

ವಿಜಯವಾಣಿ ಸುದ್ದಿಜಾಲ ಹೊಸಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಬಿ ಡ್ಯಾಂಗೆ ಮಂಗಳವಾರ ಆಗಮಿಸುತ್ತಿದ್ದಂತೆ ಜಲಾಶಯದಲ್ಲಿ ಕ್ರಸ್ಟ್ಗೇಟ್ ಅಳವಡಿಸುವ ಕೆಲಸವೂ ಆರಂಭವಾಗಿದೆ. ಹೈದರಾಬಾದ್ ಮೂಲದ ನ್ಯಾಷನಲ್ ಡ್ಯಾಮ್ ಗೇಟ್ ಎಕ್ಸ್ಪರ್ಟ್ ಕನ್ಹಯ್ಯ ನಾಯ್ಡು ಈಗಾಗಲೆ ಜಲಾಶಯಕ್ಕೆ ಬಂದಿದ್ದು, ನೂತನವಾಗಿ ಸಿದ್ಧಗೊಂಡ ಕ್ರಸ್ಟ್ ಗೇಟ್ ವೀಕ್ಷಿಸಿದ್ದು, ಅಳವಡಿಕೆ ಬಗ್ಗೆ ಪರೀಶಿಲನೆ ನಡೆಸಿದ್ದಾರೆ. ಜಲಾಶಯದ ಮೇಲೆ ರೈಲು ಟ್ರ್ಯಾಕ್ ಮಾದರಿಯಲ್ಲಿ ಫ್ಲಾಟ್ ಫಾಮ್ರ್ ನಿರ್ವಿುಸಿ, ಕ್ರೇನ್ ಸಹಾಯದಿಂದ ನಿಯಮಿತ ತೂಕದ ಗೇಟ್ಗಳನ್ನು ಅಳವಡಿಸುವ ಕೆಲಸಕ್ಕೆ ಬುಧವಾರ ಚಾಲನೆ ನೀಡಲಾಗುತ್ತಿದೆ. ನೀರಿನ ರಭಸ, ಗೇಟ್ ತಡೆಯುವಿಕೆ ಆಧಾರದ ಮೇಲೆ ಹಂತಹಂತವಾಗಿ ಕೆಲಸ ನಡೆಯಲಿದೆ.
ಕನ್ಹಯ್ಯ ನಾಯ್ಡು, ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಎಂ.ಡಿ., ಕರ್ನಾಟಕ ಹಾಗೂ ಆಂಧ್ರ ನೀರಾವರಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್, ನ್ಯಾಷನಲ್ ಡ್ಯಾಮ್ ಸೇಫ್ಟಿ ಏಜೆನ್ಸಿ ಮುಖ್ಯ ಇಂಜಿನಿಯರ್, ಜೆಎಸ್ಡಬ್ಲ್ಯುನ ಎಕ್ಸ್ಪರ್ಟ್, ಹಿಂದುಸ್ಥಾನ್ ಸ್ಟೀಲ್ ವರ್ಕ್, ನಾರಾಯಣ ಸ್ಟೀಲ್ ವರ್ಕ್ ಗೇಟ್ ತಜ್ಞರೊಂದಿಗೆ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಈಗ ಹಾಳಾಗಿರುವ ಗೇಟ್ 60 ಅಡಿ ಉದ್ದ ಇದೆ. ಇಲ್ಲಿ ತಲಾ 12 ಅಡಿಯ ಐದು ಸೆಗ್ಮೆಂಟ್ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದಕ್ಕೆ ಜಿಂದಾಲ್ ಸೇರಿ ವಿವಿಧೆಡೆ ಸೆಗ್ಮೆಂಟ್ಗಳ ತಯಾರಿ ನಡೆಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸದೆ, ನೀರನ್ನು ಉಳಿಸಿಕೊಂಡು ತುಂಗಭದ್ರಾ ಜಲಾಶಯಕ್ಕೆ ಹೊಸಗೇಟ್ ಅಳವಡಿಸಬಹುದು ಎಂಬುದಾಗಿ ತಜ್ಞರು ಸಲಹೆ ನೀಡಿದ್ದಾರೆ. ನೀರು ಉಳಿಸಿ ಗೇಟ್ ಅಳವಡಿಕೆ ತಜ್ಞರ ಸಂಕಲ್ಪ ಸಫಲವಾಗಲಿ ಎಂದು ಕೃಷಿಕರು ಪ್ರಾರ್ಥಿಸುತ್ತಿದ್ದಾರೆ.
