ಇಸ್ಲಾಮಾಬಾದ್: ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರೆ, ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿರುವುದು ಗೊತ್ತಿದೆ. ಆದರೆ ಈ ಬಾರಿಯೂ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅರ್ಷದ್ ನದೀಮ್ 90 ಮೀಟರ್ ಆಚೆಗೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ಓದಿ: ಅಬಕಾರಿ ನೀತಿ ಪ್ರಕರಣ; ದೆಹಲಿ ಮಾಜಿ ಡಿಸಿಎಂಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್
ಅರ್ಷದ್ ನದೀಮ್ ಅವರ ಕುಟುಂಬ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚಾನು ಗ್ರಾಮದಲ್ಲಿ ವಾಸಿಸುತ್ತಿದೆ. ಅರ್ಷದ್ ನದೀಮ್ ತಂದೆ ಮುಹಮ್ಮದ್ ಅಶ್ರಫ್ ಗ್ರಾಮದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಸಾಧಿಸಿದ ಮಗನ ಸಾಧನೆ ಬಗ್ಗೆ ನದೀಮ್ ತಂದೆ ಮುಹಮ್ಮದ್ ಅಶ್ರಫ್ ಹೇಳಿದ್ದು ಹೀಗೆ.. ಮೂರು ಕೋಣೆಯಿರುವ ನಮ್ಮ ಮನೆಯಲ್ಲಿ ಮಗನ ಪಂದ್ಯ ವೀಕ್ಷಿಸಲು ಎಲ್ಸಿಡಿ ಟೆಲಿವಿಷನ್ ಅಳವಡಿಸಲಾಗಿತ್ತು. ನನ್ನ ಮಗ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಸಿದ್ದಾನೆ. ಇದು ವಿಶ್ವದ ಅತಿ ದೊಡ್ಡ ಆಟ ಎಂದು ಜನರು ಹೇಳುತ್ತಾರೆ. ಒಲಿಂಪಿಕ್ಸ್‌ನಲ್ಲಿ ಗೆದ್ದಿರುವುದು ದೊಡ್ಡ ವಿಷಯವಾಗಿದೆ ಎಂದಿದ್ದಾರೆ.
ನಾನು ಮೊದಲಿನಿಂದಲೂ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅರ್ಷದ್ ಆಗಾಗ್ಗೆ ನನ್ನೊಂದಿಗೆ ಕೆಲಸ ಮಾಡಲು ಬರುತ್ತಿದ್ದ. ಜತೆಗೆ ಗ್ರಾಮದಲ್ಲಿ ನೇಜಾ ಬಾಜಿ (ಟೆಂಟ್ ಪೆಗ್ಗಿಂಗ್)ಅನ್ನು ಗಮನಿಸುತ್ತಿದ್ದ. 2010ರ ಸುಮಾರಿಗೆ ಅರ್ಷದ್ ನನ್ನ ಬಳಿ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ಕೊಡಿಸುವಂತೆ ಕೇಳಿದ್ದರು. ನಮ್ಮ ಹಳ್ಳಿಯ ಮೈದಾನದಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ನಂತರ ಅವರ ಇಬ್ಬರು ಸಹೋದರರು ಅಥ್ಲೆಟಿಕ್ಸ್ಗೆ ಸೇರಲು ಸಲಹೆ ನೀಡಿದರು ಎಂದು ಅರ್ಷದ್ ತಂದೆ ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅಲ್ಲದೆ, ನನ್ನ ಮಗನಿಗೆ ಮಿಯಾನ್ ಚನ್ನು ನಗರದಲ್ಲಿ ಹೊಸ ಮನೆ ಸಿಕ್ಕಿದೆ. ಅದು ಸಂಪೂರ್ಣ ಸುಸಜ್ಜಿತವಾಗಿದೆ. ನಾನು ನನ್ನ ಜೀವನದುದ್ದಕ್ಕೂ ಕೂಲಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಮಗ ಎಷ್ಟು ದೂರ ಬಂದಿದ್ದಾನೆ ಎಂಬುದನ್ನು ನೋಡಿ ಸಂತೋಷವಾಯಿತು ಎಂದು ಮುಹಮ್ಮದ್ ಅಶ್ರಫ್ ಹೇಳಿದರು. ಸ್ಪರ್ಧೆಯಲ್ಲಿ ಅರ್ಷದ್ ನದೀಮ್ 92.97 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದು ಒಲಂಪಿಕ್ ಪದಕ ಗೆದ್ದ ಮೊದಲ ಪಾಕಿಸ್ತಾನಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎನಿಸಿಕೊಂಡರು.(ಏಜೆನ್ಸೀಸ್)
ಅರ್ಷದ್ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