More

    ಗಣೇಶ ಹಬ್ಬ ಆಚರಣೆ ಎಂದು?

    ವರಸಿದ್ಧಿ ವಿನಾಯಕ ಚತುರ್ಥಿ ನಿರ್ಣಯ -2023

    ಮಹಾಬಲಮೂರ್ತಿ ಕೊಡ್ಲೆಕೆರೆ
ಮಹಾಬಲಮೂರ್ತಿ ಕೊಡ್ಲೆಕೆರೆ
    ಭಾರತದಲ್ಲಿ ಯಾವುದೇ ಜಾತಿ, ಮತ, ಪಂಥಗಳ ಬೇಧಭಾವವಿಲ್ಲದೆ ಅತ್ಯಂತ ವೈಭವದಿಂದ ಆಚರಿಸುವ ಹಬ್ಬವೆಂದರೆ ಗಣೇಶ ಚತುರ್ಥಿ. ಸಕಲ ವಿಘ್ನಗಳನ್ನು ನಿವಾರಿಸುವ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ.

    ವಿಘ್ನ ವಿನಾಯಕನ ಹಬ್ಬವು ಪ್ರತಿವರ್ಷ ಭಾದ್ರಪದ ಶುಕ್ಲ ಚತುರ್ಥಿ ತಿಥಿಯಂದು ಬರುತ್ತದೆ. ಈ ವರ್ಷ ಚತುರ್ಥಿ ತಿಥಿಯು ಎರಡು ದಿನ ಬಂದಿರುವುದು. ಅಂದರೆ ತಿಥಿಯು ಸೆ. 18 ಮತ್ತು 19ರಂದು ಬಂದಿರುವುದರಿಂದ ಯಾವ ದಿನ ವಿನಾಯಕ ಚತುರ್ಥಿ ಹಬ್ಬವನ್ನು ಆಚರಿಸಬೇಕೆಂದು ಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ. ಅಷ್ಟೇ ಅಲ್ಲ ಕೆಲವು ಪಂಚಾಂಗ ಮತ್ತು ಕ್ಯಾಲೆಂಡರ್​ಗಳಲ್ಲಿ 18ನೇ ತಾರೀಖು ಕೊಟ್ಟಿದ್ದರೆ, ಇನ್ನೂ ಕೆಲವು ಪಂಚಾಂಗ ಮತ್ತು ಕ್ಯಾಲೆಂಡರ್​ಗಳಲ್ಲಿ 19ನೇ ತಾರೀಖು ಕೊಟ್ಟಿದ್ದಾರೆ. ಹೀಗಾಗಿ ಇನ್ನೂ ಹೆಚ್ಚಿನ ಗೊಂದಲ ಉಂಟಾಗಿದೆ. ‘ಮೀನ ಮೇಷ ಎಣಿಸುವುದು’ ಎಂಬ ಮಾತು ಈ ರೀತಿಯ ಸಂದರ್ಭಗಳಲ್ಲಿ ಉಂಟಾಗುತ್ತದೆ. ಒಂದು ಕಾಲು ಮುಂದಿನ ಕೋಣೆಯಲ್ಲಿ ಇರಿಸಲ್ಪಡುತ್ತದೆ ಎಂಬ ಹೊತ್ತಲ್ಲೇ ಹಿಂದಿನ ಕಾಲು, ಇರುವ ಕೋಣೆಯಿಂದ ನೆಲ ಬಿಡಲು ತಯಾರಿಯಲ್ಲಿ ನಿರತವಾಗುತ್ತದೆ. ಭಾವ ಸಂಧಿಗಳು ಎಂಬುದಾಗಿ ವಿಷಯವನ್ನು ತಾಂತ್ರಿಕವಾಗಿ ಕರೆಯುತ್ತಾರೆ. ಅಕ್ಷಾಂಶ, ರೇಖಾಂಶಗಳು ಭಿನ್ನಗೊಳ್ಳುವ ಸಂದಿನಲ್ಲಿ ತಿಥಿಗಳ ನಿಖರ ಸ್ಪುಟ ಅವರವರ ನಿರ್ಣಯದಲ್ಲಿ ತನ್ನನ್ನು ಒಮ್ಮೆ ಹಾಗೆ, ಒಮ್ಮೆ ಹೀಗೆ ಕಾಣಿಸುತ್ತ ಹೋಗುತ್ತದೆ. ಡಾಕ್ಟರುಗಳು ಕಣ್ಣಿನ ನಂಬರ್ ನಿರ್ಣಯಿಸುವಾಗ,ಈಗ ಇದು ಚೆನ್ನಾಗಿ ಕಾಣುತ್ತದೆಯೋ, ಇಲ್ಲಾ.., ಇದು ಚೆನ್ನಾಗಿ ಕಾಣಿಸುತ್ತದೋ? ಎಂದು ಕೇಳುತ್ತಿರುವಂತೆ. ಒಂದು ಹಂತದಲ್ಲಿ ಯಾವುದು ಹೆಚ್ಚು ಸುಸ್ಪಷ್ಟ ಎಂಬುದನ್ನು ನಾವು ನಿರ್ಣಯಿಸುವ ಕೆಲಸ ತುಸು ಕಷ್ಟವಾಗುತ್ತದೆ. ಹೀಗಿರುವಾಗ ಅಪರೂಪದ ಈ ಸಂದರ್ಭದಲ್ಲಿ ಶಾಸ್ತ್ರೀಯವಾಗಿ ಗಣೇಶನ ಹಬ್ಬದ ದಿನವನ್ನು ನಿರ್ಣಯಿಸುವ ಒಂದು ಪ್ರಯತ್ನ ಇಲ್ಲಿ ಮಾಡಲಾಗಿದೆ.