ಪ್ರಯತ್ನ ನಮ್ಮದು, ಫಲ ದೇವರದು: ಜಲಾಶಯದ ಗೇಟ್ ಆಯುಷ್ಯ 40 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸೋದು ಕಷ್ಟ ಎಂದಿರುವ ಕನ್ಹಯ್ಯ ನಾಯ್ಡು, 48 ಟನ್ ಭಾರದ ಗೇಟ್ ಒಂದೇ ಬಾರಿ ಇಳಿಸೋದು ಸಹ ಕಷ್ಟ. ಐವತ್ತು ಟನ್ ಭಾರದ ಐದು ಪೀಸ್ ಕಬ್ಬಿಣ ಗೇಟ್ ಒಂದೊಂದು ಇಳಿಸುತ್ತೇವೆ. ಮೂರ್ನಾಲ್ಕು ಕಡೆ ಗೇಟ್ ನಿರ್ವಣವಾಗುತ್ತಿದೆ. ಬುಧವಾರದಿಂದ ಒಂದೊಂದೇ ಪೀಸ್ಗಳನ್ನು ಹಾಕಲಾಗುವುದು. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡುತ್ತೇವೆ. ನೀರು ಉಳಿಸುವ ಎಲ್ಲ ಪ್ರಯತ್ನ ನಡೆಯುತ್ತಿದೆ. ಇದು ತಾತ್ಕಾಲಿಕ ಆಗಿದ್ದು, ನೀರು ಕಡಿಮೆಯಾದ ಮೇಲೆ ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಕನ್ಹಯ್ಯ ನಾಯ್ಡು ಹೇಳಿದ್ದಾರೆ.
ನೀರು ಉಳಿಸುವ ಪ್ರಯತ್ನ: ತುಂಗಭದ್ರಾ ಜಲಾಶಯ ಕರ್ನಾಟಕಕ್ಕೆ ಮಾತ್ರವಲ್ಲ. ಆಂಧ್ರ, ತೆಲಂಗಾಣಕ್ಕೂ ಜೀವನಾಧಾರವಾಗಿದೆ. ಜಲಾಶಯದಲ್ಲಿನ ನೀರನ್ನು ಉಳಿಸುವ ಪ್ರಯತ್ನಕ್ಕೆ ನಾವು ಕೈ ಜೋಡಿಸುತ್ತೇವೆ ಎಂದು ಆಂಧ್ರದ ಆರ್ಥಿಕ ಮಂತ್ರಿ ಪಯ್ಯಾವುಲ ಕೇಶವ ಹೇಳಿದರು. ತುಂಗಭದ್ರಾ ಜಲಾಶಯ ಕಾಲುವೆ ಮತ್ತು ನದಿಗಳ ಮೂಲಕ ನಮಗೆ ನೀರು ಒದಗಿಸುತ್ತದೆ. ಸಾವಿರಾರು ರೈತರು ಇದೇ ನೀರಿನಿಂದ ಬದುಕುತ್ತಿದ್ದಾರೆ. ಕರ್ನಾಟಕ ರೈತರ ಜತೆ ನಮ್ಮ ರೈತರ ಹಿತವೂ ಅಡಗಿದೆ. ಹೀಗಾಗಿ ಜಲಾಶಯ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಮೂರು ರಾಜ್ಯಗಳಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಮ್ಮಿಂದ ಅನುದಾನ, ತಾಂತ್ರಿಕತೆ ಸೇರಿ ಎಲ್ಲ ರೀತಿಯಿಂದಲೂ ಕರ್ನಾಟಕ ಸರ್ಕಾರಕ್ಕೆ ನೆರವು ನೀಡುತ್ತೇವೆ ಎಂದು ಹೇಳಿದರು.
ಸಿಎಂ ಜತೆ ರ್ಚಚಿಸಿದ ಆಂಧ್ರ ಸಚಿವರು: ಆಂಧ್ರಪ್ರದೇಶದ ಜಲಸಂಪನ್ಮೂಲ ಸಚಿವ ನಿಮ್ಮಲ ರಾಮಾನಾಯ್ಡು ಮತ್ತು ಆರ್ಥಿಕ ಖಾತೆ ಮಂತ್ರಿ ಪಯ್ಯಾವುಲ ಕೇಶವ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗೇಟ್ ಅಳವಡಿಕೆ, ಜಲಾಶಯದ ನೀರು ರಕ್ಷಣೆ ಕುರಿತು ಚರ್ಚೆ ನಡೆಸಿದರು. ಆಂಧ್ರ ಸಿಎಂ ರೇವಂತರೆಡ್ಡಿ ಜತೆ ದೂರವಾಣಿಯಲ್ಲೂ ಮಾತನಾಡಿಸಿದರು. ತುಂಗಭದ್ರಾ ಜಲಾಶಯದ ರಕ್ಷಣೆಗೆ ಆಂಧ್ರ, ತೆಲಂಗಾಣ ಸರ್ಕಾರಗಳ ಎಲ್ಲ ಸಹಕಾರ ನೀಡುತ್ತೇವೆ ಎಂದ ಸಚಿವರಿಗೆ ಪ್ರತಿಕ್ರಿಯಿಸಿದ ನಾವು ಕೂಡ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನಿಮ್ಮ ಪಾಲಿನ ನೀರು ಉಳಿಸಿ, ಮೂರು ರಾಜ್ಯದ ರೈತರನ್ನು ಕಾಪಾಡುವ ಭರವಸೆ ನೀಡಿದರು. ಆಂಧ್ರ ನಿಯೋಗದಲ್ಲಿ ಆಂಧ್ರ ಎಂಪಿ ನಾಗರಾಜು, ಕಲ್ಯಾಣದುರ್ಗ ಶಾಸಕ ಅಮಿಲಿನೇನಿ ಸುರೇಂದ್ರಬಾಬು, ಗುಂತಕಲ್ ಶಾಸಕ ಕುಮ್ಮನೂರು ಜಯರಾಂ, ಅನಂತಪುರ ಜಿಲ್ಲಾಧಿಕಾರಿ ಡಾ.ವಿನೋದಕುಮಾರ ಇದ್ದರು.
ಬೆಂಗಳೂರು: ರಾಜ್ಯ ಸರ್ಕಾರ ಹಣ ಪಡೆದು ಪೋಸ್ಟಿಂಗ್ ನೀಡುವುದು ನಿಲ್ಲಿಸಿದರೆ ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಕೊಚ್ಚಿ ಹೋದಂತಹ ಗಂಭೀರ ಪ್ರಕರಣಗಳು ನಿಲ್ಲುತ್ತವೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಘಟನೆ ಅತ್ಯಂತ ಗಂಭೀರವಾದದ್ದು. ಅಧಿಕಾರಿಗಳ ವರ್ಗಾವಣೆ ಮಾಡುವಾಗ ಹಣ ತೆಗೆದುಕೊಂಡು ವರ್ಗ ಮಾಡುವ ಕೆಲಸ ಬಿಡಿ ಎಂದು ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು. ದುಡ್ಡು ಕೊಟ್ಡು ವರ್ಗಾವಣೆ ಮಾಡಿಸಿಕೊಳ್ಳುವ ಅಧಿಕಾರಿಗೆ ಕೆಲಸದ ಕಡೆ ಗಮನ ಎಲ್ಲಿರುತ್ತದೆ. ಕೊಟ್ಟ ದುಡ್ಡನ್ನು ಮರಳಿ ವಸೂಲಿ ಮಾಡಿಕೊಳ್ಳುವ ಕಡೆ ಅವನ ಗಮನ ಇರುತ್ತದೆ. ಅಲ್ಲಿರುವಷ್ಟರಲ್ಲಿ ಅಷ್ಟೂ ಹಣವನ್ನು ಸಂಗ್ರಹ ಮಾಡುವ ಗುರಿ ಹೊಂದಿರುತ್ತಾನೆ. ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿ ಎಲ್ಲ ಉನ್ನತ ಅಧಿಕಾರಿಗಳಿಗೆ ದುಡ್ಡು ತೆಗೆದುಕೊಂಡು ಪೋಸ್ಟಿಂಗ್ ಕೊಡಲಾಗುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ವಹಣೆಯಲ್ಲಿ ಮುಂದೆ ತಜ್ಞರ ಸಲಹೆ ಪಾಲಿಸಲಾಗುವುದು. ನೀರು ಉಳಿಸಿಕೊಳ್ಳಲು ಆದ್ಯತೆ ನೀಡಲಾಗಿದ್ದು, ಬುಧವಾರದಿಂದಲೇ ಗೇಟ್ ಅಳವಡಿಕೆ ಕಾರ್ಯ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಮಂಗಳವಾರ ತುಂಗಭದ್ರಾ ಅಣೆಕಟ್ಟೆಯಲ್ಲಿ ಕೊಚ್ಚಿಹೋದ 19ನೇ ಕ್ರಸ್ಟ್ಗೇಟ್ ಸ್ಥಳ ವೀಕ್ಷಿಸಿ ಮಾತನಾಡಿದರು. ತಜ್ಞ ಕನ್ಹಯ್ಯ ನಾಯ್ಡು ಅವರೊಂದಿಗೆ ರ್ಚಚಿಸಲಾಗಿದೆ. ಈಗಾಗಲೆ ಗೇಟ್ ತಯಾರಿ ನಡೆದಿದೆ. ತಾತ್ಕಾಲಿಕ ಗೇಟ್ ಅಳವಡಿಸಿ ಸಮಸ್ಯೆ ಸರಿಪಡಿಸಲಾಗುವುದು. ಆಂಧ್ರ, ತೆಲಂಗಾಣ ಸರ್ಕಾರಗಳು ಸಹ ನಮಗೆ ಕೈ ಜೋಡಿಸಿವೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಟಿಬಿ ಡ್ಯಾಂ ನಿರ್ವಣವಾಗಿ 70 ವರ್ಷವಾಗಿದೆ. ಇನ್ನು ಮುಂದೆ ತಜ್ಞರ ಸಲಹೆಯಂತೆ ಜಲಾಶಯ ನಿರ್ವಹಣೆ ಮಾಡುತ್ತೇವೆ. ಸದ್ಯ ನೀರು ನಿಲ್ಲಿಸಲಾಗುವುದು. ಉಳಿದಿದ್ದನ್ನು ಆಮೇಲೆ ಯೋಜಿಸಲಾಗುವುದು. 63 ಟಿಎಂಸಿ ಅಡಿಯಷ್ಟು ನೀರು ಉಳಿಯಲಿದ್ದು, ಮೊದಲ ಬೆಳೆಗೆ ತೊಂದರೆ ಆಗದು. ರೈತರು ಆತಂಕ ಪಡುವುದು ಬೇಡ ಎಂದರು. ಅವಘಡ ಆಗಿರದಿದ್ದರೆ ನಾನಿಂದು ತುಂಗಭದ್ರೆಗೆ ಬಾಗಿನ ಅರ್ಪಿಸಬೇಕಿತ್ತು. ಜಲಾಶಯ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ನಾಯಕರು ರಾಜಕೀಯವಾಗಿ ರ್ಚಚಿಸುತ್ತಿದ್ದಾರೆ. ನಾನು ರಾಜಕೀಯ ಮಾತನಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಗೇಟ್ ತುಂಡಾಗಿ ಹೋಗಿದೆ. ಅದರಲ್ಲಿ ರಾಜ್ಯದ ಪಾತ್ರವೇನಿದೆ? ಟಿಬಿ ಬೋರ್ಡ್ ಕೇಂದ್ರದ ಅಧೀನದಲ್ಲಿದೆ. ಕೇಂದ್ರವೇ ಅಧಿಕಾರಿಗಳನ್ನು ನೇಮಿಸುತ್ತದೆ. ನಿರ್ವಹಣೆ ಜವಾಬ್ದಾರಿ ಅವರದೇ. ಸದ್ಯ ಇಂಥವರೇ ತಪ್ಪು ಮಾಡಿದ್ದಾರೆಂದು ಹೇಳಲಾರೆ. ಬಿಜೆಪಿಯವರಿಗೆ ಗೂಬೆ ಕೂರಿಸುವುದೆ ಕೆಲಸ. ನಾವು ಯಾರ ಮೇಲೂ ಗೂಬೆ ಕೂರಿಸಲ್ಲ. ಮುಂದೆ ಮಳೆ ಬರುವ ನಿರೀಕ್ಷೆ ಇದ್ದು, ಜಲಾಶಯ ಭರ್ತಿಯಾಗಲಿದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.