

ನವದೆಹಲಿ: ಐಪಿಎಲ್ಗೆ ಹೊಸ ತಂಡಗಳನ್ನು ಸೇರಿಸಿಕೊಳ್ಳುವ ಯೋಜನೆ ಇಲ್ಲ. ಆದರೆ 2028ರಿಂದ ಐಪಿಎಲ್ ಆವೃತ್ತಿಯೊಂದರಲ್ಲಿ 94 ಪಂದ್ಯಗಳನ್ನು ಆಡಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಟೂರ್ನಿಯ ಆಯುಕ್ತ ಅರುಣ್ ಧುಮಾಲ್ ಹೇಳಿದ್ದಾರೆ.
2022ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್ ತಂಡಗಳ ಸೇರ್ಪಡೆಯ ನಂತರ ಐಪಿಎಲ್ನಲ್ಲಿ ಪಂದ್ಯಗಳ ಸಂಖ್ಯೆ 60ರಿಂದ 74ಕ್ಕೆ ಏರಿಕೆಯಾಗಿತ್ತು. 2025ರಲ್ಲಿ ಇದನ್ನು 84ಕ್ಕೆ ಏರಿಸುವ ಯೋಜನೆ ಇದ್ದರೂ, ನಂತರದಲ್ಲಿ ಅದನ್ನು ಮುಂದೂಡಲಾಗಿತ್ತು. ಸಮಯಾವಕಾಶದ ಕೊರತೆ ಮತ್ತು ಹೆಚ್ಚಿನ ಡಬಲ್ ಹೆಡರ್ಗಳನ್ನು (ಒಂದೇ ದಿನ 2 ಪಂದ್ಯ) ಆಡಿಸಲು ಪ್ರಸಾರ ವಾಹಿನಿಯ ಹಿಂದೇಟು ಕೂಡ ಇದಕ್ಕೆ ಕಾರಣವಾಗಿತ್ತು. ಅಲ್ಲದೆ ಮುಂದಿನ 2 ವರ್ಷವೂ ಐಸಿಸಿ ವೇಳಾಪಟ್ಟಿಯ ಅನ್ವಯ, ಮಾರ್ಚ್ ಮಧ್ಯಭಾಗದಿಂದ ಮೇ ಅಂತ್ಯದವರೆಗೆ ಮಾತ್ರ ಐಪಿಎಲ್ ಟೂರ್ನಿ ಆಯೋಜಿಸಲು ಅವಕಾಶವಿದೆ.
2027ಕ್ಕೆ ಹಾಲಿ ಪ್ರಸಾರ ಹಕ್ಕು ಒಪ್ಪಂದ ಮುಕ್ತಾಯಗೊಳ್ಳಲಿದ್ದು, 2028ರಲ್ಲಿ ಹೊಸ ಒಪ್ಪಂದ ಶುರುವಾಗುವಾಗ ಎಲ್ಲ 10 ತಂಡಗಳು ಪ್ರತಿ ತಂಡದ ವಿರುದ್ಧವೂ ತವರು ಮತ್ತು ಎದುರಾಳಿ ನೆಲದಲ್ಲಿ ಪಂದ್ಯ ಆಡುವ ಅವಕಾಶ ನೀಡಲು ಚಿಂತಿಸಲಾಗಿದೆ. ಇದರಿಂದ ಪ್ರತಿ ತಂಡಕ್ಕೆ 18 ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದೆ ಮತ್ತು ಟೂರ್ನಿಯ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆಯಾಗುತ್ತದೆ.
"ನಾವು ಬಿಸಿಸಿಐನೊಳಗೆ ಮತ್ತು ಐಸಿಸಿ ಜತೆಗೆ ಈ ಬಗ್ಗೆ ಚರ್ಚಿಸುತ್ತಿದ್ದೇವೆ. ಕ್ರಿಕೆಟ್ ಪ್ರೇಮಿಗಳು ಈಗ ದ್ವಿಪಯ ಮತ್ತು ಐಸಿಸಿ ಟೂರ್ನಿಗಳಿಗಿಂತ ಹೆಚ್ಚಾಗಿ ್ರಾಂಚೈಸಿ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ನತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಇದರ ಗರಿಷ್ಠ ಲಾಭವೆತ್ತುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಖಂಡಿತವಾಗಿಯೂ ಮುಂದೊಂದು ದಿನ ಐಪಿಎಲ್ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆಯಾಗಲಿದೆ' ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಹಾಲಿ ಐಪಿಎಲ್ ಟೂರ್ನಿ 9 ವಾರಗಳ ಕಾಲ ಆಯೋಜನೆಗೊಂಡಿದ್ದು, ಕೇವಲ 12 ಡಬಲ್ ಹೆಡರ್ಗಳನ್ನಷ್ಟೇ ನಿಗದಿಪಡಿಸಲಾಗಿದೆ. ಪಂದ್ಯಗಳ ಸಂಖ್ಯೆಯನ್ನು 94ಕ್ಕೆ ಏರಿಸಿದರೆ ಟೂರ್ನಿಯನ್ನೂ 2 ವಾರಗಳ ಕಾಲ ವಿಸ್ತರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸಾರ ವಾಹಿನಿಯ ಆಸಕ್ತಿ ಪ್ರಮುಖ ಪಾತ್ರ ವಹಿಸಲಿದೆ. ಯಾಕೆಂದರೆ ಐಪಿಎಲ್ನಲ್ಲಿ ಕೆಲವೊಮ್ಮೆ ಜನರು ಸತತ ಕ್ರಿಕೆಟ್ನಿಂದ ಬೇಸತ್ತು ಟೂರ್ನಿಯ ನಡುವೆಯೇ ವೀಕ್ಷಕರ ಸಂಖ್ಯೆ ಕುಸಿತ ಕಂಡ ದೃಷ್ಟಾಂತವೂ ಇದೆ.
ತಂಡಗಳ ಏರಿಕೆ ಇಲ್ಲ
ಐಪಿಎಲ್ನಲ್ಲಿ ಹೊಸ ತಂಡಗಳನ್ನು ಖರೀದಿಸಲು ಹಲವು ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ. ಆದರೆ ಸದ್ಯಕ್ಕೆ ತಂಡಗಳ ಸಂಖ್ಯೆಯನ್ನು ಏರಿಸುವ ಯೋಜನೆ ಇಲ್ಲ. ಈಗಿರುವ 10 ಉತ್ತಮ ಸಂಖ್ಯೆಯೇ ಆಗಿದೆ. ಟೂರ್ನಿಯ ಹಿತಾಸಕ್ತಿ ಮತ್ತು ಕ್ರಿಕೆಟ್ ಗುಣಮಟ್ಟದ ದೃಷ್ಟಿಯಿಂದ ಸದ್ಯಕ್ಕೆ ತಂಡಗಳ ಏರಿಕೆ ಸಾಧ್ಯತೆ ಕಾಣಿಸುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.
18ನೇ ಆವೃತ್ತಿ ವಿಶೇಷ
ಐಪಿಎಲ್ ಪ್ರತಿ ವರ್ಷವೂ ಬೆಳವಣಿಗೆ ಕಾಣುತ್ತಿದೆ. ಈ ಸಲದ 18ನೇ ಆವೃತ್ತಿ ಅತ್ಯಂತ ವಿಶೇಷವಾಗಿ ಕಾಣಿಸುತ್ತಿದೆ. ಕಳೆದ 17 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲದ ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಈ ಬಾರಿ ಬಲಿಷ್ಠವಾಗಿ ಕಾಣಿಸುತ್ತಿದ್ದು, ಪ್ಲೇಆ್ ರೇಸ್ನಲ್ಲಿ ಮುಂಚೂಣಿಯಲ್ಲಿವೆ. ಹಿಂದೆಂದೂ ಗೆಲ್ಲದ ತಂಡವೊಂದು ಈ ಬಾರಿ ಪ್ರಶಸ್ತಿ ಗೆಲ್ಲಬೇಕೆಂಬುದು ನನ್ನ ಆಸೆಯಾಗಿದೆ. ಹೊಸ ತಂಡ ಚಾಂಪಿಯನ್ ಆದರೆ ನಾನು ಅತ್ಯಂತ ಸಂತೋಷಪಡುತ್ತೇನೆ. ಭಾರತದ ಹಲವು ಹೊಸಹೊಸ ಆಟಗಾರರು ಮಿಂಚುತ್ತಿದ್ದಾರೆ. ತಂಡಗಳ ನಡುವಿನ ಸ್ಪರ್ಧೆಯೂ ಅತ್ಯಂತ ನಿಕಟವಾಗಿದೆ. ಟಿವಿ ವೀಕ್ಷಕರು ಮತ್ತು ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸಂಖ್ಯೆಯೂ ಅಮೋಘವಾಗಿದೆ. ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಪ್ರೀತಿ ಹೆಚ್ಚಾಗುತ್ತಿದೆ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.