಕು ಎಂಬುದು ಬಹುತೇಕರ ಕನಸು. ಇದನ್ನು ನನಸು ಮಾಡುವುದಕ್ಕೆ ಈಗ ಹೊಸ ಸವಾಲುಗಳು ಎದುರಾಗಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತಿವೆ. ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಈ ಬದಲಾವಣೆಗೆ ಎಲ್ಲರೂ ಒಗ್ಗಿಕೊಳ್ಳಬೇಕಾದ್ದು ಅನಿವಾರ್ಯ. ಬದಲಾದ ಬಿಎಡ್ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕಿರು ಪ್ರಯತ್ನ ಇದು.

    ಶಿಕ್ಷಕರಾಗುವ ಕನಸು ಕಾಣ್ತಿದ್ದೀರಾ.. ಹೌದು, ಶಿಕ್ಷಕರಾಗುವ ಕನಸುಕಂಗಳಿಗೆ ಕೊರತೆ ಏನೂ ಇಲ್ಲ. ಈವರೆಗೆ ಎರಡು ವರ್ಷ ಬಿ.ಎಡ್ ಶಿಕ್ಷಣ ಪಡೆದು, ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ ಉತ್ತೀರ್ಣರಾದರೆ ಸಾಕಿತ್ತು. ಇನ್ನು ಮೇಲೆ ಹಾಗಾಗುವುದಿಲ್ಲ. 4 ವರ್ಷದ ಬಿಎಡ್ ಕೋರ್ಸ್ ಪೂರ್ಣಗೊಳಿಸುವುದು ಕಡ್ಡಾಯ. ಇದು ಸಮಗ್ರ ಕೋರ್ಸ್ ಆಗಿದ್ದು, ಈ ಸಂಬಂಧ ಸರ್ಕಾರ ಇತ್ತೀಚೆಗಷ್ಟೆ ಅಧಿಸೂಚನೆಯನ್ನು ಪ್ರಕಟಿಸಿದೆ. ಶಿಕ್ಷಣದಲ್ಲಿ ಗುಣಮಟ್ಟ ತರಬೇಕು ಎಂಬ ಉದ್ದೇಶ ಇಲ್ಲಿದೆ. ಬೋಧಕರು/ಶಿಕ್ಷಕರು ಗುಣಮಟ್ಟದ ಶಿಕ್ಷಣ ಪಡೆದರೆ ಮಾತ್ರವೆ ಅವರ ಬೋಧನಾ ಗುಣಮಟ್ಟ ಚೆನ್ನಾಗಿರಲಿದೆ ಎಂಬ ಪರಿಣತರ ಶಿಫಾರಸಿಗೆ ಅನುಗುಣವಾಗಿ ಬಿ.ಎಡ್ ಸಮಗ್ರ ಕೋರ್ಸ್ ಜಾರಿಗೆ ಬರುತ್ತಿದೆ. ಮುಂದಿನ ವರ್ಷದಿಂದ ಶಾಲಾ-ಕಾಲೇಜುಗಳಲ್ಲಿ ಬೋಧಕರಾಗುವವರಿಗೆ ಬಿ.ಎಡ್ ಕೋರ್ಸ್ ಕಡ್ಡಾಯವಾಗುತ್ತಿದೆ.

    ಪ್ರವೇಶಾತಿ ಕ್ಷೀಣ?: ಸರ್ಕಾರ ಈ ಹಿಂದೆಯೇ ಒಂದು ವರ್ಷದ ಬಿ.ಎಡ್ ಕೋರ್ಸ್ ಅನ್ನು ಎರಡು ವರ್ಷದ ಅವಧಿ ವಿಸ್ತರಣೆ ಮಾಡಿತ್ತು. ಈ ಸಂದರ್ಭದಲ್ಲೇ ವಿದ್ಯಾರ್ಥಿಗಳ ವಾರ್ಷಿಕ ಪ್ರವೇಶಾತಿ ಕ್ಷೀಣಿಸಿತ್ತು. ಈಗ ಇದು ನಾಲ್ಕು ವರ್ಷದ ಕೋರ್ಸ್ ಆಗಿ ಮುಂದುವರಿಯುತ್ತಿದೆ. ಹೀಗಿರುವಾಗ ವಿದ್ಯಾರ್ಥಿಗಳ ಪ್ರವೇಶಾತಿ ಸುಧಾರಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

