More

    ನಮ್ಮ ಮಾವಂದ ಮೇ 31ಕ್ಕ ಮುಗಿತ…

    ನಮ್ಮ ಮಾವಂದ ಮೇ 31ಕ್ಕ ಮುಗಿತ…ಇದ ಒಂದ ಹತ್ತ ಹದಿನೈದ ವರ್ಷದ ಹಿಂದಿನ ಮಾತ ಇರಬೇಕ, ಒಂದ ದಿವಸ ನಮ್ಮ ಕ್ಲಾಸಮೇಟ್ ಪಚ್ಯಾ ದುರ್ಗದಬೈಲನಾಗ ಭೆಟ್ಟಿ ಆಗಿದ್ದಾ. ಹಿಂಗ ಅದ ಇದ ಮಾತಾಡ್ತ ಮಾತಾಡ್ತ ಒಮ್ಮಿಕ್ಕಲೇ ‘ನಮ್ಮ ಮಾವಂದ ಮೊನ್ನೆ ಮೇ ಮುವತ್ತೊಂದಕ್ಕ ಮುಗಿತಪಾ’ ಅಂದಾ.

    ನಾ ಒಮ್ಮಿಕ್ಕಲೇ ಗಾಬರಿ ಆಗಿ ‘ಯಾಕಲೇ… ಹೆಂತಾ ಗಟ್ಟೆ ಮನಷ್ಯಾ ಇದ್ದಾ, ದಿನಾ ಬೆಳಗಾದರ ಮನಿ-ಅಂಗಳಾ ಕಸಾ ಹುಡಗಿ ಥಳಿ ಹೊಡದ ರಂಗೋಲಿ ಹಾಕತಿದ್ದಾ, ಒಮ್ಮಿಂದೊಮ್ಮಿಲ್ಲೇ ಹಂತಾದೇನ ಆಗಿತ್ತೊ ಪಾಪಾ?’ ಅಂತ ಅಂದರ. ‘ಲೇ….ಮಗನ ಅವಂಗೇನೂ ಆಗಿಲ್ಲಲೇ… ಈಗ ಮನಿ – ಅಂಗಳಾ ಕಸದ ಜೊತಿ ಎಂಜಲಾ-ಗ್ವಾಮಾನೂ ಅವನ ಮಾಡ್ತಾನ. ನಾ ಹೇಳಿದ್ದ ಮೊನ್ನೆ ಮೇ 31ಕ್ಕ ನಮ್ಮ ಮಾವಾ ರಿಟೈರ್ಡ್ ಆದಾ’ ಅಂತ ಕ್ಲಾ್ಯರಿಫ್ಯೈ ಮಾಡಿದಾ.

    ಅಲ್ಲಾ, ಒಮ್ಮಿಕ್ಕಲೇ ನಮ್ಮ ಮಾವಂದ ಮೇ ಮುವತ್ತೊಂದಕ್ಕ ಮುಗಿತ ಅಂದರ ಜನಾ ಏನ ತಿಳ್ಕೋಬಾರದ ಅಂತೇನಿ. ಹಂಗ ಅಂವಾ ಅಗದಿ ಗಟ್ಟಿ ಮನಷ್ಯಾ, ನಾ ಸಣ್ಣಂವ ಇದ್ದಾಗಿಂದ ತೊರವಿಗಲ್ಲಿ ಒಳಗ ನೋಡ್ಕೊತ ಬಂದೇನಿ, ಹಂತಾಂವಂದ ಒಮ್ಮಿಕ್ಕಲೇ ಮುಗಿತ ಅಂದಿದ್ದಕ್ಕ ನಂಗ ಖರೇನ ಗಾಬರಿ ಆಗಿತ್ತ.

    ನಾ ಆಮ್ಯಾಲೆ ಹಿಂಗ ವಿಚಾರ ಮಾಡಿದಾಗ ನೆನಪಾತ, ಅಲ್ಲಾ ಈ ಮಗಾ ತನ್ನ ಮಾವಂದ ಅರವತ್ತ ವರ್ಷದ ಶಾಂತಿ ಅಂದರ ಷಷ್ಟಬ್ದಿ ಕಾರ್ಯಕ್ರಮ ಅಂತ ಒಂದ ಆರ ತಿಂಗಳ ಹಿಂದ ತೊರವಿಗಲ್ಲಿ ರಾಯರ ಮಠದಾಗ ಮಾಡಿ ನಮ್ಮನ್ನೆಲ್ಲಾ ಕರದಿದ್ದಾ, ಹಂಗ ನಮ್ಮಲ್ಲೇ ನೋಡಿದರ ಅರವತ್ತ ಮುಗದ ಅರವತ್ತೊಂದರಾಗ ಬಿದ್ದ ಮ್ಯಾಲೆ ಷಷ್ಟಬ್ದಿ ಮಾಡ್ತಾರ, ಇಂವಾ ನೋಡಿದರ ಮೊನ್ನೆ ಮೇ 31ಕ್ಕ ನಮ್ಮ ಮಾವಂದ ರಿಟೈರ್ಡ್ ಆತ ಅಂತಾನ. ಇವರ ಹೆಂಗ ಇನ್ನೂ ಅರವತ್ತ ತುಂಬೋಕಿಂತ ಆರ ತಿಂಗಳ ಮೊದ್ಲ ಷಷ್ಟಬ್ದಿ ಮಾಡಿದರು, ಎಲ್ಲೇರ ಮಂದಿ ಗಿಫ್ಟ್ ಆಶಾಕ್ಕ ಮಾಡಿದರೋ ಏನೋ ಅಂತ ಕೇಳಿದರ ಅದ ಒಂದ ದೊಡ್ಡ ಕಥಿನ ಇತ್ತ.

    ಅವರ ಮಾವ actually ಹುಟ್ಟಿದ್ದ official date of birth ಕಿಂತಾ ಒಂದ ಒಂಬತ್ತ ತಿಂಗಳ ಮೊದ್ಲ ಅಂತ. ಆದರ ಸಾಲ್ಯಾಗ ಹೆಸರ ಹಚ್ಚಬೇಕಾರ ಡೇಟ್ ಅಡ್ಜಸ್ಟ್ ಮಾಡಿ ಮುಂದ ಬರೋ ಜೂನ್ ಒಂದ ಅಂತ ಹುಟ್ಟಿದ್ದ ಡೇಟ್ ಬರಿಸಿಸಿ ಸಾಲಿಗೆ ತುರಿಕಿದ್ದರ. ಅಲ್ಲಾ ಆವಾಗಿನ ಕಾಲದಾಗ ಅದ ಕಾಮನ್ ಇತ್ತ ಬಿಡ್ರಿ. ಕರೆಕ್ಟ ಸಾಲಿಗೆ ಹೆಸರ ಹಚ್ಚಬೇಕಂದರ ಐದ ವರ್ಷ ಹತ್ತ ತಿಂಗಳ ಆಗಿರಬೇಕ ಅಂತ ಇರ್ತಿತ್ತ. ಹಿಂಗಾಗಿ ಎಲ್ಲಾರೂ ಜೂನ್ ಒಂದ ಅಂತ ಬರಿಸಿ ಬಿಡ್ತಿದ್ದರು. ಯಾರಿಗೆ ತಮ್ಮ ಮಕ್ಕಳ ಶಾಣ್ಯಾರಿದ್ದಾರ ಅಂತ ಅನಸ್ತಿತ್ತ ಅವರ ಮುಂದಿನ ಜೂನ್ ಒಂದ ಅಂತ ಬರಸ್ತಿದ್ದರು, ಯಾರ ಮಕ್ಕಳ ಅಷ್ಟ ಶಾಣ್ಯಾ ಇರ್ತಿದ್ದಿಲ್ಲಾ ಅವರ ಒಂದ ವರ್ಷ ಹಿಂದಿನ ಜೂನ್ ಒಂದ ಅಂತ ಬರಸ್ತಿದ್ದರು, ಮುಂದ ಒಂದ ವರ್ಷ ಫೇಲ್ ಆದರು ಅಡ್ಜಸ್ಟ ಆಗ್ತದ ಅಂತ. ಅದರಾಗ ಆವಾಗೇನ ಬರ್ಥ ಸರ್ಟಿಫಿಕೇಟ್ ಇರ್ತಿದ್ದಿಲ್ಲಾ ಏನಿಲ್ಲಾ, ಹಡದೋರ ಬಂದ ಇಂವಾ ನನ್ನ ಮಗಾ, ಹಿಂತಾ ದಿವಸ ನಮ್ಮ ಜೀವಾ ತಿನ್ನಲಿಕ್ಕೆ ಹುಟ್ಟಾ್ಯನ ಅಂತ ಹೇಳಿ ಬಿಟ್ಟರ ಮುಗದ ಹೋಗ್ತಿತ್ತ.

    ಹಿಂಗಾಗಿ ನಮ್ಮ ಪಚ್ಯಾನ ಮಾವ ಅರವತ್ತ ತುಂಬಿ ಅರವತ್ತೊಂದರಾಗ ಬಿದ್ದ ಷಷ್ಟಬ್ದಿ ಆದರು ರಿಟೈರ್ಡ್ ಆಗಿದ್ದಿಲ್ಲಾ. ಅಲ್ಲಾ, ಅವನ ಅರವತ್ತ ವರ್ಷದ ಶಾಂತಿಗೆ ಅಉ, ಒಉ, ಒಉಉ ಎಲ್ಲಾರು ಬಂದ ಹೊಟ್ಟಿ ತುಂಬ ಉಂಡ ಗಿಫ್ಟ್ ಕೊಟ್ಟ ಹೋಗಿದ್ದರು. ಅಲ್ಲಾ, ಈ ಷಷ್ಟಬ್ದಿ ಏನ ಅದ ಅಲಾ ಅದನ್ನ ಪಂಚಾಂಗ ನೋಡಿ ತಿಥಿ ಪ್ರಕಾರ ಮಾಡೋದ ಆದರೂ ಒಬ್ಬರು ಬಾಯಿ ಬಿಟ್ಟ ನೀ ಇನ್ನೂ ರಿಟೈರ್ಡ್​ವೆುಂಟ್ ಯಾಕ ಆಗಿಲ್ಲಪಾ ಮತ್ತ ಅರವತ್ತ ತುಂಬಿ ಅರವತ್ತೊಂದರಾಗ ಬಿದ್ದರು ಅಂತ ಕೇಳಲಿಲ್ಲಾ. ಯಾಕಂದರ ಅವರಿಗೆ ಗೊತ್ತ ಇತ್ತ ಅಂವಾ ಖರೆ ಹುಟ್ಟಿದ್ದ ಡೇಟ್ ಬ್ಯಾರೆ ಸರ್ಕಾರಿ ಹುಟ್ಟಿದ್ದ ಡೇಟ್ ಬ್ಯಾರೆ ಅಂತ. ಅದರಾಗ ಅರವಪ್ಪ ಇವಂಗ ಸಾಲಿ ಸೇರಸಬೇಕಾರ ಜೂನ್ ಒಂದಕ್ಕ ಹುಟ್ಟಾ್ಯನ ಅಂತ ಅಡ್ಜಸ್ಟ್ ಮಾಡಿ ಬರಿಸ್ಯಾನ ಅಂತ ಎಲ್ಲಾರಿಗೂ ಗೊತ್ತ ಇದ್ದದ್ದ. ಅಲ್ಲಾ ಆಗಿನ ಕಾಲನ ಹಂಗ ಇತ್ತ. ನಾ ಸುಳ್ಳ ಹೇಳಂಗಿಲ್ಲಾ ಬೇಕಾರ ನೀವ ರಿಕಾರ್ಡ್ ಚೆಕ್ ಮಾಡಿ ನೋಡ್ರಿ ಒಂದ ಇಪ್ಪತ್ತ ವರ್ಷದ ಹಿಂದ ಸರ್ಕಾರಿ ನೌಕರಿ ಒಳಗ ಇದ್ದೋರೊಳಗ ಅರ್ಧಕ್ಕಾ ಅರ್ಧಾ ಮಂದಿ ಹುಟ್ಟಿದ್ದ ಜೂನ್ 1ಕ್ಕನ.

    ಇನ್ನ ಜೂನ್ ಒಂದಕ್ಕ ಹುಟ್ಟಿದವರೇಲ್ಲಾ ರಿಟೈರ್ಡ್ ಆಗೋದ ಮೇ 31ಕ್ಕ. ಹಿಂಗಾಗಿ ನಮ್ಮ ಪಚ್ಯಾನ ಮಾವನೂ ಮೇ 31ಕ್ಕ ರಿಟೈರ್ಡ್ ಆಗಿದ್ದ. ಅಲ್ಲಾ ನಿಮ್ಮ ಪೈಕಿ ಯಾರ- ಯಾರ ಮೇ 31ಕ್ಕ ರಿಟೈರ್ಡ್ ಆಗ್ಯಾರ ಅವರನ ಕೇಳಿ ನೋಡ್ರಿ, ಒಂದೂ ಅವರ ಬರ್ಥಡೇ ಅಂತು ಜೂನ್ 1 ಇರಬೇಕ ಆದರ ಅದರಾಗ ನೂರಕ್ಕ ತೊಂಬತ್ತೊರೊಂಬತ್ತ ಬಂಡಲ್ ಜೂನ್ 1ಕ್ಕ ಹುಟ್ಟಿದ್ವ ಇರ್ತಾವ. ಅದಕ್ಕ ನಾ ಹೇಳಿದ್ದ ಜೂನ್ 1, ನಮ್ಮ ದೇಶದ್ದ national birth date ಮಾಡ್ಬೇಕ ಅಂತ.

    ಹಂಗ ಅದನ್ನ ಜೂನ್ ಒಂದಕ್ಕ ಹುಟ್ಟಿದವರ ಬಗ್ಗೆ ಹೋದ ವರ್ಷ ಜೂನ್ ಒಂದಕ್ಕ ಹುಟ್ಟಿದವರ ಕೈ ಎತ್ತರಿ ಅಂತ ಒಂದ ಪ್ರಹಸನದಾಗ ಬರದಿದ್ದೆ ಬಿಡ್ರಿ.

    ಇನ್ನ ಜೂನ್ ಒಂದಕ್ಕ ಹುಟ್ಟಿದ್ದವರ ಬಗ್ಗೆ ಪ್ರಹಸನ ಬರದ ಮೇ 31ಕ್ಕ ರಿಟೈರ್ ಆಗಿದ್ದರ ಬಗ್ಗೆ ಬರಿಲಿಲ್ಲಾ ಅಂದರ ಹೆಂಗ ಸರಿ ಅನಸ್ತದ. ಅದಕ್ಕ ಈ ಸರತೆ ಈ ಮೇ 31ಕ್ಕ ರಿಟೈರ್ ಆಗೋರ ಬಗ್ಗೆ ಬರದಿದ್ದ ಅನ್ನರಿ.

    ಇನ್ನೊಂದ ಈ ಸರ್ಕಾರಿ ನೌಕರಿ ಮಾಡಿ ಮೇ 31ಕ್ಕ ರಿಟೈರ್ಡ್ ಆದೋರದ ಮಜಾ ಕಥಿ ಹೇಳ್ಬೇಕಂದರ ನಮ್ಮಪ್ಪನ ಸೋದರಮಾವ ಒಬ್ಬ ಇದ್ದಾ, ರಂಗಣ್ಣ ಮಾಮಾ ಅಂತ. ಅಂವಾ ಸೆಂಟ್ರಲ್ ಎಕ್ಸೈಜ್ ಒಳಗ ಸುಪರ ಇಂಡೆಂಟೇಂಟ್ ಆಗಿ ರಿಟೈರ್ ಆಗಿದ್ದಾ. ಅಂವಂದು ಹಿಂಗ ಅವರಪ್ಪಾ ಜೂನ್ ಒಂದ ಅಂತ ಡೇಟ್ ಆಫ್ ಬರ್ಥ್ ಬರಿಸಿಸಿ ಸಾಲಿ ಕಲಸಿದ್ದಾ, ಮ್ಯಾಲೆ ಅಂವಾ ಶಾಣ್ಯಾ ಬ್ಯಾರೆ ಇದ್ದಾ, ಆಗಿನ ಕಾಲದಾಗ ಡಿಗ್ರಿ ಕಲತಿದ್ದಾ. ಹಿಂಗಾಗಿ ಸಣ್ಣ ವಯಸ್ಸಿನಾಗ ಅವಂಗ ಮುಂದ ಸೆಂಟ್ರಲ್ ಎಕ್ಸೈಜ್ ಒಳಗ ನೌಕರಿ ಸಿಕ್ಕ ಬಿಟ್ಟಿತ್ತ. ಮುಂದ ಹುಡಗಗ ಛಲೋ ನೌಕರಿ ಅದ ಹಿಂತಾ ವರಾ ಬ್ಯಾರೆಯವರ ಮನಿಗೆ ಹೋಗಬಾರದ ಅಂತ ಅವರಪ್ಪಾ ತನ್ನ ಮೊಮ್ಮಗಳಿಗೆ ಅಂದರ ಹುಡಗನ ಅಕ್ಕನ ಮಗಳಿಗೆ ಕೊಟ್ಟ ಮೊದ್ವಿ ಮಾಡಿ ಕೈ ತೊಳ್ಕೊಂಡಿದ್ದಾ. ಅಂವಾ ಪೂರ್ತಿ ಸರ್ವೀಸ್ ಮಾಡಿ ಮುಂದ ಒಂದ ವರ್ಷ ಮೇ ಮುವತ್ತೊಂದಕ್ಕ ರಿಟೈರ್ಡ್ ಆದಾ. ಆವಾಗ ಸೆಂಟ್ರಲ್ ಗವರ್ವೆಂಟ್ ನೌಕರಿ ಮಾಡೋರದ ರಿಟೈರ್ಡಮೆಂಟ್ 58 ವರ್ಷಕ್ಕ ಇತ್ತ.

    ವಿಚಿತ್ರ ಅಂದರ ಅಂವಾ ದುಡದದ್ದ 33 ವರ್ಷ, ಅಗದಿ ಕೇಂದ್ರ ಸರ್ಕಾರಕ್ಕ ಅಧಿಕ ಬಾಗಣಕ್ಕ ಕೊಟ್ಟಂಗ ತನ್ನ ಸರ್ವೀಸ್ ಕೊಟ್ಟಾ, ಮುಂದ ರಿಟೈರ್ಡ್ ಆಗಿ 35 ವರ್ಷ ಪೆನ್ಶನ್ ತೊಗೊಂಡಾ. ಅಲ್ಲಾ ಆಗಿನ ಮಂದಿ ಭಾಳ ಗಟ್ಟಿ ಇರ್ತಿದ್ದರು, ಹಿಂಗಾಗಿ ಇಪ್ಪತೆôದ-ಮೂವತ್ತ ವರ್ಷ ದುಡಿತಿದ್ದರ ಮ್ಯಾಲೆ ಅಷ್ಟ ವರ್ಷ ಪೆನ್ಶನ್ನೂ ತೊಗೊತಿದ್ದರ ಬಿಡ್ರಿ. ಹಂಗ ಈಗ ನಮ್ಮಜ್ಜಿ cum ಅತ್ಯಾಗ ಇನ್ನೂ ಪೆನ್ಶನ್ ಬರ್ತದ ಆ ಮಾತ ಬ್ಯಾರೆ. ಏನ ಮಾಡ್ತೀರಿ?

    ಎಲ್ಲಾ ಬಿಟ್ಟ ಈಗ ಯಾಕ ಇದ ನೆನಪಾತ ಅಂದರ ನಾಳೆ ಬರೋ ಮೇ 31ಕ್ಕ ನಮ್ಮ ಬಾಜೂ ಮನಿ ಕೊಣ್ಣೂರ್ ಅಂಕಲ್ ರಿಟೈರ್ಡ್​ವೆುಂಟ್ ಅದ ಅಂತ ಇವತ್ತ ರಾತ್ರಿ ಪಾರ್ಟಿಗೆ ಕರದಾರ.

    ಹಂಗ ಈ ಸರ್ಕಾರಿ ಆಫಿಸನಾಗ ಕೆಲಸಾ ಮಾಡೊರ ರಿಟೈರ್ಡ್​ವೆುಂಟ್ ಆಗಬೇಕಾರ ಅವರೊಂದ ಪಾರ್ಟಿ ಕೊಡ್ತಾರ. ಮುಂದ actual ರಿಟೈರ್ಡ್​ವೆುಂಟ್ ದಿವಸ ಡಿಪಾರ್ಟಮೆಂಟನೋರ ಬ್ಯಾರೆ ಪಾರ್ಟಿ ಕೊಡ್ತಾರ. ಇವ ಎರಡೂ ಅರವತ್ತ ವರ್ಷದ ಶಾಂತಿ ಬಿಟ್ಟ ಮತ್ತ. ಅಲ್ಲಾ, 25-30 ವರ್ಷ ಜೊತಿಗೆ ಕೆಲಸಾ ಮಾಡಿರ್ತಾರ ಮತ್ತ ರಿಟೈರ್ಡ್ ಟೈಮ್ಾಗ ಅಷ್ಟು ಮಾಡಲಿಲ್ಲಾ ಅಂದರ ಹೆಂಗ?

    ನೋಡ್ರಿ ಹಂಗ ನಾಳೆ ಬರೋ ಮೇ ಮೂವತ್ತೊಂದಕ್ಕ ಯಾರರ ರಿಟೈರ್ಡ್ ಆಗೋರ ಇದ್ದರ ನಮ್ಮನ್ನೂ ಪಾರ್ಟಿಗೆ ಕರಿರಿ ಮತ್ತ. ಒಂದ ಹೂವಿನ ಬೂಕ್ಕೆ ಹಿಡ್ಕೊಂಡ ಬಂದ ಉಂಡ ಗಿಫ್ಟ ಕೊಟ್ಟ ಹೋಗ್ತೇವಿ.

    ಆಮ್ಯಾಲೆ ಮರದಿವಸನ ಅಂದರ ಜೂನ್ ಒಂದಕ್ಕ ಬರ್ಥಡೆ ಇರ್ತದ ಅದಕ್ಕ ಬ್ಯಾರೆ ಪಾರ್ಟಿ ಕೊಡಬೇಕ ಮತ್ತ.

    (ಲೇಖಕರು ಹಾಸ್ಯ ಬರಹಗಾರರು)

    VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..

    ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts