ಜೀವನದಲ್ಲಿ ನಾವೆಲ್ಲರೂ ಬೇರೆ ಬೇರೆ ರೀತಿಯ ಸಂದರ್ಭಗಳನ್ನು ಎದುರಿಸುತ್ತೇವೆ, ಕೆಲಸಗಳನ್ನು ಮಾಡುತ್ತೇವೆ. ಇಷ್ಟವಿಲ್ಲದ ಕೆಲಸಗಳನ್ನು ಮಾಡುವುದು ಕೆಲವೊಮ್ಮೆ ಅನಿವಾರ್ಯವೂ ಹೌದು. ಆದರೆ ಬಹಳಷ್ಟು ಸಲ ದೈನಂದಿನ ಜೀವನದಲ್ಲಿ ಮನಸ್ಸಿಗೆ ಒಪ್ಪದಿದ್ದರೂ, ದೇಹಕ್ಕೆ ಕಷ್ಟವೆನಿಸಿದರೂ ಅನೇಕ ಕೆಲಸಗಳನ್ನು ಮಾಡುತ್ತೇವೆ. ಅದರಿಂದ ಯಾವುದೇ ಲಾಭ ಇಲ್ಲದಿದ್ದರೂ ಕೇಳಿದೊಡನೆ ಹೂಂ ಎಂದ ತಪ್ಪಿಗೆ ಅದನ್ನು ಪೂರ್ಣಗೊಳಿಸಲು ಎಲ್ಲಿಲ್ಲದ ಶ್ರಮ ಪಡುತ್ತೇವೆ. ಯಾವುದೇ ಕೆಲಸವನ್ನಾದರೂ ಮಾಡಲು ನಕಾರ ಸೂಚಿಸಿದರೆ ಅದು ದೌರ್ಬಲ್ಯದ ಸಂಕೇತ ಎನ್ನುವಂತಹ ತಪ್ಪು ಕಲ್ಪನೆ ನಮ್ಮಲ್ಲಿ ಬಲವಾಗಿ ಬೇರೂರಿದೆ. ಸಂಶೋಧನೆಗಳ ಪ್ರಕಾರ ಮಹಿಳೆಯರಿಗೆ ಹೇಳಲು ಅತಿ ಕಷ್ಟದ ಶಬ್ದವೆಂದರೆ ಉಹೂಂ!
| ಡಾ. ಕೆ.ಎಸ್.ಚೈತ್ರಾ
ಕಾಲೇಜಿಗೆ ಹೋಗುವ ದಿಶಾಗೆ ವೀಕೆಂಡ್ ಟ್ರಿಪ್ಗೆ ಹೋಗಲು ಸ್ವಲ್ಪವೂ ಇಷ್ಟ ಇಲ್ಲ. ಆದರೂ ಸ್ನೇಹಿತರೆಲ್ಲರೂ ಕರೆದಾಗ ಹೂಂ ಎಂದು ಒಪ್ಪಿ ಬ್ಯಾಗ್ ತುಂಬುತ್ತಿದ್ದಾಳೆ. ನಲವತ್ತರ ಲೀನಾಗೆ ದಿನಾ ಆಫೀಸಿಗೆ ಹೋಗಿ ಬರುವುದೇ ಸಿಕ್ಕಾಪಟ್ಟೆ ಸುಸ್ತು. ಒಂದಿಷ್ಟು ವಿಶ್ರಾಂತಿ ಪಡೆಯಲು ಸಿಗುವುದೊಂದೇ ಭಾನುವಾರ. ಆ ದಿನವೇ ನೆಂಟರು ಬರುತ್ತೇವೆ ಎಂದು ಫೋನ್ ಮಾಡಿದಾಗ ಹೂಂ ಎಂದು ಅಡುಗೆಯ ತಯಾರಿಯಲ್ಲಿದ್ದಾಳೆ.ಅರವತ್ತರ ನಳಿನಿಗೆ ಕಾಲುನೋವು. ಆದರೆ ಸೊಸೆ ಹೇಳಿದ್ದಕ್ಕೆ ಹೂಂ ಎಂದು ಮೊಮ್ಮಕ್ಕಳನ್ನು ಬಸ್ಸ್ಟಾಪಿನಿಂದ ಕರೆದುಕೊಂಡು ಬರಲು ಕುಂಟಿಕೊಂಡೇ ಹೊರಟಿದ್ದಾರೆ.
ವಯಸ್ಸು, ಪರಿಸ್ಥಿತಿ, ಸಂದರ್ಭ ಎಲ್ಲವೂ ಬೇರೆಯೇ.. ಸಮಾನ ಅಂಶವೆಂದರೆ ಮನಸ್ಸಿನಲ್ಲಿ ಮಾಡಲು ಇಷ್ಟವಿಲ್ಲದಿದ್ದರೂ ಬಾಯಿ ನುಡಿದದ್ದು ಹೂಂ! ನಾವೆಲ್ಲರೂ ಅನೇಕ ಬಾರಿ ನಮ್ಮಿಷ್ಟವನ್ನು ಮೀರಿ ಹೂಂ ಎನ್ನುತ್ತೇವೆ. ಆದರೆ ಮಹಿಳೆಯರಲ್ಲಿ ಈ ರೀತಿ ಮನಸ್ಸಿಲ್ಲದಿದ್ದರೂ ಮೌನವಾಗಿ ಹೂಂ ಎನ್ನುವ ಪ್ರವೃತ್ತಿ ಅತೀ ಹೆಚ್ಚು. ಯಾರದ್ದೋ ಒತ್ತಾಯಕ್ಕೆ -ಮುಜುಗರಕ್ಕೆ ಕಟ್ಟುಬಿದ್ದು ಹೂಂ ಎನ್ನುವುದೇನೋ ಸರಿ. ಅದರಿಂದ ಆಗುವುದೇನು? ಮನಸ್ಸಿಗೆ ಇಡೀ ದಿನ ಕಿರಿಕಿರಿ! ಕೆಲಸವನ್ನು ಮಾಡಿದರೂ ಮನಸ್ಸಿನಲ್ಲಿಯೇ ಯಾಕೆ ಒಪ್ಪಿಕೊಂಡೆ, ನಾನು ಈ ರೀತಿ ಮಾಡಿದ್ದು ಸರಿಯಲ್ಲ. ನನ್ನನ್ನು ಎಲ್ಲರೂ ಬೇಕಾದಾಗ ಉಪಯೋಗಿಸಿಕೊಳ್ಳುತ್ತಾರೆ. ಹೀಗೆ ಮಾಡಬೇಕಿತ್ತು , ಹಾಗೆನ್ನಬೇಕಿತ್ತು !
ಛೇ ನಾನೆಷ್ಟು ಪಾಪದವಳು.. ಎನ್ನುವ ಬೇಸರ -ಸ್ವಾನುಕಂಪದಿಂದ ಒದ್ದಾಡುವಂತಾಗುತ್ತದೆ. ಈ ಮಾನಸಿಕ ತೊಳಲಾಟ, ಮಾಡುವ ಕೆಲಸದಲ್ಲಿಯೂ ಕಾಣಿಸಿಕೊಳ್ಳುತ್ತದೆ. ತೀವ್ರವಾದ ಒತ್ತಡ, ಅತೃಪ್ತಿಯಲ್ಲಿ ಕೆಲಸ ಮಾಡುವಾಗ ಆಸಕ್ತಿ ಇರುವುದಿಲ್ಲ. ಸಮಯವೂ ಹೆಚ್ಚು ಬೇಕು. ಹೀಗಾಗಿ ಕೆಲಸದ ಗುಣಮಟ್ಟ ಖಂಡಿತ ಕುಸಿಯುತ್ತದೆ. ಆದ್ದರಿಂದಲೇ ಇತರರನ್ನು ಮೆಚ್ಚಿಸಲು ಯಾವಾಗಲೂ ಹೂಂ ರಾಗ ಹಾಡುತ್ತಾ ,
ಅದನ್ನು ಪೂರ್ಣಗೊಳಿಸಲು ಶ್ರಮಪಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಶ್ರಮ ಉಂಟಾಗುತ್ತದೆ. ಇಂಥವರು ಒತ್ತಡ, ದಣಿವು, ಖಿನ್ನತೆ ಮತ್ತು ಅತೃಪ್ತಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಮನೋವಿಜ್ಞಾನದ ಅಧ್ಯಯನಗಳು ವರದಿ ಮಾಡಿವೆ. ಬದುಕಿನಲ್ಲಿ ಎಷ್ಟೋ ಬಾರಿ ನಮಗೆ ನಮ್ಮ ಸಮಯ ಮತ್ತು ಇಷ್ಟನಿಷ್ಟಗಳ ಅರಿವೇ ಇರುವುದಿಲ್ಲ .ಕುಟುಂಬದವರು, ಸಹೋದ್ಯೋಗಿಗಳು, ಪರಿಚಿತರು.. ಹೀಗೆ ಬೇರೆಯವರ ಬೇಡಿಕೆಗಳಿಗೆ ಹೂಂ ಎನ್ನುತ್ತಾ ಹೌದಮ್ಮಗಳಾಗಿ ಅದನ್ನು ಪೂರೈಸುವುದರಲ್ಲಿಯೇ ಹೆಣಗಾಡುತ್ತೇವೆ. ಹೀಗಾಗಿ ನಮ್ಮ ಸಂತೋಷವನ್ನು ಕಂಡುಕೊಳ್ಳುವ, ಬದುಕನ್ನು ಆಸ್ವಾದಿಸುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ. ಒಮ್ಮೆ ದೃಢ ಮನಸ್ಸಿನಿಂದ ಉಹೂಂ ಎನ್ನಲು ಕಲಿತರೆ ನಮ್ಮ ಸಲುವಾಗಿ ನಾವೇ ಸಮಯವನ್ನು ಕಂಡುಕೊಳ್ಳಲು ಸಾಧ್ಯ. ನಮ್ಮ ಬದುಕು ಕೇವಲ ಇತರರಿಗಾಗಿ ಮಾತ್ರವಲ್ಲ ; ನಮಗಾಗಿಯೂ ಹೌದು!
ಹೂಂ ಎನ್ನುವುದೇಕೆ?
ಹದಿಹರೆಯದವರಲ್ಲಿ, ಗುಂಪಿನೊಂದಿಗೆ ತಾನು ಒಂದಾಗಿ ಬೆರೆಯುವ ಪ್ರಯತ್ನದ ಭಾಗವಿದು. ಒಂದೊಮ್ಮೆ ನಕಾರ ಸೂಚಿಸಿದರೆ ಸ್ವಾರ್ಥಿ, ಗುಗ್ಗು, ಹಳೇಕಾಲದವಳು, ಬೋರಿಂಗ್ ಎಂದು ತನ್ನನ್ನು ಹೊರಗಿಡುತ್ತಾರೆ ಎನ್ನುವ ಹೆದರಿಕೆಯೂ ಇರುತ್ತದೆ. ಯುವಜನರಲ್ಲಿ ಎಷ್ಟೋ ಬಾರಿ ಗಟ್ಟಿಯಾಗಿ ತನಗಿಷ್ಟ ಇಲ್ಲದೇ ಇದ್ದಾಗ ಉಹೂಂ ಎನ್ನುವ ಸಾಮರ್ಥ್ಯ ಇಲ್ಲದಿರುವುದೇ, ನಿಧಾನವಾಗಿ ಶೋಷಣೆಗೆ ಮತ್ತು ದುಶ್ಚಟಕ್ಕೆ ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಬಹಳಷ್ಟು ಮಹಿಳೆಯರಿಗೆ ಉಹೂಂ ಹೇಳಿದರೆ ತಾವು ಕೆಟ್ಟವರಾಗುತ್ತೇವೆ ಎನ್ನುವ ಭಯ. ಬೇರೆಯವರು ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಆತಂಕವಂತೂ ಅತೀ ಹೆಚ್ಚು. ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಇತರರಿಂದ ಕೆಟ್ಟವರು ಎನಿಸಿಕೊಳ್ಳದೇ ಒಳ್ಳೆಯವರಾಗುವ ಸಹಜ ಬಯಕೆ ಇರುತ್ತದೆ. ಇನ್ನು ಕೆಲವು ಬಾರಿ ನಿರಾಕರಿಸುವ, ಬೇರೆಯವರಿಗೆ ನೋವಾಗದ ರೀತಿಯಲ್ಲಿ ಹೇಳುವ ರೀತಿಯೇ ಗೊತ್ತಾಗದೆ ಅದನ್ನು ತಪ್ಪಿಸಲು ಹೂಂ ಎನ್ನುವವರಿದ್ದಾರೆ. ಇದೆಲ್ಲದರ ಜೊತೆ ಬೇರೆಯವರಿಗೆ ಸಹಾಯ ಮಾಡುವ ಒಳ್ಳೆಯ ಉದ್ದೇಶದಿಂದಲೂ ಮನಸ್ಸಿಲ್ಲದಿದ್ದರೂ ಒಪ್ಪಿ ಕೊಳ್ಳುತ್ತಾರೆ. ಕಾರಣ ಏನೇ ಇರಲಿ; ಒಳಗೊಂದು ರೀತಿ ಹೊರಗೊಂದು ರೀತಿ ಮಾಡಿ ಹೆಣಗಾಡುವುದರಿಂದ ಎಲ್ಲಕ್ಕಿಂತ ಹೆಚ್ಚಿಗೆ ಹಾನಿ ನಮಗೇ! ಅದರ ಬದಲು ಹೌದು ಎನಿಸಿದಾಗ ಹೌದು, ಇಲ್ಲ ಎನ್ನಿಸಿದಾಗ ಇಲ್ಲ ಎಂದರೆ ನಮ್ಮಿಂದ ನಾವೇ ಬಚ್ಚಿಡುವ ಅಗತ್ಯವಿಲ್ಲ. ಹಾಗಾಗಿ ಅಗತ್ಯವಿದ್ದಾಗ ದೃಢವಾಗಿ ಉಹೂಂ ಎನ್ನುವುದು ನಮ್ಮ ಸಮಯ- ಸಾಮರ್ಥ್ಯ ಗೌರವಿಸುವ ಕ್ರಿಯೆ; ಅಳವಡಿಸಿಕೊಳ್ಳಬೇಕಾದ ಜೀವನ ಕೌಶಲ್ಯ.
ನಿರ್ಧಾರ ನಮ್ಮದು!
ಹಾಗಾದರೆ ಹೂಂ ಎನ್ನುವುದು ತಪ್ಪೇ? ಖಂಡಿತ ಇಲ್ಲ! ಮನುಷ್ಯರಾದ ನಾವು ಸಂಘಜೀವಿಗಳು. ಸಮಾಜದಲ್ಲಿ- ಕುಟುಂಬದಲ್ಲಿ ಎಲ್ಲರೊಡನೆ ಬದುಕಿ ಬಾಳಬೇಕು. ಅಂದಮೇಲೆ, ಇತರರೊಂದಿಗೆ ಹೊಂದಾಣಿಕೆ ಇರಬೇಕು. ಪರಸ್ಪರ ಬೆರೆಯಬೇಕು; ಕಷ್ಟ ಸುಖಗಳಿಗೆ ಒದಗಿ ಬರಬೇಕು. ಇವೆಲ್ಲವೂ ಸರಿಯೇ.. ಆದರೆ ಸಂದರ್ಭ- ಸಂಬಂಧ- ಪರಿಣಾಮ ಮತ್ತು ನಮ್ಮ ಸಾಮರ್ಥ್ಯ ಈ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟು ಹೂಂ ಅಥವಾ ಉಹೂಂ ಎಂದು ಹೇಳುವ ನಿರ್ಧಾರ ನಮ್ಮದಾಗಬೇಕು. ಅದನ್ನು ಬಿಟ್ಟು ಮನಸ್ಸಿನಲ್ಲಿ ಒಂದು ಹೇಳುವುದೊಂದು ಮಾಡಿ ಕಡೆಗೆ ಎಲ್ಲವನ್ನೂ ಅತೃಪ್ತಿಯಿಂದ ಅರೆಬರೆ ಮುಗಿಸುವುದು ಸರಿಯಲ್ಲ.
ಹೇಳುವುದು ಹೇಗೆ?
ಯಾವುದಾದರೂ ಬೇಡಿಕೆ- ಜವಾಬ್ದಾರಿಗೆ ನಕಾರ ಸೂಚಿಸುವಾಗ ಅದನ್ನು ಸರಿಯಾದ ರೀತಿಯಲ್ಲಿ ಹೇಳುವುದು ಮುಖ್ಯ. ಹೇಳಿದೊಡನೆ ಸಿಟ್ಟಿಗೆದ್ದು ಊಹುಂ ಎನ್ನುವುದು ಆಕ್ರಮಣಕಾರಿ ಎನಿಸಿ ಜಗಳಕ್ಕೆ ಕಾರಣವಾಗಬಹುದು. ಹಾಗೆಯೇ ಅಳುಕು ಹೊಂದಿ ಅರ್ಧ ಮನಸ್ಸಿನಿಂದ ನೆಪಗಳನ್ನು ಹುಡುಕಿ ಇಲ್ಲ ಎನ್ನುವುದು ಬಲಹೀನವೆನಿಸಿ, ಶೋಷಣೆಗೆ ದಾರಿಯಾಗಬಹುದು. ಇದರ ಬದಲು ಸರಳವಾಗಿ ಮತ್ತು ಸ್ಪಷ್ಟವಾಗಿ ಊಹೂಂ ಎಂದು ನಕಾರ ತಿಳಿಸುವುದು ಉತ್ತಮ. ಜೊತೆಗೆ ಇರುವ ಕಾರಣವನ್ನು ಪ್ರಾಮಾಣಿಕವಾಗಿ ತಿಳಿಸಿದರೆ ಅದನ್ನು ಒಪ್ಪುವುದು ಸುಲಭ. ಆದರೆ ಹೇಳಿದಷ್ಟು ಸುಲಭವಲ್ಲ ಊಹೂಂ ಎನ್ನುವುದು! ಹಾಗಾಗಿ ಯಾರಾದರೂ ಏನನ್ನಾದರೂ ಕೇಳಿದೊಡನೆ ಆ ಕ್ಷಣದಲ್ಲೇ ಉತ್ತರವನ್ನು ನೀಡಬೇಕೆಂದಿಲ್ಲ. ಸ್ವಲ್ಪ ಸಮಯ ಪಡೆದು, ನಿಧಾನವಾಗಿ ಯೋಚಿಸಿ ಸಾಧ್ಯತೆಗಳನ್ನು ಪರಿಶೀಲಿಸಿ ನಂತರ ಉತ್ತರ ನೀಡುವುದು ಒಳ್ಳೆಯದು. ಇನ್ನೊಬ್ಬರು ಏನೆಂದುಕೊಂಡಾರು ಎನ್ನುವ ಸಂಶಯ ಅಳುಕು ಬೇಡ. ನಿರ್ಣಯಿಸುವ ಮುನ್ನ ಸಂಶಯಗಳಿದ್ದರೆ ಧೈರ್ಯವಾಗಿ ಕೇಳಿ ಪರಿಹರಿಸಿಕೊಳ್ಳಬಹುದು. ನಂತರ ಅನ್ನಿಸಿದ್ದನ್ನು ಗೌರವ ಮತ್ತು ಕಾಳಜಿಯಿಂದಲೇ ತಿಳಿಸಿ, ಸಾಧ್ಯವಾದಲ್ಲಿ ಬದಲಿ ಪರಿಹಾರವನ್ನು ಸೂಚಿಸುವುದು ಒಳ್ಳೆಯದು. ಇತರರ ಅಭಿಪ್ರಾಯದಂತೆ ನಾವಲ್ಲ; ನಮ್ಮ ಮನಸ್ಸಾಕ್ಷಿಯಂತೆ ನಮ್ಮ ಬದುಕು ಮತ್ತು ಸಂತೋಷ ಎನ್ನುವುದು ಮುಖ್ಯ.
ಜನಗಣತಿ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ: ಸುಪ್ರೀಂ ಕೋರ್ಟ್ಗೆ ಅಫಿಡವಿಟ್