    ಮುಂದಿನ ವರ್ಷ ಐಟಿಇಪಿ: ನಾಲ್ಕು ವರ್ಷಗಳ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ (ಐಟಿಇಪಿ) ಜಾರಿಗೆ ಶಿಕ್ಷಣ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಬಿಎ-ಬಿಎಡ್, ಬಿಎಸ್ಸಿ-ಬಿಎಡ್ ಮತ್ತು ಬಿಕಾಂ-ಬಿಎಡ್ ರೀತಿಯ ಕೋರ್ಸ್ ಗಳನ್ನು ಒಟ್ಟಿಗೆ ನೀಡುವ ಪದವಿ ಇದಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್​ಇಪಿ) ಪ್ರಮುಖ ಆದೇಶಗಳಲ್ಲಿ ಇದು ಒಂದಾಗಿದೆ. ಐಟಿಇಪಿ ಪದವಿಯ ನಾಲ್ಕು ವರ್ಷಗಳ ಕೋರ್ಸ್ 2022-23ರ ಶೈಕ್ಷಣಿಕ ಅವಧಿಯಿಂದ ಆರಂಭವಾಗುತ್ತದೆ.

    ಎನ್​ಟಿಎ ವ್ಯಾಪ್ತಿಗೆ ಎನ್​ಸಿಟಿಇ: ಈಗಾಗಲೆ, ಕೇಂದ್ರ ಸರ್ಕಾರ ಹಲವಾರು ಪ್ರವೇಶ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಮೂಲಕವೇ ನಡೆಸುತ್ತಿದೆ. ಇದರ ವ್ಯಾಪ್ತಿಗೆ ಇದೀಗ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ಎನ್​ಸಿಟಿಇ)ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಶಾಲಾ ಶಿಕ್ಷಕರಿಗೆ ಪದವಿ ಸಮಾನ ವಿದ್ಯಾರ್ಹತೆ ಆಗಿರುತ್ತದೆ.

    ಮುಂದಿನ ಶೈಕ್ಷಣಿಕ ವರ್ಷ: 2022-23ರ ಶೈಕ್ಷಣಿಕ ಅವಧಿಯಿಂದ ಪ್ರಾಯೋಗಿಕ ಕ್ರಮದಲ್ಲಿ ಈ ಪದವಿ ಕೋರ್ಸ್​ಗಳನ್ನು ದೇಶಾದ್ಯಂತ 50 ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸಲಾಗುತ್ತದೆ. ಎನ್​ಇಪಿ ಪ್ರಕಾರ 2030 ರಿಂದ ಶಿಕ್ಷಕರ ನೇಮಕವು ಐಟಿಇಪಿ ಮೂಲಕ ಮಾತ್ರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ವಿಷಯ ಆಯ್ಕೆ?: ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಂಡಳಿ (ಎನ್​ಸಿಟಿಇ)ಯು ಈ ಕೋರ್ಸ್​ನ ಪಠ್ಯಕ್ರಮವನ್ನು ರೂಪಿಸಿದೆ. ವಿದ್ಯಾರ್ಥಿ-ಶಿಕ್ಷಕರಿಗೆ ಶಿಕ್ಷಣದಲ್ಲಿ ಪದವಿಯನ್ನು ಪಡೆಯಲು ಮತ್ತು ಇತಿಹಾಸ, ಗಣಿತ, ವಿಜ್ಞಾನ, ಕಲೆ, ಅರ್ಥಶಾಸ್ತ್ರ, ವಾಣಿಜ್ಯದಂತಹ ವಿಶೇಷ ವಿಷಯಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.

    ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ದಾರಿ ಏನು ಎನ್ನುವುದನ್ನು ಮೊದಲೇ ನಿರ್ಧರಿಸಿ ಅಧ್ಯಯನ ಮಾಡಲು ಇದು ಸಹಕಾರಿ. ಪದವಿ ಮುಗಿಸಿ ಯಾವುದೇ ಕೆಲಸ ಇಲ್ಲ ಎಂದಾಗ ಬಿ.ಎಡ್ ಅಧ್ಯಯನ ಮಾಡಲು ಬರುವುದಕ್ಕಿಂತ, ತಾನು ಶಿಕ್ಷಕನೇ ಆಗಬೇಕು ಎಂದು ಅಧ್ಯಯನ ಮಾಡುವುದರಲ್ಲಿ ಅರ್ಥ ಇರುತ್ತದೆ. ಅಲ್ಲದೇ 5-6 ವರ್ಷ ಅಧ್ಯಯನದ ಅವಧಿಗಿಂತ 4 ವರ್ಷದ ಅಧ್ಯಯನ ಅರ್ಥಿಕವಾಗಿಯೂ ಅಭ್ಯರ್ಥಿಗಳಿಗೆ ಹೊರೆಯಾಗುವುದಿಲ್ಲ.

    | ಸುಷ್ಮಾ ಶ್ರೀಧರ್ ಬಿ.ಎಡ್ ವಿದ್ಯಾರ್ಥಿನಿ, ಬೆಂಗಳೂರು

    ಶಿಕ್ಷಕರಾಗ್ತೀರಾ..; ನಾಲ್ಕು ವರ್ಷ ಬಿಎಡ್ ಓದಿ..

    ಕೇರಳದಲ್ಲಿ ಒಂದು ವರ್ಷದ ಬಿ.ಎಡ್?

    ಕೇಂದ್ರ ಸರ್ಕಾರ 2014ರಿಂದ ಬಿ.ಎಡ್ ಅನ್ನು ಎರಡು ವರ್ಷದ ಅವಧಿಗೆ ವಿಸ್ತರಿಸಿತು. ಇದರಿಂದ ವಿದ್ಯಾರ್ಥಿಗಳ ಪ್ರಮಾಣ ಕಡಿಮೆ ಆಗಿದೆ. ಇದನ್ನು ಸರಿದೂಗಿಸುವುದಕ್ಕಾಗಿ ಕೇರಳ ಸರ್ಕಾರ ಒಂದು ವರ್ಷದ ಬಿ.ಎಡ್ ಕೋರ್ಸ್ ಆರಂಭಿಸಲು ಮುಂದಾಗಿದೆ. ಈ ಕೋರ್ಸ್ ಪ್ರವೇಶ ಪಡೆಯಬೇಕಾದಲ್ಲಿ, ಪದವಿ ಬದಲಾಗಿ ಸ್ನಾತಕೋತ್ತರ ಪದವಿ ಪಡೆದಿರಬೇಕೆಂಬ ನಿಯಮ ವಿಧಿಸಿದೆ. ಸದ್ಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೋಧನೆ ಮಾಡಲು ಡಿಪ್ಲೊಮಾ ಇನ್ ಎಜುಕೇಷನ್(ಟಿಟಿಸಿ/ಡಿಎಡ್) ಕೋರ್ಸ್ ವ್ಯಾಸಂಗ ಮಾಡಿದ್ದರೆ ಸಾಕು. ಆದರೆ, 2030ರ ವೇಳೆಗೆ ಬಿ.ಎಡ್ ಹೊಂದಿರುವುದು ಕಡ್ಡಾಯವಾಗಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ವರ್ಷ ಕೋರ್ಸ್ ಜಾರಿಗೆ ತರುತ್ತಿದೆ.

    ಬಿ.ಎಡ್ ಬೋಧಿಸುವವರು ಏನು ಹೇಳುತ್ತಾರೆ?

    ಪಿಯುಸಿ ಆದ ನಂತರ ಪದವಿ ಕುರಿತು ಹಾಗೂ ಉದ್ಯೋಗದ ಕುರಿತು ಚಿಂತಿಸುವ ಅಭ್ಯರ್ಥಿಗಳಿಗೆ ಶಿಕ್ಷಕ ವೃತ್ತಿಯ ಕೋರ್ಸ್ ಅನ್ನು ನೆನಪು ಮಾಡುವ ಎನ್​ಇಪಿ ಯೋಜನೆ ಒಳ್ಳೆಯದಿದೆ. ಆದರೆ, ಪದವಿ 3 ವರ್ಷ, ಬಿಎಡ್ 2 ವರ್ಷ ಸೇರಿ ಒಟ್ಟು 5 ವರ್ಷದ ಕಲಿಕೆಯನ್ನು ಈಗ 4 ವರ್ಷದಲ್ಲಿ ಕಲಿಸಲು ಸಿದ್ಧತೆ ನಡೆಸಲಾಗಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ಯೋಚಿಸಿದಾಗ ಸಮಯದ ಉಳಿತಾಯ ಆಗುತ್ತದೆ. ಆದರೆ, ಎಷ್ಟರ ಮಟ್ಟಿಗೆ ಕಲಿಕೆ ಸಿದ್ಧಿಸುತ್ತದೆ ಹಾಗೂ ಕಲಿಕೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದರ ಬಗ್ಗೆ ಗಮನ ಹರಿಸಬೇಕಿದೆ ಎನ್ನುತ್ತಾರೆ ಸರ್ವಜ್ಞ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಮಧುಮತಿ.

    ಚಲಿಸುತ್ತಿದ್ದ ರೈಲಿನಿಂದ ಬಿದ್ದಾಕೆ ಸ್ವಲ್ಪದರಲ್ಲೇ ಬಚಾವ್​; ‘ತ್ರಿಮೂರ್ತಿ’ಗಳಂತೆ ಧಾವಿಸಿ ರಕ್ಷಿಸಿದ ರೈಲ್ವೆ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts