ರಾಘವ ಶರ್ಮ ನಿಡ್ಲೆ, ನವದೆಹಲಿ
ಮುಂಗಾರು ಮುನಿಸಿನಿಂದ ಕಾವೇರಿ ಕಣಿವೆ ಬತ್ತಿರುವ ಕರ್ನಾಟಕದ ಜಲವಾಸ್ತವವನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರಗಳು ಸೂಚಿಸಿದ ಬಳಿಕ, ಸುಪ್ರೀಂ ಕೋರ್ಟ್ನಲ್ಲೂ ರಾಜ್ಯದ ಪಾಲಿಗೆ ನಿರಾಸೆ ತಪ್ಪದಂತಾಗಿದೆ. ನೆರೆ ರಾಜ್ಯಕ್ಕೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂಬ ಆದೇಶಕ್ಕೆ ತಡೆಯಾಜ್ಞೆ ನೀಡಲು ಸವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಆದರೆ, ನೀರಿನ ಪ್ರಮಾಣ ಹೆಚ್ಚಿಸಬೇಕೆಂಬ ತಮಿಳುನಾಡಿನ ಪಟ್ಟಿಗೆ ಮಣಿಯದಿರುವುದು ಮಾತ್ರ ಸ್ವಲ್ಪ ಸಮಾಧಾನ ತಂದಿದೆ. ಪ್ರಾಧಿಕಾರದ ಆದೇಶ ಮರುಪರಿಶೀಲಿಸಬೇಕೆಂಬ ಕರ್ನಾಟಕದ ಮನವಿ ಹಾಗೂ ನೀರಿನ ಪ್ರಮಾಣ ಏರಿಸಬೇಕು ಎಂಬ ತಮಿಳುನಾಡಿನ ಅರ್ಜಿಗಳನ್ನು ನ್ಯಾ. ಬಿ. ಆರ್. ಗವಾಯಿ ನೇತೃತ್ವದ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಗುರುವಾರ ವಜಾಗೊಳಿಸಿತು. ‘ಕಾವೇರಿ ನಿಯಂತ್ರಣ ಸಮಿತಿ ಮತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ಕೃಷಿ, ಜಲತಜ್ಞರಿದ್ದಾರೆ. ಅವರಿಗೆ ವಾಸ್ತವ ಪರಿಸ್ಥಿತಿಗಳ ಅರಿವಿದ್ದು, ನೀರು ಹಂಚಿಕೆ ಸಂಬಂಧ ಸೂಕ್ತ ತೀರ್ವನಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ, ನೀರಿನ ಪ್ರಮಾಣ ಏರಿಸಬೇಕೆಂಬ ತಮಿಳುನಾಡು ವಾದ ಒಪ್ಪಲಾಗುವುದಿಲ್ಲ.
ನೀರು ಹಂಚಿಕೆ ಕುರಿತ ಗಣಿತದ ಲೆಕ್ಕಗಳನ್ನು ಹೇಳಬೇಡಿ. ಸಂಕಷ್ಟ ಪರಿಸ್ಥಿತಿ ಅರಿತು ಪ್ರಮಾಣ ನಿರ್ಧಾರ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು. ನೀರು ಹಂಚಿಕೆ ಪ್ರಮಾಣ ಹಿಗ್ಗಿಸಬೇಕೆಂಬ ತಮಿಳುನಾಡು ವಾದದ ಯಾವ ಅಂಶಗಳನ್ನೂ ಆದ್ಯತೆಗೆ ತೆಗೆದುಕೊಳ್ಳದ ನ್ಯಾಯಪೀಠ, ಈ ಸಂದರ್ಭದಲ್ಲಿ ನೀರು ಬಿಡುಗಡೆ ಪ್ರಮಾಣ ಏರಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಱಪ್ರಾಧಿಕಾರದ ಸೂಚನೆ ಮುಂದುವರಿಯಲಿದೆ. ತಜ್ಞರು ನೀಡಿರುವ ಆದೇಶಗಳನ್ನು ನಾವು ಪುರಸ್ಕರಿಸುತ್ತೇವೆ’ ಎಂದು ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಪ್ರಕಟಿಸಿತು.
ತಮಿಳುನಾಡು ವಾದ: ಕಾವೇರಿ ನೀರು ನಿಯಂತ್ರಣ ಸಮಿತಿ ಮೊದಲಿಗೆ 6400 ಕ್ಯೂಸೆಕ್ ನೀರು ಬಿಡುಗಡೆ ಬಗ್ಗೆ ರ್ಚಚಿಸಿ, ನಂತರ ಅದನ್ನು 5000 ಕ್ಯೂಸೆಕ್ಗೆ ನಿಗದಿಪಡಿಸಿತು. ಯಾವ ಮಾನದಂಡದಲ್ಲಿ ನೀರನ್ನು ಕಡಿಮೆ ಮಾಡಲಾಯ್ತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, 6,400 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ತ.ನಾಡು ಪರ ವಕೀಲ ಮುಕುಲ್ ರೋಹಟ್ಗಿ ವಾದಿಸಿದರು.
ಆದೇಶ ಪಾಲಿಸಿದ್ದೇವೆ: ಕರ್ನಾಟಕದ ವಾದ ಪ್ರಾಧಿಕಾರ ನೀಡಿರುವ ಎಲ್ಲ ಆದೇಶಗಳನ್ನು ನಾವು ಪಾಲಿಸಿದ್ದೇವೆ. ನೀರು ಹಂಚಿಕೆಯಲ್ಲಿ ಕಡಿಮೆ ಮಾಡಿಲ್ಲ. ಕರ್ನಾಟಕದಲ್ಲಿ ಮುಂಗಾರು ವೈಫಲ್ಯ ಆಗಿರುವುದರಿಂದಲೇ ನೀರು ಬಿಡುಗಡೆಗೆ ಸಮಸ್ಯೆಯಾಗಿದೆ. ತಮಿಳುನಾಡಿಗೆ ಅಕ್ಟೋಬರ್ನಲ್ಲಿ ಉತ್ತಮ ಹಿಂಗಾರು ಮಳೆಯಾಗುತ್ತದೆ. ಆದರೆ, ನಮಗೆ ಆ ಭಾಗ್ಯವಿಲ್ಲ. ಈ ವಿಷಯವನ್ನೂ ನ್ಯಾಯಪೀಠ ಗಮನಿಸಬೇಕು ಎಂದು ರಾಜ್ಯದ ಪರ ವಾದ ಮಂಡಿಸಿದ ವಕೀಲ ಶ್ಯಾಮ್ ದಿವಾನ್ ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಯತ್ನಿಸಿದರು.
ತಜ್ಞರ ತಂಡ ರಾಜ್ಯಕ್ಕೆ ಬಂದು ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು ಎಂದು ರಾಜ್ಯದ ಪರ ಹಿರಿಯ ವಕೀಲ ಮೋಹನ್ ಕಾತರಕಿ ದನಿಗೂಡಿಸಿದರು. ಪ್ರತಿವಾದಿಸಿದ ರೋಹಟ್ಗಿ, ಸಮಿತಿ ಮತ್ತು ಪ್ರಾಧಿಕಾರವು ಕರ್ನಾಟಕದ ಪರಿಸ್ಥಿತಿಗಳನ್ನು ಪರಿಗಣಿಸಿ ನೀರು ಹಂಚಿಕೆ ಪ್ರಮಾಣ ನಿಗದಿಪಡಿಸಿದೆ. ಆದರೆ, ತಮಿಳುನಾಡಿನ ಬೇಡಿಕೆ, ಅಗತ್ಯಗಳನ್ನು ಏಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು.
ಮೇಕೆದಾಟಿಗೆ ಮೊದಲ ಮೆಟ್ಟಿಲು?
ಯಥಾಸ್ಥಿತಿ ಆದೇಶ ಪ್ರಕಟಿಸಿದ ವೇಳೆ ಮೇಕೆದಾಟು ಯೋಜನೆ ಅಗತ್ಯದ ಬಗ್ಗೆ ರಾಜ್ಯದ ವಕೀಲ ಶ್ಯಾಮ್ ದಿವಾನ್ ನ್ಯಾಯಪೀಠದ ಗಮನ ಸೆಳೆದರು. ತಮಿಳುನಾಡಿನ ಪಾಲನ್ನು ನೀರನ್ನು ಖಚಿತಪಡಿಸಿ, ಉಳಿದ ನೀರನ್ನು ಸಂಗ್ರಹಿಸುವುದು ನಿಮ್ಮ ಉದ್ದೇಶವೇ ಎಂದು ನ್ಯಾಯಪೀಠ ಕೇಳಿತು. ಈ ಯೋಜನೆಯಿಂದ ತಮಿಳುನಾಡಿಗೂ ಲಾಭವಿದೆ, ಸಂಕಷ್ಟ ವರ್ಷಗಳನ್ನು ನಿಭಾಯಿಸಲೂ ಇದು ಸಹಕಾರಿಯಾಗುವುದು ಎಂದು ದಿವಾನ್ ವಿವರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿನಾಡು ವಕೀಲರು, ಜಲಸಂಕಷ್ಟ ವರ್ಷ ಬೇರೆ, ಮೇಕೆದಾಟು ಯೋಜನೆ ಬೇರೆ ಎಂದು ವಿರೋಧಿಸಿದರು.
ಮೇಕೆದಾಟು ಯೋಜನೆ ಬಗ್ಗೆ ತಜ್ಞರ ಸಮಿತಿ ಅಥವಾ ಪ್ರಾಧಿಕಾರದ ಮುಂದೆಯೇ ನೀವು ಪ್ರಸ್ತಾಪಿಸಿ ಎಂದು ಕರ್ನಾಟಕಕ್ಕೆ ನ್ಯಾಯಪೀಠ ಸಲಹೆ ನೀಡಿದಾಗ, ಇದನ್ನು ಕೈಗೆತ್ತಿಕೊಳ್ಳುವ ಅಧಿಕಾರ ಪ್ರಾಧಿಕಾರಕ್ಕಿಲ್ಲ ಎಂದು ತಮಿಳುನಾಡು ವಕೀಲರು ಹೇಳಿದರು. ಆದರೆ, ಪ್ರಾಧಿಕಾರಕ್ಕೆ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಿ, ಸೂಕ್ತ ಶಿಫಾರಸು ಮಾಡುವ ಅಧಿಕಾರವಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೇ ಸುಪ್ರೀಂಕೋರ್ಟ್ಗೆ ತಿಳಿಸಿದ್ದರು. ‘ಅಂತಿಮವಾಗಿ, ಮೇಕೆದಾಟು ವಿಷಯದಲ್ಲಿ ಸುಪ್ರೀಂಕೋರ್ಟ್ ಯಾವುದೇ ನಕಾರಾತ್ಮಕ ಅಭಿಪ್ರಾಯ ಹೊರಹಾಕದಿರುವುದು ಆಶಾದಾಯಕ ಬೆಳವಣಿಗೆ. ಪ್ರಾಧಿಕಾರದಲ್ಲಿ ಈ ವಿಷಯದ ಚರ್ಚೆಗೆ ಕರ್ನಾಟಕ ಮತ್ತೆ ಒತ್ತಾಯಿಸಬೇಕು’ ಎಂದು ರಾಜ್ಯದ ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.