    ಗಣೇಶ ಚತುರ್ಥಿಯು ಪ್ರತಿ ವರ್ಷದ ಭಾದ್ರಪದ ಚತುರ್ಥಿಯಂದು ಆಚರಿಸಲ್ಪಡುತ್ತದೆ. ಆದರೆ ಚತುರ್ಥೀ ತಿಥಿಯು ಎರಡು ದಿನ ಬಂದಾಗ ಶಾಸ್ತ್ರಗಳ ನಿರ್ಣಯ ಹೀಗಿದೆ -‘ಶುಕ್ಲಚತುರ್ಥ್ಯ ಸಿದ್ಧಿವಿನಾಯಕ ವ್ರತಂ, ಸಾ ಮಧ್ಯಾಹ್ನವ್ಯಾಪಿನಿ ಗ್ರಾಹ್ಯಮ್ | ದಿನದ್ವಯೇ ಸಾಕಲ್ಯೇನ ಮಧ್ಯಾನಹೇ ವ್ಯಾಪ್ತಾಬವ್ಯಾಪ್ತವ ವಾ ಪೂರ್ವಾ | ದಿನದ್ವಯೇ ಸಾಮ್ಯೇನ ವೈಶಮಯೇಣ ಏಕದೇಶ ವ್ಯಾಪ್ತಾವಪಿ ಪೂರ್ವವೈವ ||

    ಸರಳ ಅರ್ಥ: ಭಾದ್ರಪದ ಶುಕ್ಲ ಚತುರ್ಥಿಯಂದು ಸಿದ್ಧಿವಿನಾಯಕ ಹಬ್ಬವನ್ನು ಆಚರಿಸಬೇಕು. ಆ ಚತುರ್ಥಿಯು ಮಧ್ಯಾಹ್ನ ವ್ಯಾಪಾಯಿನಿಯಾಗಿರಬೇಕು. ಎರಡು ದಿನ ಪೂರ್ಣ ಮಧ್ಯಾಹ್ನ ವ್ಯಾಪಿನಿ ಇರುವಾಗ ಅಥವಾ ಪೂರ್ಣ ಇಲ್ಲದಿರುವಾಗ ಪೂರ್ವ ದಿನವನ್ನೇ ಪರಿಗಣಿಸಬೇಕು. ಎರಡು ದಿನ ಸಮ ಅಥವಾ ವೈಷಮ್ಯ ತಿಥಿ ಇರುವಾಗಲೂ ಸಹ ಪೂರ್ವ ದಿನವನ್ನೇ ಪರಿಗಣಿಸಬೇಕು. ಇನ್ನು ಮುಂದುವರಿದು ‘ಚತುರ್ಥಿ ಗಣೇಶವ್ರತಾತಿರಿಕ್ತೋ ಉಪವಾಸ ಕಾರ್ಯು ಪಂಚಮೀಯುಕ್ತ ಗ್ರಾಹ್ಯ …..ತೃತೀಯ ಯೋಗ ಪ್ರಶಸ್ತಮ್ – ಅಂದರೆ ಗಣೇಶ ಚತುರ್ಥಿ ಅತಿರಿಕ್ತ ಕಾರ್ಯಗಳಿಗೆ ಪಂಚಮಿಯುಕ್ತ ಚತುರ್ಥಿಯು ಗ್ರಾಹ್ಯವು. ಆದರೆ ಗಣೇಶ ಚತುರ್ಥಿಗೆ ಮಾತ್ರ ತೃತೀಯಯುಕ್ತ ಚತುರ್ಥಿಯೇ ಪ್ರಶಸ್ತ ಎಂದಿದ್ದಾರೆ. ಹೀಗೆ ಶಾಸ್ತ್ರಗಳ ವಚನದ ಅನುಸಾರ ಮಧ್ಯಾಹ್ನವ್ಯಾಪಿನಿ ಚತುರ್ಥಿ ತಿಥಿಯನ್ನೇ ಪರಿಗಣಿಸಬೇಕು ಮತ್ತು ತಿಥಿ ಎರಡು ದಿನ ಮಧ್ಯಾಹ್ನ ವ್ಯಾಪಿನಿ ಇದ್ದಾಗ ಪೂರ್ವದಿನವನ್ನೇ ಗ್ರಹಿಸಬೇಕು ಎಂದಿದ್ದಾರೆ. ಜೊತೆಗೆ ‘ತೃತೀಯಾ ಯುಕ್ತ ಚತುರ್ಥಿ’ ಯೇ ಪ್ರಶಸ್ತ ಹೊರತು ‘ಪಂಚಮಿಯುಕ್ತ ಚತುರ್ಥಿ ಅಲ್ಲ’ ಎಂದು ಸ್ಪಷ್ಟವಾಗಿ ಆದೇಶ ಕೊಟ್ಟಿದ್ದಾರೆ.

    ಶಾಸ್ತ್ರಗಳಲ್ಲಿ ದಿನಮಾನವನ್ನು 5 ಭಾಗಮಾಡಿ, ಅದರ 3ನೆಯ ಭಾಗವನ್ನು ಮಧ್ಯಾಹ್ನ ಕಾಲ ಎನ್ನುತ್ತಾರೆ. ಈ ನಿಯಮ ಅನುಸಾರ 12 ಘಂಟೆಯ ದಿನಮಾನವನ್ನು 5 ಭಾಗ ಮಾಡಿದಾಗ 1 ಭಾಗಕ್ಕೆ ಸುಮಾರು 2ಘಂಟೆ 24 ನಿಮಿಷ ಬರುತ್ತದೆ. ಅಂದರೆ ಸೂರ್ಯೋದಯದಿಂದ 4 ಘಂಟೆ 48 ನಿಮಿಷಕ್ಕೆ ಮಧ್ಯಾಹ್ನ ಕಾಲ ಪ್ರಾರಂಭವಾಗಿ 7ಘಂಟೆ 32 ನಿಮಿಷಕ್ಕೆ ಮುಗಿಯುತ್ತದೆ.

    ಇನ್ನು 2023ರ ಗಣೇಶ ಚತುರ್ಥಿ ವಿಷಯವಾಗಿ ಬಂದಾಗ ಸೂರ್ಯಸಿದ್ಧಾಂತ ಅನುಸಾರ ಎಲ್ಲಾ ಪಂಚಾಂಗಗಳು 18ನೆಯ ತಾರೀಖು ವಿನಾಯಕ ಚತುರ್ಥಿ ಎಂದು ಹೇಳಿದರೆ, ದೃಕ್ ಪಂಚಾಂಗಗಳು 19ನೆಯ ತಾರೀಖು ವಿನಾಯಕ ಚತುರ್ಥಿ ಎಂದು ಹೇಳುತ್ತವೆ. ಈಗ ಮೇಲೆ ಹೇಳಿದ ಶಾಸ್ತ್ರೀಯ ವಚನಾನುಸಾರ ಒಂದೊಂದಾಗಿ ವಿವೇಚನೆ ಮಾಡೋಣ.

    1. ಸೂರ್ಯಸಿದ್ಧಾಂತ ಪಂಚಾಂಗ – ಇದರ ಪ್ರಕಾರ 18ನೆಯ ತಾರೀಖು ಚತುರ್ಥಿ ಬರುತ್ತದೆ. ಚತುರ್ಥಿ ತಿಥಿಯು ಸೆ. 18 ರಂದು ಬೆಳಗ್ಗೆ 9.59 ಕ್ಕೆ ಪ್ರಾರಂಭವಾಗಿ ಸೆ.19 ರಂದು ಬೆಳಿಗ್ಗೆ 10.28ಕ್ಕೆ ಸಮಾಪ್ತಿಯಾಗುತ್ತದೆ. ಇಲ್ಲಿ 18ನೆಯ ದಿನದಂದು ಮಾತ್ರ ಚತುರ್ಥಿ ಮಧ್ಯಾಹ್ನ ವ್ಯಾಪಿನಿಯಾಗುವುದರಿಂದ 18ನೆಯ ತಾರೀಖ ವಿನಾಯಕ ಚತುರ್ಥಿ ಆಚರಣೆ ಅತ್ಯಂತ ಪ್ರಶಸ್ತವಾಗುತ್ತದೆ.

    2. ದೃಕ್ ಪಂಚಾಂಗ – ದೃಕ್ ಪಂಚಾಂಗಗಳ ಪ್ರಕಾರ ಚತುರ್ಥಿ ತಿಥಿಯು ಸೆ. 18ರಂದು 12.38 ಕ್ಕೆ ಪ್ರಾರಂಭವಾಗಿ ಸೆ. 19 ರ 1.42 ಕ್ಕೆ ಪೂರ್ಣವಾಗುತ್ತದೆ. ಇಲ್ಲಿ ಶಾಸ್ತ್ರೀಯವಾಗಿ ನೋಡಲಾಗಿ 18ನೆಯ ತಾರೀಖು ಚತುರ್ಥಿ ಮಧ್ಯಾನವ್ಯಾಪಿನಿಯಾಗಿದೆ. 18ನೆಯ ತಾರೀಖು ಸೂರ್ಯೋದಯವು 6.09ಕ್ಕೆ ಮತ್ತು ಸೂರ್ಯಾಸ್ತವು 6.17 ಕ್ಕೆ ಇರುವುದರಿಂದ ಮಧ್ಯಾಹ್ನ ಕಾಲವು 11.01ರಿಂದ 01.27ರವರೆಗೆ ಬರುತ್ತದೆ. ಹೀಗಾಗಿ ಶಾಸ್ತ್ರವಚನಗಳ ಪ್ರಕಾರ 18ನೆಯ ತಾರೀಖು ಚತುರ್ಥಿಯು ಮಧ್ಯಾಹ್ನ ವ್ಯಾಪಿನಿಯಾಗುತ್ತದೆ ಹಾಗೂ ಶಾಸ್ತ್ರಗಳ ಪ್ರಕಾರ ತೃತೀಯಯುಕ್ತ ಪೂರ್ವದಿನ ಬರುತ್ತದೆ. ಹೀಗೆ ದೃಕ್ ಗಣಿತದ ಪ್ರಕಾರ ನೋಡಲಾಗಿಯೂ 18ನೆಯ ತಾರೀಖಿನಂದೇ ಗಣೇಶ ಚತುರ್ಥಿ ತಿಥಿಯು ಬರುತ್ತದೆ.

    ಒಟ್ಟಾರೆ ಸೂರ್ಯಸಿದ್ಧಾಂತ ಮತ್ತು ದೃಕ್ ಗಣಿತ ಪಂಚಾಂಗಗಳ ಪ್ರಕಾರವಾಗಿ 18ನೆಯ ತಾರೀಖಿನಂದು ಗಣೇಶ ಚತುರ್ಥಿ ಸಿದ್ಧವಾಗುತ್ತದೆ. ಹೀಗಾಗಿ ಎಲ್ಲರೂ ಸೋಮವಾರ (ಸೆ.18) ರಂದೇ ಗಣೇಶ ಚತುರ್ಥಿ ಆಚರಿಸುವುದು ಶಾಸ್ತ್ರೀಯವಾಗಿ ಸೂಕ್ತವಾಗಿದೆ.

    ಧಾತೆಪಂಚಾಂಗದ ಪ್ರಕಾರ… : ಸೂರ್ಯ ಸಿದ್ಧಾಂತದ ಪಂಚಾಂಗ ಪಾಲಿಸುವ ವಿದ್ವಾಂಸರು ಸೆ.18 ಸೋಮವಾರ ಗಣೇಶ ಚತುರ್ಥಿ ಎನ್ನುತ್ತಿದ್ದರೆ, ಬೆಳಗಾವಿ ಭಾಗದಲ್ಲಿ ಪ್ರಚಲಿತದಲ್ಲಿರುವ ಧಾತೆ ಪಂಚಾಂಗದ ಪ್ರಕಾರ ಸೆ.19ರ ಮಂಗಳವಾರವೇ ಪ್ರಶಸ್ತ. ಧಾತೆ ಪಂಚಾಂಗದಂತೆ ಸೆ.19 ಗಣೇಶ ಚತುರ್ಥಿಗೆ ಸೂಕ್ತವಾಗಿದೆ.

    ಉತ್ತರ ಕರ್ನಾಟಕದಲ್ಲಿ 19ಕ್ಕೆ ಆಚರಣೆ

    ಬೆಳಗಾವಿ: ಯಾವ ದಿನದಂದು ವಿಘ್ನನಿವಾರಕನ ಪ್ರತಿಷ್ಠಾಪನೆ ಮಾಡಬೇಕೆಂದು ಇಡೀ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಸರ್ಕಾರ ಸೆ.19ರಂದು ಹಬ್ಬ ರಜೆ ಘೋಷಿಸಿದೆ. ಆದರೆ ಹಲವು ಖಾಸಗಿ ಸಂಸ್ಥೆಗಳಲ್ಲಿ ಗೊಂದಲದಿಂದಾಗಿ ಇನ್ನೂ ರಜೆ ಘೋಷಿಸಿಲ್ಲ.

    ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸೋಮವಾರವೇ ಗಜವದನ ಪ್ರತಿಷ್ಠಾಪಿಸಿ, ಪೂಜಿಸುತ್ತಾರೆ. ದೇಶದಲ್ಲಿಯೇ ಗಣೇಶೋತ್ಸವಕ್ಕೆ ಹೆಸರಾಗಿರುವ ಮುಂಬೈ, ಪುಣೆ ಮಾದರಿಯಂತೆ ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಕಲಬುರಗಿ ಸೇರಿ ಉತ್ತರ ಕರ್ನಾಟಕದಲ್ಲಿ ಬಹುತೇಕರು ಸೆ.19ರಂದೇ ಚತುರ್ಥಿ ಆಚರಿಸುತ್ತಿದ್ದು, ಬೆಳಗಾವಿಯಲ್ಲೂ ಮಂಗಳವಾರವೇ ಗಣೇಶ ಪ್ರತಿಷ್ಠಾಪನೆಗೆ ಸಜ್ಜಾಗಿದ್ದೇವೆ ಎಂದು ಮಧ್ಯವರ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಸಮನ್ವಯಾಧಿಕಾರಿ ವಿಕಾಸ ಕಲಘಟಗಿ ಸಷ್ಟಪಡಿಸಿದ್ದಾರೆ. ಈ ಬಾರಿ 11 ದಿನಗಳ ಬದಲಾಗಿ ಹತ್ತೇ ದಿನಗಳಿಗೆ ಗಣೇಶೋತ್ಸವ ಸೀಮಿತಗೊಳಿಸಲಾಗಿದೆ. ಸೆ. 29ರ ಬದಲಾಗಿ ಸೆ. 28ಕ್ಕೆ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ.

    ಈ ಬಾರಿ ಅಮಾವಾಸ್ಯೆಯನ್ನು ಸೆ.14ರಂದು ಆಚರಿಸಿದವರು ಸೆ.18ಕ್ಕೆ ಮತ್ತು ಸೆ.15ರಂದು ಅಮಾವಾಸ್ಯೆ ಆಚರಿಸುವವರು ಸೆ.19ರ ಮಂಗಳವಾರ ಗಣಪತಿ ಪ್ರತಿಷ್ಠಾಪಿಸಬಹುದು.

    | ದತ್ತಾತ್ರೇಯ ನಾಡಗೀರ ಪ್ರಧಾನ ಅರ್ಚಕ, ಗಣಪತಿ ಮಂದಿರ ಕಾಕತಿ, ಬೆಳಗಾವಿ

    ಸ್ವರ್ಣಗೌರಿ ವ್ರತ ಮತ್ತು ವರಸಿದ್ದಿ ವಿನಾಯಕ ವ್ರತದ ಬಗ್ಗೆ ಮಾಹಿತಿ

    ಸೆ.18 ಸೋಮವಾರ ತೃತೀಯ ತಿಥಿ ಬೆಳಗ್ಗೆ 09 : 56 ನಿಮಿಷಗಳವರೆಗೆ ಇದ್ದು, 09 : 56 ರ ನಂತರ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ. ಇನ್ನು ಸೋಮವಾರ ಬೆಳಗ್ಗೆ ಸೂರ್ಯೋದಯದ ಸಮಯವು ಮೈಸೂರಿನಲ್ಲಿ 6 : 12. ಚಾಮರಾಜನಗರ 6 : 11., ಮಂಡ್ಯ 6 : 11., ಬೆಂಗಳೂರಿನಲ್ಲಿ

    6 : 08 ಕ್ಕೆ ಆಗಲಿದ್ದು, ರಾಹುಕಾಲ 7 : 44 ರಿಂದ 9 : 15 ರ ವರೆಗೆ, ಯಮಗಂಡಕಾಲ 10 : 46 ರಿಂದ 12 : 17 ರ ವರೆಗೆ ಇರುತ್ತದೆ. ಹಾಗಾಗಿ ಸ್ವರ್ಣ ಗೌರಿ ವ್ರತ ಮಾಡುವವರು ಬೆಳಗ್ಗೆ: 6 : 15 ರಿಂದ 7 : 40 ರ ವರೆಗೆ ಅಥವಾ 9 : 16 ರಿಂದ 9 : 55 ರ ವರೆಗೆ ಮಾಡಬಹುದು. ವರಸಿದ್ದಿ ವಿನಾಯಕ ವ್ರತ ಮಾಡುವವರು ಬೆಳಗ್ಗೆ 10 : 00 ರಿಂದ 10 : 45 ರ ವರೆಗೆ ಅಥವಾ 12 : 20 ರ ಮೇಲೆ ಅಭಿಜಿನ್ ಲಗ್ನದಲ್ಲಿ ಮಾಡಬಹುದು. ಸೂಚನೆ: ಗೌರಿ ಮತ್ತು ಗಣಪತಿ ಹಬ್ಬ ಈ ವರ್ಷ ಒಂದೇ ದಿನ ಬಂದಿರುತ್ತದೆ.

    (ಜ್ಞಾನ ಆಧ್ಯಾತ್ಮಿಕ ಸಲಹಾ ಕೇಂದ್ರ)

     
    (ಲೇಖಕರು: ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕರು)

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts